ಭೂಕುಸಿತ, ಮೇಘಸ್ಫೋಟ 21 ಬಲಿ

ನವದೆಹಲಿ, ಆ. ೧೪- ಹಿಮಾಚಲ ಪ್ರದೇಶದಲ್ಲಿ ವರುಣ ಆರ್ಭಟಕ್ಕೆ ಶಿವನ ದೇವಾಲಯ ಬಳಿ ಭೂಕುಸಿತ ಹಾಗೂ ಮೇಘಸ್ಫೋಟಕ್ಕೆ ಒಟ್ಟು ೨೧ ಮಂದಿ ಸಾವನ್ನಪ್ಪಿದ್ದಾರೆ. ಕಳೆದ ೨೪ ತಾಸುಗಳಲ್ಲಿ ಸುರಿದು ಭಾರೀ ಮಳೆಯಿಂದಾಗಿ ಶಿಮ್ಲಾ ನಗರದಲ್ಲಿ ಶಿವನ ದೇವಾಲಯ ಕುಸಿದು ಬಿದ್ದಿದೆ. ಅವಶೇಷಗಳ ಅಡಿಯಲ್ಲಿ ಇನ್ನಷ್ಟು ಮಂದಿ ಸಿಲುಕಿರುವ ಶಂಕೆಯಿದ್ದು ಪರಿಹಾರ ಕಾರ್ಯ ಚುರುಕುಗೊಳಿಸಲಾಗಿದೆ.
ಹಿಮಾಚಲ ಪ್ರದೇಶದಲ್ಲಿ ಸಂಭವಿಸಿದ ೨ ಪ್ರತ್ಯೇಕ ಪ್ರಕರಣಗಳಲ್ಲಿ ೨೧ ಮಂದಿ ಮೃತಪಟ್ಟಿರುವುದನ್ನು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ತಿಳಿಸಿದ್ದಾರೆ. ರಾಜ್ಯದಾದ್ಯಂತ ಧಾರಾಕಾರ ಮಳೆಸುರಿಯುತ್ತಿದ್ದು, ಜನರು ಹೊರಗೆ ಬರದಂತೆ ಮನವಿ ಮಾಡಿದ್ದಾರೆ. ಪ್ರವಾಸಿಗರು ಭೂಕುಸಿತದಿಂದ ಹಾನಿಯಾಗಿರುವ ಪ್ರದೇಶಗಳಿಗೆ ಭೇಟಿ ನೀಡಬಾರದು ಎಂದು ಮನವಿ ಮಾಡಿದ್ದಾರೆ.
ಶಿಮ್ಲಾ ನಗರದ ಸಮ್ಮರ್ ಹಿಲ್ ಪ್ರದೇಶದ ಶಿವನ ದೇವಾಲಯದ ಬಳಿ ಭೂಕುಸಿತ ಸಂಭವಿಸಿ ೯ ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನಾಸ್ಥಳಕ್ಕೆ ಪರಿಹಾರ ತಂಡಗಳು ಭೇಟಿ ನೀಡಿ ಅವಶೇಷಗಳಡಿಯಲ್ಲಿ ಸಿಕ್ಕಿಹಾಕಿಕೊಂಡವರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗಿದೆ. ಆದರೆ ಪರಿಹಾರ ಕಾರ್ಯಾಚರಣೆಗೆ ಮಳೆ ಅಡ್ಡಿಯಾಗಿದೆ.
ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸಂಭವಿಸಿರುವ ಭೂಕುಸಿತದಲ್ಲಿ ೧೫ರಿಂದ ೨೦ ಮಂದಿ ಸಾವನ್ನಪ್ಪಿರುವ ಸಂಖ್ಯೆಯಿದೆ ಎಂದು ಶಿಮ್ಲಾ ನಗರದ ಆಯುಕ್ತ ಆದಿತ್ಯನೇಗಿ ತಿಳಿಸಿದ್ದಾರೆ.
ಫಾಗ್ಲಿ ಪ್ರದೇಶದಲ್ಲಿ ಮತ್ತೊಂದು ಭೂಕುಸಿತ ಸಂಭವಿಸಿದ್ದು ಈ ಪ್ರದೇಶಗಳಲ್ಲಿ ಹಲವಾರು ಮನೆಗಳು ಕುಸಿದು ಬಿದ್ದಿವೆ. ಸೋಲ್ಲನ್ ಪ್ರದೇಶದ ಕಾಂಡಾ ಘಾಟ್ ಉಪವಲಯದ ಮಾಮ್ ಲೀಗ್ ಗ್ರಾಮದಲ್ಲಿ ೬ ಮಂದಿಯನ್ನು ರಕ್ಷಿಸಲಾಗಿದೆ. ಒಟ್ಟಾರೆ ಕಳೆದ ೪೮ ಗಂಟೆಗಳ ಅವಧಿಯಲ್ಲಿ ಮಳೆ ಸಂಭವಿಸಿದ ದುರಂತಗಳಲ್ಲಿ ೨೧ ಮಂದಿ ಸಾವನ್ನಪ್ಪಿದ್ದಾರೆ.
ಭೂಕುಸಿತದಿಂದ ೭ ಮಂದಿ ಸಾವು:
ಮೇಘ ಸ್ಪೋಟದ ಹಿನ್ನೆಲೆಯಲ್ಲಿ ಸುರಿದ ಭಾರಿ ಮಳೆಯಿಂದ ಸೋಲನ್ ಪ್ರದೇಶದಲ್ಲಿ, ಒಂದೇ ಕುಟುಂಬದ ಏಳು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ. ತಡರಾತ್ರಿ ಮೇಘಸ್ಫೋಟದ ನಂತರ ಸೋಲನ್‌ನಲ್ಲಿ ಎರಡು ಮನೆಗಳು ಕೊಚ್ಚಿಹೋಗಿವೆ.
ಆರು ಮಂದಿಯನ್ನು ರಕ್ಷಣಾ ಪಡೆ ರಕ್ಷಿಸುವಲ್ಲಿ ಯಶಸ್ವಿತಾಗಿದೆ. ಇನ್ನುಳಿದಂತೆ ಜಾಡೋನ್ ಗ್ರಾಮದಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ
ಮೃತಪಟ್ಟವರನ್ನು ಹರ್ನಾಮ್ (೩೮), ಕಮಲ್ ಕಿಶೋರ್ (೩೫), ಹೇಮಲತಾ (೩೪), ರಾಹುಲ್ (೧೪), ನೇಹಾ (೧೨), ಗೋಲು (೮) ಮತ್ತು ರಕ್ಷಾ (೧೨), ಸೋಲನ್, ಪೊಲೀಸ್ ನಿರ್ದೇಶಕ ಗೌರವ್ ಸಿಂಗ್ ಎಂದು ಗುರುತಿಸಲಾಗಿದೆ ಎಂದು ಶಿಮ್ಲಾದ ಜಿಲ್ಲಾಧಿಕಾರಿ ಆದಿತ್ಯ ನೇಗಿ ತಿಳಿಸಿದ್ದಾರೆ.
ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಪ್ರಕಾರ, ದುರಂತದ ಕಾರಣದಿಂದಾಗಿ ರಾಜ್ಯದಲ್ಲಿ ೭೫೨ ರಸ್ತೆಗಳನ್ನು ಮುಚ್ಚಲಾಗಿದೆ. ಸೋಮವಾರ ರಾಜ್ಯದ ಎಲ್ಲಾ ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳಿಗೆ ರಜೆ ನೀಡಲಾಗಿದೆ ಎಂದು ಹೇಳಿದ್ಧಾರೆ.
ಈ ನಡುವೆ ಹಿಮಾಚಲ ಪ್ರದೇಶ ಮತ್ತು ಉತ್ತರಖಾಂಡದಲ್ಲಿ ಬಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಉತ್ತರಾಖಂಡದಲ್ಲಿ ಚಾರ್ ಧಾಮ್ ಯಾತ್ರೆಯನ್ನು ಎರಡು ದಿನಗಳ ಕಾಲ ಮುಂದೂಡಲಾಗಿದೆ.

