ಭೂಮನಗುಂಡ ಜನರಿಗೆ ಶುದ್ಧ ಕುಡಿವ ನೀರು ಒದಗಿಸಿ

ದೇವದುರ್ಗ.ನ.೦೯-ತಾಲೂಕಿನ ಅರಕೇರಾ ಹೋಬಳಿಯ ಭೂಮನಗುಂಡ ಗ್ರಾಮದ ಜನರಿಗೆ ಶುದ್ಧ ಕುಡಿವ ನೀರು ಪೂರೈಕೆ ಮಾಡುವಂತೆ ಒತ್ತಾಯಿಸಿ ಪಟ್ಟಣದ ಮಿನಿವಿಧಾನಸೌಧದಲ್ಲಿ ತಹಸೀಲ್ದಾರ್ ಶ್ರೀನಿವಾಸ್ ಚಾಪೇಲ್‌ಗೆ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಮುಖಂಡರು ಮನವಿ ಸಲ್ಲಿಸಿದರು.
ಗ್ರಾಮದಲ್ಲಿ ಕಲುಷಿತ ಕುಡಿವ ನೀರಿನ ಸಮಸ್ಯೆ ದಿನೇದಿನೆ ಹೆಚ್ಚಾಗುತ್ತಿದೆ. ಲೋಟದಲ್ಲಿ ನೀರು ತುಂಬಿಟ್ಟರೆ ನೀರಿಗೆ ಪೊರೆ ಬರುತ್ತದೆ. ಇದೇ ನೀರನ್ನು ಗ್ರಾಮಸ್ಥರು ಕುಡಿಯಲು, ಅಡುಗೆ ಮಾಡಲು ಹಾಗೂ ಗೃಹಪಯೋಗಕ್ಕೆ ಬಳಸುತ್ತಾರೆ. ಇದರಿಂದ ಮೈ ಕೈ ನೋವು, ಕೀಲು ನೋವು, ಹೊಟ್ಟೆ ಬೇನೆ ಸೇರಿ ಇತರೆ ಸಮಸ್ಯೆಗಳು ಕಾಡುತ್ತಿವೆ.
ಗ್ರಾಮದ ಸಮಸ್ಯೆಗಳ ಬಗ್ಗೆ ಕೆಲ ದಿನಗಳ ಸ್ಥಳೀಯ ಗ್ರಾಪಂ ಪಿಡಿಒಗೆ ಮನವಿ ಸಲ್ಲಿಸಿದರೂ ಹಾರಿಕೆ ಉತ್ತರ ನೀಡಿ ಕೈತೊಳೆದುಕೊಂಡಿದ್ದು ಈವರೆಗೆ ಪರಿಹಾರ ಕಲ್ಪಿಸಿಲ್ಲ. ಅಶುದ್ಧ ನೀರು ಕುಡಿದು ಮಕ್ಕಳು ಹಾಗೂ ವಯೋವೃದ್ಧರಲ್ಲಿ ನಾನಾ ರೋಗಿಗಳು ಬರುತ್ತಿವೆ. ಇದರಿಂದ ಗ್ರಾಮಸ್ಥರಿಗೆ ಆತಂಕವಿದ್ದು, ಆಸ್ಪತ್ರೆಗೆ ಅಲೆಯುವಂತಾಗಿದೆ ಎಂದು ದೂರಿದರು.
ಕೂಡಲೇ ಹೊಸಬೋರ್‌ವೆಲ್ ಕೊರೆದು ಶುದ್ಧ ಕುಡಿವ ನೀರು ಪೂರೈಕೆ ಮಾಡಬೇಕು. ಹಲವು ದಿನಗಳಿಂದ ಬಂದ್ ಆಗಿರುವ ಶುದ್ಧ ಕುಡಿವ ನೀರಿನ ಘಟಕ ಆರಂಭಿಸಬೇಕು. ಗಡಸು ನೀರು ಪರೀಕ್ಷೆ ಮಾಡಿಸಬೇಕು. ನೀರಿನ ಟ್ಯಾಂಕ್ ಕಾಲಕಾಲಕ್ಕೆ ಸ್ವಚ್ಛಗೊಳಿಸಿ ಶುದ್ಧನೀರು ಜನರಿಗೆ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಕಾರ್ಯದರ್ಶಿ ಮಲ್ಲನಗೌಡ ಅಂಚೆಸುಗೂರು, ಶಿವಪ್ಪ ಕಾಶಿಣಿಗೇರಾ, ಮಲ್ಲಪ್ಪ ಬಂಡೇಮಳೆ, ನರಸಪ್ಪ ಕಾಶಿಣಿಗೇರಾ, ಹನುಮಯ್ಯ ಮುಂಡೆ, ಈರಣ್ಣ ಕಮಲದಿನ್ನಿ, ಚನ್ನಬಸವ ಮುಂಡೆ, ಬಸವರಾಜ ಮುಂಡೆ ಇತರರಿದ್ದರು.