ಭೂತಾಯಿಗೆ ಮಹಾ ಪೂಜೆಗೈದ ರೈತಾಪಿ ವರ್ಗ

ತಾಳಿಕೋಟೆ:ಜ.12: ಗುರುವಾರರಂದು ತಾಳಿಕೋಟೆ ಪಟ್ಟಣ ಅಲ್ಲದೇ ಸುತ್ತಮುತ್ತಲಿನ ಗ್ರಾಮಗಳಲ್ಲಿಯ ರೈತಾಪಿ ಜನರು ಎಳ್ಳ ಅಮವಾಸ್ಯೆಯ ನಿಮಿತ್ಯವಾಗಿ ತಮ್ಮ ತಮ್ಮ ಜಮೀನುಗಳಿಗೆ ತೆರಳಿ ಭೂತಾಯಿಗೆ ಈ ಹಿಂದಿನಿಂದ ಬಂದ ಸಂಪ್ರದಾಯದಂತೆ ಬನ್ನಿ ಗಿಡಕ್ಕೆ ಹಾಗೂ ಭೂತಾಯಿಗೆ ಅನ್ನ ಸಂತರ್ಪಣೆ ಮಾಡುವದರೊಂದಿಗೆ ಕಾಯಿ ಕರ್ಪೂರ ಎಡೆ ಲೋಬಾನ ಊದಬತ್ತಿಗಳಿಂದ ಮಹಾ ಪೂಜೆ ಸಲ್ಲಿಸಿದರು.
ಈ ಭಾರಿ ಮಳೆ ಇಲ್ಲದೇ ಬರಗಾಲ ಆವರಿಸಿದ್ದರಿಂದ ರೈತರ ಮೊಗದಲ್ಲಿ ಸಂತಸ ಇಲ್ಲದಿದ್ದರೂ ಕೂಡಾ ತಮ್ಮ ಜಮೀನುಗಳಲ್ಲಿ ಬಿತ್ತಲಾಗಿ ಚಿಗರುತ್ತಿರುವ ಹಾಗೂ ಚಿಗುರಿದ ಬೆಳೆಗಳಾದ ಜೋಳ, ಕಡ್ಲಿ, ಗೋದಿ, ಹತ್ತಿ, ಅಜವಾನ, ತೋಗರಿ ನೇವಣಿ, ಹೆಸರು, ಅಲಸಂದಿ, ಹುರಳಿ, ಶೇಂಗಾ, ಬೆಳೆಗಳಿಗೆ ಹುಲುಸಾಗಿ ಬರಲಿ ಎಂಬ ಉದ್ದೇಶದಿಂದ ಈ ಹಿಂದಿನಿಂದ ಸಾಗಿಬಂದ ವಾಡಿಕೆಯಂತೆ ಮಹಾಪೂಜೆ ಗೈದು ಭೂತಾಯಿಗೆ ನಮಿಸಿ ಬೇಡಿಕೊಂಡು ಹುಲುಸಾಗಿ ಬೆಳೆ ಬರಲಿ ಎಂದು ಆಸಿಸಿರುವದು ಕಂಡುಬಂದಿತು.
ಎಳ್ಳಾ ಅಮವಾಸ್ಯೆಯ ನಿಮಿತ್ಯವಾಗಿ ಮನೆಯಲ್ಲಿ ತಯಾರಿಸಿದ ಪಕ್ವಾನ ಭೋಜನವಾದ ಕರಿಗಡಬು, ಸಜ್ಜೆ ರೋಟ್ಟಿ, ಪುಂಡಿಪಲ್ಲೆ, ಬದನೆಕಾಯಿ ಪಲ್ಲೆ, ಉಸುಳಿ ಮಸರು, ಚಟ್ನಿ, ಚಪಾತಿ, ಎಳ್ಳೆ ಹೋಳಿಗೆ, ಶೇಂಗಾ ಹೋಳಿಗೆ ಶೆಂಡಿಗೆ ಹಪ್ಪಳ, ಸಜ್ಜೆ ಕಡಬು, ಬಾನುಮಸರು, ಬೆಣ್ಣೆ, ತುಪ್ಪ, ಉತ್ತರ ಕರ್ನಾಟಕದ ಹೆಸರು ಪಡೆದಂತಹ ರೈತಾಪಿಜನರ ಪಕ್ವಾನ ಭೋಜನ ಸವಿದು ಯಾವುದೇ ಬೇದ ಭಾವವಿಲ್ಲದೇ ಸಹಬಾಗಿಗಳಾಗಿ ಜನತೆ ಭೋಜನಕೂಟದಲ್ಲಿ ಪಾಲ್ಗೊಂಡು ತೃಪ್ತಿಪಟ್ಟುಕೊಂಡರು.