ಭಾರಿ ಮಳೆ ಎಚ್ಚರಿಕೆ
ಶಿಮ್ಲಾ, ಕುಲು, ಮಂಡಿ ಸೇರಿದಂತೆ ಹಲವು ಜಿಲ್ಲೆಗಳಿಗೆ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹಿಮಾಚಲ ಪ್ರದೇಶದ ಪ್ರಾದೇಶಿಕ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಚಂಬಾ, ಕಂಗ್ರಾ, ಮಂಡಿ, ಶಿಮ್ಲಾ, ಕುಲು, ಲಾಹೌಲ್ ಜಿಲ್ಲೆಗಳು ಸೇರಿದಂತೆ ರಾಜ್ಯಾದ್ಯಂತ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ಮುನ್ನೆಚ್ಚರಿಕೆ ವಹಿಸುವಂತೆ ಜನರಿಗೆ ಸೂಚಿಸಲಾಗಿದೆ.

ಶಾಲಾ ಕಾಲೇಜಿಗೆ ರಜೆ:
ಭಾರೀ ಮಳೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ಆಗಸ್ಟ್ ೧೪ ರವರೆಗೆ ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆಘೋಷಿಸಲಾಗಿದೆ ಎಂದು ತಿಳಿಸಿದರು.
ಸ್ಥಳೀಯ ಹವಾಮಾನ ಕೇಂದ್ರದ ಪ್ರಕಾರ ಆಗಸ್ಟ್ ೧೪ ರಿಂದ ೧೭ ರವರೆಗೆ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆ, ಗುಡುಗು ಮತ್ತು ಮಿಂಚಿನ ಹಳದಿ ಎಚ್ಚರಿಕೆ ನೀಡಿದೆ.