ಭೂದಾನ ಚಳುವಳಿಯ ಹರಿಕಾರ ಸಂತ ವಿನೋಬ ಭಾವೆ

ಕಲಬುರಗಿ:ಸೆ.11: ಮಹಾತ್ಮ ಗಾಂಧೀಜಿಯವರ ನೆಚ್ಚಿನ ಶಿಷ್ಯರಾಗಿ, ಅವರ ತತ್ವ-ಸಿದ್ಧಾಂತಗಳನ್ನು ಪಾಲಿಸಿಕೊಂಡು ಬಂದವರು ಸಂತ ವಿನೋಬ ಭಾವೆಯವರು. ಅಗತ್ಯಕ್ಕಿಂತ ಹೆಚ್ಚು ಭೂಮಿಯನ್ನು ಹೊಂದಿದ್ದ ಅನೇಕ ಜಮೀನುದಾರರ ಮನವೊಲಿಸಿ, ಭೂರಹಿತರಿಗೆ ಭೂಮಿಯನ್ನು ನೀಡುವ ಭೂದಾನ ಚಳುವಳಿಯ ಹರಿಕಾರರಾಗಿ, ಶ್ರೇಷ್ಠ ಸಮಾಜ ಸುಧಾರಕರಾಗಿ ಅಮೋಘವಾದ ಕೊಡುಗೆಯನ್ನು ನೀಡಿದ್ದಾರೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.

      ನಗರದ ಮಹಾದೇವ ನಗರದಲ್ಲಿನ ಶಿವಾ ವಿದ್ಯಾಮಂದಿರದಲ್ಲಿ 'ಬಸವೇಶ್ವರ ಸಮಾಜ ಸೇವಾ ಬಳಗ'ದ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ 'ಸಂತ ವಿನೋಬ ಭಾವೆಯವರ ಜನ್ಮದಿನಾಚರಣೆ'ಯಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಮಾತನಾಡುತ್ತಿದ್ದ ಅವರು, ನಮ್ಮ ರಾಜ್ಯದಲ್ಲಿ ದಿ.ದೇವರಾಜ ಅರಸು ಅವರು 'ಊಳುವವನೇ ಭೂ ಒಡೆಯ' ನೀತಿಯನ್ನು ಅನುಷ್ಠಾನಕ್ಕೆ ತಂದು ಅನೇಕರಿಗೆ ಅನಕೂಲ ಮಾಡಿಕೊಟ್ಟರು. ಇಂತಹ ಕ್ರಾಂತಿಕಾರಿ ಸುಧಾರಣೆಗೆ ಭಾವೆಯವರು ಪ್ರೇರಕ ಶಕ್ತಿಯಾಗಿದ್ದಾರೆ ಎಂದರು.
 ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಗಾರಂಪಳ್ಳಿ, ದೇವೇಂದ್ರಪ್ಪ ಗಣಮುಖಿ, ಪರಮೇಶ್ವರ ಬಿ.ದೇಸಾಯಿ, ಸಿದ್ದರಾಮ ಸೋಮೇಶ ಹಾಗೂ ಶಾಲೆಯ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.