ಭೂತನಾಳ ಕೆರೆಗೆ ಭೇಟಿ ನೀಡಿದ ಸಚಿವ ಎಂ.ಬಿ. ಪಾಟೀಲ

ವಿಜಯಪುರ,ಫೆ.25:ವಿಜಯಪುರ ನಗರದ ಭೂತನಾಳ ಕೆರೆಗೆ ಸಚಿವ ಎಂ.ಬಿ. ಪಾಟೀಲ ಅವರು ಭಾನುವಾರ ಬೆಳಗ್ಗೆ ಭೇಟಿ ನೀಡಿ ಅಕ್ವಾಡೆಕ್ಟ್ ನಿಂದ ನೀರು ಹರಿಸುವ ಕಾರ್ಯ ಪರಿಶೀಲಿಸಿದರು.
ಭೂತನಾಳ ಕೆರೆ ಹಾಗೂ ನೀರು ಭರಿಸುವ ಅಕ್ವಾಡೆಕ್ಟ್ ಅನ್ನು ಸಚಿವ ಎಂ.ಬಿ. ಪಾಟೀಲ ವೀಕ್ಷಣೆ ಮಾಡಿದರು.
ನಗರದ ಐದು ವಾರ್ಡ್ ಗಳಿಗೆ ಹಾಗೂ ಎರಡು ವಾರ್ಡ್ ಗಳಿಗೆ ಪರ್ಯಾಯವಾಗಿ ನೀರು ಪೂರೈಕೆ ಮಾಡುವ ಭೂತನಾಳ ಕೆರೆ
ಬೇಸಿಗೆ ಹಾಗೂ ಬರಗಾಲದ ಕಾರಣ ಬತ್ತಿ ಹೋಗಿದೆ. ಇದರಿಂದ ನಗರದಲ್ಲಿ ಕುಡಿಯುವ ನೀರಿನ ಪೂರೈಕೆ ಸಮಸ್ಯೆಯಾಗಿತ್ತು.
ಈ ಕಾರಣ ಕೃಷ್ಣಾನದಿಯಿಂದ ಮುಳವಾಡ ಏತ ನೀರಾವರಿ ಯೋಜನೆಯ ತಿಡಗುಂದಿ ಅಕ್ವಾಡೆಕ್ಟ್ ಮೂಲಕ ನೀರು ಭರಿಸುವ ಕಾರ್ಯ ಕೈಗೊಳ್ಳಲಾಗಿದೆ. ಈ ಕಾಮಗಾರಿಯನ್ನು ಸಚಿವ ಎಂ.ಬಿ. ಪಾಟೀಲ ವೀಕ್ಷಿಸಿ,
ಕರ್ನಾಟಕ ರಾಜ್ಯ ನೀರು ಪೂರೈಕೆ ಹಾಗೂ ಒಳ ಚರಂಡಿ ಮಂಡಳಿ ಅಧಿಕಾರಿಗಳು, ಪಾಲಿಕೆ ಆಯುಕ್ತ ಹಾಗೂ ಇತರೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ದಿನಂಪ್ರತಿ 20 ಎಂಎಲ್ಡಿ ಪ್ರಮಾಣದ ನೀರು ಭರಿಸುವ ಕಾರ್ಯ ನಡೆದಿದ್ದು, ಮುಂದಿನ ಎರಡು ತಿಂಗಳಿಗಾಗುವಷ್ಟು ನೀರು ಸಂಗ್ರಹ ಮಾಡುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಭೂತನಾಳ ಕೆರೆಯ ಆವರಣದಲ್ಲಿ ಹಾಗೂ ತಿಡಗುಂದಿ ಅಕ್ವಾಡೆಕ್ಟ್ ಮೇಲೆ ಸಂಚರಿಸಿದ ಸಚಿವ ಎಂ.ಬಿ. ಪಾಟೀಲ ಅಧಿಕಾರಿಗಳಿಗೆ ಅಗತ್ಯದ ಸೂಚನೆ ನೀಡಿದರು