ಭೂತನಾಳ ಕೆರೆ ತುಂಬಿಸಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ ಸಚಿವ ಡಾ. ಎಂ.ಬಿ. ಪಾಟೀಲ ಸೂಚನೆ

ಸಂಜೆವಾಣಿ ವಾರ್ತೆ,
ವಿಜಯಪುರ,ಫೆ.18 :ಮಳೆಯ ಅಭಾವದಿಂದ ಭೂತನಾಳ ಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು, ವಿಜಯಪುರ ನಗರದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಪರ್ಯಾಯ ಮಾರ್ಗದಿಂದ ತಿಡಗುಂದಿ ಅಕ್ವಾಡೆಕ್ಟ್ ಮೂಲಕ ಭೂತನಾಳ ಕೆರೆಗೆ ನೀರು ತುಂಬಿಸಿ ನೀರು ಪೂರೈಸುವ ಕಾಮಗಾರಿಯನ್ನು ತೀವ್ರಗತಿಯಲ್ಲಿ ಕೈಗೊಂಡು ಮೂರು ದಿನಗಳಲ್ಲಿ ಪೂರ್ಣಗೊಳಿಸುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಖಾತೆ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ವಿಜಯಪುರ ನಗರಕ್ಕೆ ನೀರು ಸರಬರಾಜು ಮಾಡುವ ಭೂತನಾಳ ಕೆರೆಯನ್ನು ತಿಡಗುಂದಿ ಅಕ್ವಾಡೆಕ್ಟ್ ಮೂಲಕ ನೀರು ತುಂಬಿಸುವ ಪರ್ಯಾಯ ಕಾಮಗಾರಿ ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವರು, ಕಾಮಗಾರಿಯನ್ನು ತೀವ್ರಗತಿಯಲ್ಲಿ ಕೈಗೊಂಡು ಪೂರ್ಣಗೊಳಿಸಿ ನಗರದ ಕುಡಿಯುವ ನೀರಿನ ಸಮಸ್ಯೆಯನ್ನು ಪ್ರಥಮಾದ್ಯಮತೆಯ ಮೇಲೆ ನೀಗಿಸಲು ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.
ಸದÀ್ಯದಲ್ಲೇ ಕೆರೆತುಂಬುವ ಯೋಜನೆಯಡಿ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಪ್ರಥಮಾದ್ಯತೆಯಾಗಿ ಪರ್ಯಾಯ ವ್ಯವಸ್ಥೆಯಲ್ಲಿ ಭೂತನಾಳ ಕೆರೆಗೆ ನೀರು ತುಂಬಿಸಲು ತಿಡಗುಂದಿ ಕಾಲುವೆ ಮೂಲಕ ಕೆರೆಗೆ ನೀರು ಹರಿಸಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳುಂತೆ ಸೂಚನೆ ನೀಡಿದ ಅವರು, ಪರ್ಯಾಯವಾಗಿ ಕೆರೆಗೆ ನೀರು ತುಂಬಿಸುವ ಕಾಮಗಾರಿಯನ್ನು ಯುದ್ದೋಪಾದಿಯಲ್ಲಿ ಕೈಗೊಂಡು ಪೂರ್ಣಗೊಳಿಸಿ, ಬೇಸಿಗೆಯಲ್ಲಿ ನಗರದಾದ್ಯಂತ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ರಾಜ್ಯದಲ್ಲಿ ತೀವ್ರವಾದ ಬರಗಾಲವಿದೆ. ಬರಗಾಲವಿರುವುದರಿಂದ ಸರ್ಕಾರ ಕುಡಿಯುವ ನೀರಿಗೆ ಅದ್ಯತೆ ನೀಡುತ್ತಿದೆ. ವಿಜಯಪುರ ನಗರಕ್ಕೆ ಭೂತನಾಳ ಕೆರೆಯ ನೀರು ಕುಡಿಯಲು ಬಳಸಲಾಗುತ್ತಿದೆ. ಮಳೆ ಕೊರತೆಯಿಂದ ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ ತಾತ್ಕಾಲಿಕವಾಗಿ ಕುಡಿಯುವ ನೀರಿನ ಸಮಸ್ಯೆಬಾರದಂತೆ ನೋಡಿಕೊಳ್ಳಲು ಅಕ್ವಾಡೆಕ್ಟ್ ಮೂಲಕ ನೀರು ತುಂಬಿಸಿ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಹಾಗೂ 1200ಎಂಎಂ ಪೈಪ್ ಅಳವಡಿಸಿ ಅಕ್ವಾಡೆಕ್ಟ್ ಮೂಲಕ ಶಾಶ್ವತವಾಗಿ ಭೂತನಾಳ ಕೆರೆ ತುಂಬಿಸಲು ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೊನಾವಣೆ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ, ಮಹಾನಗರ ಪಾಲಿಕೆ ಆಯುಕ್ತ ಬದ್ರೂದ್ದಿನ ಸೌದಾಗರ, ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಕಾರ್ಯ ನಿರ್ವಾಹಕ ಅಭಿಯಂತರ ಗುರುರಾಜ ಭಂಗಿನವರ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.