ಕೆಲವು ರೈತಾಪಿಜನರು ಬೆಳಿಗ್ಗೆಯಿಂದಲೇ ಎತ್ತುಗಳನ್ನು ಶ್ರೀಂಗರಿಸುವದರೊಂದಿಗೆ ಗಂಟೆ ನಾದಿನ ಎತ್ತಿನ ಬಂಡಿಯಲ್ಲಿ ತೆರಳುತ್ತಿದ್ದರೆ ಇನ್ನೂ ಕೆಲವರು ತಮ್ಮ ತಮ್ಮ ಟ್ಯಾಕ್ಟರ್‍ಗಳ ಮೂಲಕ ಹಾಗೂ ಕಾರು, ದ್ವಿಚಕ್ರ ವಾಹನಗಳಿಂದ ತಮ್ಮ ತಮ್ಮ ಸಂಬಂಕರಿಗೆ ಹಾಗೂ ಹಿತೈಷಿಗಳಿಗೆ, ಗೆಳೆಯರಿಗೆ ಜಮೀನುಗಳಿಗೆ ಕರೆದುಕೊಂಡು ಹೋಗಿ ಪಕ್ವಾನ ಊಟ ಬಡಿಸಿ ಸಾಯಂಕಾಲ ಗೋದೋಳಿ ಮಹಾ ಮೋಹರ್ತದಲ್ಲಿ ಮರಳಿ ತಮ್ಮ ತಮ್ಮ ಮನೆಗಳಿಗೆ ಆಗಮಿಸಿದ್ದು ಕಂಡುಬಂದಿತು.
ಎಳ್ಳಾ ಅಮವಾಸ್ಯೆ ನಿಮಿತ್ಯವಾಗಿ ತಾಳಿಕೋಟೆ ಪಟ್ಟಣದಲ್ಲಿಯ ವ್ಯಾಪಾರಸ್ಥರು ತಮ್ಮ ತಮ್ಮ ಜಮೀನುಗಳಿಗೆ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿಕೊಂಡು ಹೋಗಿದ್ದರಿಂದ ಪಟ್ಟಣದ ಮುಖ್ಯರಸ್ತೆಗಳೆಲ್ಲವೂ ಸಾಯಂಕಾಲದ ವರೆಗೆ ಬಿಕೋ ಎನ್ನುತ್ತಿದ್ದವು.
ರೈತರ ಹಬ್ಬಗಳಲ್ಲಿ ಎಳ್ಳಾ ಅಮವಾಸ್ಯೆಯು ಪ್ರಮುಖ ಹಬ್ಬವಾಗಿ ಪರಿಣಮಿಸಿದೆ. ದೀಪಾವಳಿ ಹಬ್ಬ ವ್ಯಾಪಾರಸ್ಥರಿಗೆ ದೊಡ್ಡ ಹಬ್ಬವಾಗಿ ಪರಿಣಮಿಸಿದಂತೆ ರೈತಾಪಿ ಜನತೆಗೆ ಎಳ್ಳಾ ಅಮವಾಸ್ಯೆ ದೊಡ್ಡಹಬ್ಬವಾಗಿ ಪರಿಣಮಿಸಿದೆ.