ಭೂತಾಯಿಯ ಋಣ ತೀರಿಸಲು ಹೋರಾಟ ಅನಿವಾರ್ಯ

ಸಂಜೆವಾಣಿ ವಾರ್ತೆ

ದಾವಣಗೆರೆ ಡಿ.13: ಭೂ ತಾಯಿಯ ಋಣ  ತೀರಿಸಲು ನೆಲ, ಜಲ, ಭಾಷೆಗೆ ಧಕ್ಕೆ ಬಂದಾಗ ಹೋರಾಟ ಮಾಡುವುದು ಅನಿವಾರ್ಯ ಎಂದು ಕರವೇ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ತಿಳಿಸಿದರು. ಕರ್ನಾಟಕ ರಕ್ಷಣಾ ವೇದಿಕೆಯ ಹರಿಹರದ ನೂತನ ನಗರ ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ  ಅವರು    1999 ರಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯು ಬೆಂಗಳೂರಿನ ಅವಿನ್ಯೂ ರಸ್ತೆಯಲ್ಲಿರುವ ಕೃಷ್ಣಯ್ಯ ಶೆಟ್ಟಿ ಶಾಲೆಯಲ್ಲಿ ಸಣ್ಣ ಪ್ರಮಾಣದಲ್ಲಿ ಪ್ರಾರಂಭವಾಗಿ ಇಂದು ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ 70 ಲಕ್ಷ ಜನ ಸದಸ್ಯರನ್ನು ಒಳಗೊಂಡಿರುವ ಏಕೈಕ ಸಂಘಟನೆ  ಆಗಿದೆ. ನಮ್ಮ ರಾಜ್ಯದಲ್ಲಿರುವ ಕೆಲವು ಕನ್ನಡಿಗರ ಕನ್ನಡದ ಸೋಗಲಾಡಿತನದಿಂದ ಕನ್ನಡ ಭಾಷೆಗೆ ಕುತ್ತು ಬಂದಿದೆ, ಅಂತಹ ಕನ್ನಡಿಗರಿಗೆ  ಪ್ರತಿ ತಾಲೂಕು, ನಗರ, ಹೋಬಳಿ,  ಗ್ರಾಮ, ಮಟ್ಟದಲ್ಲಿ ಎಚ್ಚರಿಸುವ ಸಲುವಾಗಿ ಮತ್ತು ಜಾಗೃತಿ ಮೂಡಿಸುವ ಮೂಲಕ ಕರವೇ, ಸಂಘಟನೆಯನ್ನು ಬಲಪಡಿಸಲು ಮುಂದಾಗಿದೆ. ಭೂತಾಯಿಯ ಋಣವನ್ನು ತೀರಿಸುವುದು  ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ, ಇಲ್ಲದಿದ್ದರೆ ಅನ್ಯ ರಾಜ್ಯದವರು ನಮ್ಮ ಮೇಲೆ ದಬ್ಬಾಳಿಕೆ ನಡೆಸಲು ಮುಂದಾಗುತ್ತಾರೆ ಅದನ್ನು ತಡೆಗಟ್ಟುವ ಸಲುವಾಗಿ ಕರವೇ ಈ ದೃಢ ನಿರ್ಧಾರ ಕೈಗೊಂಡಿದೆ, ಸಂಘಟನೆಯನ್ನು ಬಲಿಷ್ಠಗೊಳಿಸಿ ಜಾಗೃತಿ ಮೂಡಿಸುವುದು, ನಾಡು, ನುಡಿ, ಸಂಸ್ಕೃತಿ, ಸಂಸ್ಕಾರ ಕನ್ನಡಿಗರ ಬದುಕು ಕಟ್ಟುವ ನಿಟ್ಟಿನಲ್ಲಿ ಹೋರಾಟ ಮಾಡುವುದು ಕರವೇ ಮೂಲ ಉದ್ದೇಶವಾಗಿದೆ ಎಂದರು. ಕರವೇ ಸಂಘಟನೆ ಟಿ.ಎ. ನಾರಾಯಣಗೌಡರ ನೇತೃತ್ವದಲ್ಲಿ ಉದಯವಾಗಿ ನಿರಂತರ ಹೋರಾಟದಿಂದ   ಬೆಂಗಳೂರಿನಲ್ಲಿ ತಮಿಳರ ಹಾವಳಿ,  ಬಳ್ಳಾರಿಯಲ್ಲಿ ತೆಲುಗರ ಹಾವಳಿ,  ಬೆಳಗಾವಿಯಲ್ಲಿ ಮರಾಠಿಗರ ಹಾವಳಿ, ಕಾಸರಗೋಡಿನಲ್ಲಿ ಮಲಯಾಳಿಗಳ ಹಾವಳಿ, ದಬ್ಬಾಳಿಕೆಗಳಿಗೆ ಕಡಿವಾಣ ಹಾಕಲಾಗಿದೆ ಎಂದು ತಿಳಿಸಿದರು.  ಇತ್ತೀಚೆಗೆ ರಾಜ್ಯದಲ್ಲಿ ಉತ್ತರ ಭಾರತೀಯರ ಹಾವಳಿ ಹೆಚ್ಚಾಗುತ್ತಿದ್ದು ಅವರ ವಿರುದ್ಧ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದರು.