ಭೂಜಲ ಹಿತಮಿತವಾಗಿ ಬಳಸಲು ಕರೆ

ಗದಗ,ಆ25 : ಅಟಲ್ ಭೂಜಲ ಯೋಜನೆಯ ಜಿಲ್ಲಾ ಕಾರ್ಯಕ್ರಮ ನಿರ್ವಹಣಾ ಘಟಕ ವತಿಯಿಂದ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರ ಹಾಗೂ ವಿಶ್ವ ಬ್ಯಾಂಕಿನ ನೆರವಿನ ಪಾಲುದಾರಿಕೆಯಲ್ಲಿ ಜಿಲ್ಲೆಯಲ್ಲಿ ಅಟಲ್ ಭೂಜಲ್ ಯೋಜನೆ ಅನುಷ್ಟಾನಗೊಳಿಸುವ ನಿಟ್ಟಿನಲ್ಲಿ ಸೋಮವಾರದಂದು ಜಿಲ್ಲಾ ಪಂಚಾಯತ್ ಸಭಾ ಭವನದಲ್ಲಿ ಒಂದು ದಿನದ ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರವನ್ನು ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಸಿ. ಆರ್. ಮುಂಡರಗಿ ಉದ್ಘಾಟಿಸಿದರು.
ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿಗಳಾದ ಸಿ. ಆರ್. ಮುಂಡರಗಿ ಅವರು ಮಾತನಾಡಿ ಅಂತರ್ಜಲ ಸದ್ಬಳಕೆ, ಪ್ರಕೃತಿ ನಮಗಾಗಿ ಭೂ ಗರ್ಭದಲ್ಲಿ ಭದ್ರವಾಗಿ ಕೂಡಿಟ್ಟಿರುವ “ಜೀವ ಜಲ” ಈ ಜೀವ ಜಲವನ್ನು ಹಿತಮಿತವಾಗಿ ಬಳಸಿದರೆ ಮಾತ್ರ, ಭವಿಷ್ಯದ ಪೀಳಿಗೆಗೂ ಉಳಿಸಬಹುದು. ಅದಕ್ಕಾಗಿ ಕೊಳವೆಬಾವಿ ಸೇರಿದಂತೆ ಅಂತರ್ಜಲ ಬಳಸಿಕೊಂಡು ನೀರಾವರಿ ಆಧಾರಿತ ಕೃಷಿ ಮಾಡುವವರು ಸೂಕ್ಷ್ಮ ನೀರಾವರಿ ಪದ್ದತಿಗಳಾದ ತುಂತುರು ಮತ್ತು ಹನಿ ನೀರಾವರಿ ಅಳವಡಿಸಿಕೊಳ್ಳುವುದು ಅವಶ್ಯಕ ಹಾಗೂ ಬಳಕೆ ಮಾಡುವುದಕ್ಕಿಂತ ಹೆಚ್ಚಿನ ಪ್ರಮಾಣದ ನೀರನ್ನು ಭೂಮಿಗೆ ಮರುಪೂರಣ ಮಾಡಬೇಕಾಗಿರುವುದು ಅತೀ ಅವಶ್ಯಕವಾಗಿರುತ್ತದೆ ಎಂದು ತಿಳಿಸಿದರು.
ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕರಾದ ತಾರಾಮಣಿ ಜಿ.ಎಚ್. ಇವರು ಅಟಲ್ ಭೂಜಲ ಯೋಜನೆಯ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು. ಕೃಷಿ ಇಲಾಖೆ, ಉಪ ಕೃಷಿ ನಿರ್ದೇಶಕರಾದ ಕರಿಯಲ್ಲಪ್ಪ ಡಿ.ಕೆ, ಹಾಗೂ ಅಟಲ್ ಭೂಜಲ ಯೋಜನೆ ಬೆಂಗಳೂರು ಪರಿಸರ ತಜ್ಞರಾದ ಕಿರಣ್ ಕಾಶಿನಾಥ ಕೇರಿ ಇವರು ಸೂಕ್ಷ್ಮ ನೀರಾವರಿ ಪದ್ದತಿಗಳಾದ ತುಂತುರು ಮತ್ತು ಹನಿ ನೀರಾವರಿ ಅಳವಡಿಸಿಕೊಳ್ಳುವುದು ಅತೀ ಅವಶ್ಯಕ ಎಂದು ತಿಳಿಸಿದರು. ಅಟಲ್ ಭೂಜಲ ಯೋಜನೆ,ಜಿಲ್ಲಾ ನೋಡಲ್ ಅಧಿಕಾರಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ನಾಗಶೆಟ್ಟಿ ಚಂದ್ರುಶೇಖರ್ ಇವರು ಅಟಲ್ ಭೂಜಲ ಯೋಜನೆಯ ಬಗ್ಗೆ ಕಿರು ಮಾಹಿತಿಯನ್ನು ನೀಡಿದರು.
ಗದಗ ಜಿಲ್ಲಾ ಅಂತರ್ಜಲ ಕಛೇರಿಯ ಹಿರಿಯ ಭೂವಿಜ್ಞಾನಿ ಸಂತೋಷ ಸಿ. ಪ್ಯಾಟಿಗಾಣಿಗೇರ್ ಅಟಲ್ ಭೂಜಲ ಯೋಜನೆಯ ಗ್ರಾಮ ಪಂಚಾಯತವಾರು ಈಗಿರುವ ಅಂತರ್ಜಲ ಮಟ್ಟದ ಬಗ್ಗೆ ಹಾಗೂ ನೀರಿನ ವಿಶ್ಲೇಷಣೆ, ಗುಣಮಟ್ಟದ ಮತ್ತು ನೀರಿನ ಅಳೆಯುವ ಮಾಪನದ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು. ಹಿರಿಯ ರಾಸಾಯನ ಶಾಸ್ತ್ರಜ್ಞರು ಆರ್.ಡಿ.ಡಬ್ಲ್ಯೂ.ಎಸ್.ಪಿ. ಶಿವಾನಂದ ಶ್ಯಾನಭೋಗರ್ ಇವರು ಅಂತರ್ಜಲದ ಗುಣಮಟ್ಟ, ಗಡಸುತನ, ಅನುಕೂಲ ಹಾಗೂ ಅನಾನೂಕೂಲದ ಬಗ್ಗೆ ವಿಸ್ತಾರವಾದ ಮಾಹಿತಿಯನ್ನು ಹಂಚಿಕೊಂಡರು.
ಕಾರ್ಯಾಗಾರದಲ್ಲಿ ಅಟಲ್ ಭೂಜಲ ಯೋಜನೆಯ ಅಂತರ್ಜಲ ತಜ್ಞರಾದ ದಿನೇಶ ಎಚ್. ಪಾಟೀಲ್, ಕೃಷಿ ತಜ್ಞರಾದ ಶಿವಕುಮಾರ ಟಿ. ಎಚ್, ಮಾಹಿತಿ ಮತ್ತು ಶಿಕ್ಷಣ ಸಂವಹನ ತಜ್ಞರಾದ ಕೋಟ್ರೇಶ ಎಚ್.ಎಮ್ ಮತ್ತು ಜೀವನ ಬೆಳಕು ಕಲಾ ತಂಡದ ನಾಯಕರಾದ ರಾಜಶೇಖರ್ ಹಿರೇಮಠ ಹಾಗೂ ಸಂಗಡಿಗರು ಮತ್ತು ಅಟಲ್ ಭೂಜಲ ಯೋಜನೆಯ ಜಿಲ್ಲಾ ಪಾಲುದಾರ ಸಂಸ್ಥೆಯಾದ ನಿವೇದಿತ ಮಹಿಳಾ ವಿವಿದ್ದೊದ್ದೇಶ ಸಂಘ ಧಾರವಾಡ ಸಿಬ್ಬಂದಿಯವರು ಹಾಜರಿದ್ದರು.