ಭೂದಾನಿಗಳ ವಿರುದ್ಧ ಜಾತಿನಿಂದನೆ ದೂರು ಕೇಸ್ ಹಿಂಪಡೆಯುವಂತೆ ಸಾರ್ವಜನಿಕರು, ವಕೀಲರಿಂದ ಅಧಿಕಾರಿಗಳಿಗೆ ಮನವಿ

ಕೂಡ್ಲಿಗಿ.ನ.5:-ಪಟ್ಟಣದ ಭೂದಾನಿಗಳೆಂದೇ ಹೇಳಲಾಗುವ ಅಂಗಡಿ ಕುಟುಂಬದ ವಿರುದ್ಧ ಖಾಸಗಿ ವಿದ್ಯಾಸಂಸ್ಥೆಯ ಮಾಲೀಕರು ನೀಡಿದ ಜಾತಿನಿಂದನೆ ದೂರು ಹಿಂಪಡೆಯಬೇಕು ಸಮಸ್ಯೆಗೆ ಕಾರಣವಾಗಿರುವ ಭೂಗಡಿಯನ್ನು ಅಳತೆಮಾಡಿಸಿ ಸಮಸ್ಯೆ ಪರಿಹರಿಸುವಂತೆ ಪಟ್ಟಣ ಸಾರ್ವಜನಿಕ ಮುಖಂಡರು ಹಾಗೂ ವಕೀಲರು ತಹಸೀಲ್ದಾರ್ ಮತ್ತು ಡಿ ವೈ ಎಸ್ ಪಿ ಗೆ ಬುಧವಾರ ಮನವಿ ಸಲ್ಲಿಸಿದರು. ಪಟ್ಟಣದ ಎಸ್ ಎ ವಿ ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸುಮಾರು 7ಎಕರೆಯಷ್ಟು ಭೂದಾನ ಮಾಡಿದ್ದು ಕಾಲೇಜಿಗೆ ಡಿ ಎಂ ಎಫ್ ಫಂಡ್ ನಲ್ಲಿ ಕಂಪೌಂಡ್ ನಿರ್ಮಾಣ ಮಾಡಲು ಸ್ಥಳ ಪರಿಶೀಲನೆ ಮಾಡಲು ಸರ್ವೇ ಇಲಾಖೆ ಗುತ್ತಿಗೆದಾರರು ಹಾಗೂ ಕಾಲೇಜಿನ ಪ್ರಾಚಾರ್ಯರು ಸರ್ವೇ ಮಾಡುವ ಸಂದರ್ಭದಲ್ಲಿ ಖಾಸಗಿ ವಿದ್ಯಾಸಂಸ್ಥೆಯ ಮುಖ್ಯಸ್ಥರು ಬಂದು ವಿನಾಕಾರಣ ಯಾವುದೇ ಗಲಾಟೆ ಮಾಡದ ಭೂದಾನಿಗಳ ವಿರುದ್ಧ ಹಾಗೂ ಪ್ರಾಚಾರ್ಯರು ಮತ್ತು ಇತರರ ಮೇಲೆ ಜಾತಿ ನಿಂದನೆ ದೂರು ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದು ಅದನ್ನು ದೂರು ನೀಡಿದವರು ಹಿಂಪಡೆಯಬೇಕು ಸಮಸ್ಯೆಗೆ ಕಾರಣವಾದ ಭೂಗಡಿ ಇತ್ಯರ್ಥಗೊಳಿಸಿಕೊಡಬೇಕು ಎಂದು ಕೂಡ್ಲಿಗಿ ಪಟ್ಟಣದ ಸಾರ್ವಜನಿಕರ ಮುಖಂಡರು ಪಕ್ಷಾತೀತ ನಾಯಕರು ಯುವ ಮುಖಂಡರು ಖಾಸಗಿ ವಿದ್ಯಾಸಂಸ್ಥೆ ಮಾಲೀಕರು ನೀಡಿದ ಜಾತಿನಿಂದನೆ ದೂರು ಖಂಡಿಸಿ ಪಟ್ಟಣದ ಮದಕರಿ ವೃತ್ತದಲ್ಲಿ ಪ್ರತಿಭಟಿಸಿ ಕೂಡ್ಲಿಗಿ ತಾಲೂಕ ಕಚೇರಿಯ ಗ್ರೇಡ್ 2 ತಹಸೀಲ್ದಾರ್ ಅರುಂಧತಿ ನಾಗಾವಿ ಮತ್ತು ಕೂಡ್ಲಿಗಿ ಪೊಲೀಸ್ ಉಪವಿಭಾಗದ ಡಿ ವೈ ಎಸ್ ಪಿ ಹರೀಶ್ ರೆಡ್ಡಿಗೆ ಮನವಿ ಸಲ್ಲಿಸಿದರು. ಮತ್ತು ಅದೇ ರೀತಿ ಕೂಡ್ಲಿಗಿ ವಕೀಲರು ಸಹ ಭೂದಾನಿ ಕುಟುಂಬದವರಲ್ಲಿ ಒಬ್ಬರಾಗಿರುವ ಅಂಗಡಿ ಶಿವರಾಜ್ ವಿರುದ್ಧ ಖಾಸಗಿ ವಿದ್ಯಾಸಂಸ್ಥೆ ಮಾಲೀಕರು ನೀಡಿದ ಜಾತಿ ನಿಂದನೆ ದೂರು ಸರಿಯಲ್ಲದ್ದು ಅದನ್ನು ತಕ್ಷಣ ಪೊಲೀಸರು ತನಿಖೆ ಮಾಡಿ ಭೂದಾನಿ ಕುಟುಂಬದ ವಿರುದ್ಧ ದಾಖಲಿಸಿರುವ ಪ್ರಕರಣ ತಕ್ಷಣ ಇತ್ಯರ್ಥ ಗೊಳಿಸುವಂತೆ ಕೂಡ್ಲಿಗಿ ಡಿ ವೈ ಎಸ್ ಪಿ ಗೆ ಅವರ ಕಚೇರಿ ಮುಂದೆ ವಕೀಲರ ಸಮೂಹ ಸೇರಿ ಮನವಿ ಸಲ್ಲಿಸಿದರು. ಜಾತಿನಿಂದನೆ ದೂರು :ಪಟ್ಟಣದ ಸರ್ವೇ ನಂಬರ್ 766/ಎ -2 ನ ವಿಸ್ತೀರ್ಣ 2ಎಕರೆ ಜಮೀನನಲ್ಲಿ ಶ್ರೀ ಮಂಜುನಾಥ ಸ್ವಾಮಿ ಬಂಜಾರ ಟ್ರಸ್ಟ್ ನಲ್ಲಿ ಬಿಇಡಿ. ಡಿಇಡಿ, ಐಟಿಐ ಮತ್ತು ಪಿಯುಸಿ ಕಾಲೇಜು ನಡೆಸುತ್ತಿದ್ದು ಈ ಕಾಲೇಜಿನ ಪಕ್ಕದಲ್ಲಿ ಕೂಡ್ಲಿಗಿ ಸರ್ಕಾರಿ ಪದವಿಕಾಲೇಜು ಇದ್ದು ಈ ಹಿಂದೆ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರು ನಾವು ಹಾಕಿದ್ದ ತಂತಿ ಬೇಲಿ ಕಿತ್ತುಹಾಕಿ ಅತಿಕ್ರಮಣ ಮಾಡಲು ಪ್ರಯತ್ನಿಸಿದ್ದಾರೆಂದು ಈ ಬಗ್ಗೆ ಕೋರ್ಟಿನಲ್ಲಿ ದಾವೆ ಹೂಡಿದ್ದು ಹಾಲಿ ಕೋರ್ಟ್ ತೀರ್ಪು ಸ್ಟೇಟಸ್ಕ್ಯೂ ಅನ್ವಯವಾಗುವಂತೆ ನೀಡಿದ್ದು ಆದಾಗ್ಯೂ ನವೆಂಬರ್ 3ರಂದು ಮದ್ಯಾಹ್ನ ಶಿವರಾಜ್, ಗಣೇಶ್ ವೀರೇಶ್, ಬಸವರಾಜ್, ಜುಬೇರಾ, ಗುರುರಾಜ, ಮತ್ತು ಇತರೆ 17ರಿಂದ 20ಜನರು ಸೇರಿ ಅತಿಕ್ರಮಣ ಮಾಡಿ ದೌರ್ಜನ್ಯವಾಗಿ ಪ್ರವೇಶಿಸಿ ಅವಾಚ್ಯ ಶಬ್ದಗಳಿಂದ ಜಾತಿ ಬಗ್ಗೆ ಮಾತನಾಡಿದ್ದಾರೆಂದು ವಿದ್ಯಾಸಂಸ್ಥೆ ಮುಖ್ಯಸ್ಥೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿತ್ತು.
ಪ್ರತಿಭಟನೆನಿರತರು:
ಈ ಪ್ರಕರಣ ಭೂದಾನಿಗಳ ವಿರುದ್ಧ ದಾಖಲಾಗಿದ್ದರಿಂದ ಬುಧವಾರ ಪಟ್ಟಣದ ಮುಖಂಡರು ಯುವಮುಖಂಡರಾದ ಕಾವಲಿಶಿವಪ್ಪನಾಯಕ, ಜಿಂಕಲ್ ನಾಗಮಣಿ,ಗುಳಿಗಿ ವೀರೇಂದ್ರ, ವಕೀಲರಾದ ಶೈಲಜಾ, ಕೆ.ಎಂ. ತಿಪ್ಪೇಸ್ವಾಮಿ, ಟಿ ಜಿ ಮಲ್ಲಿಕಾರ್ಜುನ ಗೌಡ, ಭೀಮೇಶ್, ಸಣ್ಣಕೊತ್ಲಾಪ್ಪ , ಬಂಗಾರು ಹನುಮಂತು, ದುರುಗೇಶ, ಮಂಜುನಾಥ, ಹಡಗಲಿ ವೀರಭದ್ರಪ್ಪ, ಸಚಿನ್ ಕುಮಾರ್, ವಿಕ್ಕಿ, ಕೆ ಎಂ ವೀರೇಶ, ಸುರೇಶ, ಮಾಳ್ಗಿ ರಾಘವೇಂದ್ರ, ಗುರು, ಹಾಗೂ ಇತರೇ ಮುಖಂಡರು ಉಪಸ್ಥಿತರಿದ್ದರು ಕೆಲವು ಮುಖಂಡರು ಭೂದಾನಿಗಳ ವಿರುದ್ಧ ಜಾತಿ ನಿಂದನೆ ಪ್ರಕರಣ ಖಂಡಿಸಿ ಮಾತನಾಡಿದ್ದರು ಕೂಡ್ಲಿಗಿ ಡಿ ವೈ ಎಸ್ ಪಿ ಸೇರಿದಂತೆ ಉಪವಿಭಾಗದ ಸರಹದ್ದಿನ ಠಾಣಾ ಸಿಪಿಐ, ಪಿಎಸ್ಐ ಹಾಗೂ ಸಿಬ್ಬಂದಿಗಳು ಬಂದೋಬಸ್ತ್ ಏರ್ಪಡಿಸಿದ್ದರು.