ಭೂಗತ ದಾವೂದ್ ಸೆರೆಗೆ ರವಿ ಪೂಜಾರಿ ಸವಾಲು


ಬೆಂಗಳೂರು,ಜ.೬- ಅನಾರೋಗ್ಯದಿಂದ ಪರಪ್ಪನ ಅಗ್ರಹಾರ ಜೈಲಿನಿಂದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿ ಬಿಗಿ ಪೊಲೀಸ್ ಭದ್ರತೆಯ ಮಧ್ಯೆ ಚಿಕಿತ್ಸೆ ಪಡೆಯುತ್ತಿರುವ ಭೂಗತ ಪಾತಕಿ ರವಿ ಪೂಜಾರಿ ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಸೆರೆಹಿಡಿಯುವಂತೆ ಪೊಲೀಸರಿಗೆ ಸವಾಲು ಹಾಕಿದ್ದಾನೆ.ನನ್ನನ್ನು ನೀವು ಸುಲಭವಾಗಿ ಬಂಧಿಸಿದ್ದೀರಿ. ಆದರೆ, ದಾವೂದ್ ಇನ್ನೂ ಅಪರಾಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದಾನೆ. ಆತನನ್ನು ಸೆರೆಹಿಡಿದು ತೋರಿಸಿ ಎಂದು ಸವಾಲು ಹಾಕಿದ್ದಾನೆ ಎಂದು ತಿಳಿದು ಬಂದಿದೆ.
ಸುಖಾ ಸುಮ್ಮನೆ ನನ್ನನ್ನು ಬೇರೆ-ಬೇರೆ ಪ್ರಕರಣಗಳಲ್ಲಿ ಸಿಕ್ಕಿಸಲಾಗುತ್ತಿದೆ. ನನಗೂ ಕೆಲವು ಪ್ರಕರಣಗಳಿಗೆ ಸಂಬಂಧವೇ ಇಲ್ಲ. ಸಿಬಿಐ ಅಧಿಕಾರಿಗಳು ಏನು ಹೇಳಲ್ಲ. ಸಹಿ ಹಾಕಿಸಿಕೊಂಡು ಹೋಗುತ್ತಾರೆ. ಬಳಿಕ ಮುಂಬೈ ಪೊಲೀಸರು ಬರುತ್ತಾರೆ, ಅವರು ಏನೂ ಹೇಳದೇ ಕೇಸ್ ಫೈಲ್‌ಗಳಿಗೆ ಸಹಿ ಹಾಕಿಸಿಕೊಂಡು ಹೋಗುತ್ತಾರೆ ಎಂದು ರವಿ ಪೂಜಾರಿ ಆರೋಪಿಸಿದ್ದಾನೆ.
ಈ ಹಿಂದೆ ಭೂಗತ ಲೋಕದಲ್ಲಿ ಸಕ್ರಿಯವಾಗಿದ್ದೆ.
ಬೆಂಗಳೂರು ಸೇರಿ ಹಲವೆಡೆ ನಾನು ಬೆದರಿಕೆ ಹಾಗೂ ಇತರ ಅಪರಾಧ ಕೃತ್ಯ ನಡೆಸಿದ್ದು ಸತ್ಯ. ಆದರೆ, ಆಫ್ರಿಕದ ಸೆನೆಗಲ್ ಸೇರಿದ ಬಳಿಕ ನಾನು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿಲ್ಲ.
ನನ್ನ ಹೆಸರಿನಲ್ಲಿ ಬೇರೆ ಯಾರೋ ತಪ್ಪು ಮಾಡಿರಬಹುದು. ಸೆನೆಗಲ್‌ನಲ್ಲಿ ನಾನು ೨೫೦ ಹೆಕ್ಟೆರ್ ಜಮೀನು ಹೊಂದಿದ್ದು, ಉದ್ಯಮಗಳಲ್ಲಿ ತೊಡಗಿಸಿಕೊಂಡು ಸ್ಥಳೀಯರ ವಿಶ್ವಾಸ ಗಳಿಸಿ ಸುಖ ಸಂತೋಷದಿಂದ ಇದ್ದೇನು.
ನಾನ್ಯಾಕೆ ಮತ್ತೆ ಅಪರಾಧಲ್ಲಿ ಭಾಗಿಯಾಗಲಿ ಎಂದು ಹೇಳಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ
ಈ ನಡುವೆ ಬಾಡಿ ವಾರೆಂಟ್ ಮೂಲಕ ರವಿ ಪೂಜಾರಿಯನ್ನು ವಿಚಾರಣೆಗೆ ಒಳಪಡಿಸಲು ಕೇರಳ ಪೊಲೀಸರು ಸಿದ್ಧತೆ ನಡೆಸಿಕೊಂಡಿದ್ದಾರೆ.
ಎಸಿಎಂಎಂ ನ್ಯಾಯಾಲಯಕ್ಕೆ ಬಾಡಿ ವಾರೆಂಟ್ ಪಡೆಯಲು ಕೇರಳ ಪೊಲೀಸರು ಅರ್ಜಿ ಹಾಕಿದ್ದಾರೆ.
ಪೂಜಾರಿ ಕೇರಳದಲ್ಲಿ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿ ಯಾಗಿದ್ದಾನೆ ಎನ್ನಲಾಗಿದೆ.