ಭೂಕುಸಿತ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ನಿರ್ಬಂಧ

ಶ್ರೀನಗರ,ಜೂನ್ ೨೬- ಭಾರೀ ಮಳೆಯಿಂದಾಗಿ ಭಾನುವಾರ ರಾಂಬನ್ ಜಿಲ್ಲೆಯ ಮೆಹದ್ ಮತ್ತು ಕೆಫೆಟೇರಿಯಾ ಮೋರ್‌ನಲ್ಲಿ ಭೂಕುಸಿತ ಸಂಭವಿಸಿದ ನಂತರ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು ವಾಹನ ಸಂಚಾರಕ್ಕೆ ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಾಹನ ಸಂಚಾರ ನಿರ್ಬಂಧದಿಂದಾಗಿ ಹೆದ್ದಾರಿಯಲ್ಲಿ ಅಸಂಖ್ಯಾತ ವಾಹನಗಳು ಉದ್ದನೆಯ ಸರತಿ ಸಾಲಿನಲ್ಲಿ ನಿಂತಿವೆ ಎನ್ನಲಾಗಿದೆ.ಜಿಲ್ಲೆಯ ರಸ್ತೆಯುದ್ದಕ್ಕೂ ಸುಮಾರು ವಾಹನಗಳು ವಿವಿಧ ಸ್ಥಳಗಳಲ್ಲಿ ಸಿಲುಕಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಜಿಲ್ಲಾಡಳಿತವು ಜಿಲ್ಲೆಯಾದ್ಯಂತ ಭಾರೀ ಮಳೆಯ ಕಾರಣ ೧೦ ನೇ ತರಗತಿಯವರೆಗಿನ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಲಾಗಿದೆ .
ಡೆಪ್ಯುಟಿ ಕಮಿಷನರ್ (ಡಿಸಿ) ರಾಂಬನ್, ಮುಸ್ಸರತ್ ಇಸ್ಲಾಂ ಅವರು ೧೦ ನೇ ತರಗತಿಯವರೆಗಿನ ಶಾಲೆಗಳನ್ನು ಮುಚ್ಚುವಂತೆ ಆದೇಶಿಸಿದ್ದಾರೆ. ಆದರೆ ಶಿಕ್ಷಕರು ಎಂದಿನಂತ ತಮ್ಮ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಶನಿವಾರ, ಭಾರತೀಯ ಹವಾಮಾನ ಇಲಾಖೆ ಜಮ್ಮು ಮತ್ತು ಕಾಶ್ಮೀರದಲ್ಲಿ ಮುಂಗಾರು ಆರಂಭವಾಗಿದ್ದು
ಜೂನ್ ೨೫ ರಿಂದ ೨೮ ರವರೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣದಿಂದ ಮಿಂಚು ಗುಡುಗು ಸಹಿತ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ ಎಂದು ತಿಳಿಸಿದೆ.
ನೈಋತ್ಯ ಮುಂಗಾರು ಭಾರತದ ಹಲವಾರು ರಾಜ್ಯಗಳನ್ನು ಆವರಿಸಿದೆ ಎಂದು ಭಾನುವಾರ ಹೇಳಿದೆ.

ಮುಂದಿನ ಎರಡು ದಿನಗಳಲ್ಲಿ ಮುಂಗಾರು ಮುಂದುವರಿಯಲಿದೆ ಎಂದು ಐಎಂಡಿ ಮಹಾನಿರ್ದೇಶಕ ಡಾ.ಮೃತ್ಯುಂಜಯ್ ಮಹಾಪಾತ್ರ ತಿಳಿಸಿದ್ದಾರೆ.
ನೈಋತ್ಯ ಮಾನ್ಸೂನ್ ಈಗ ಸಕ್ರಿಯವಾಗಿದೆ. ಇದು ಮುಂಬೈ ಸೇರಿದಂತೆ ಇಡೀ ಮಹಾರಾಷ್ಟ್ರವನ್ನು ಒಳಗೊಂಡಿದೆ. ಮಾನ್ಸೂನ್ ಮಧ್ಯಪ್ರದೇಶ, ಉತ್ತರ ಪ್ರದೇಶ, ದೆಹಲಿ ಮತ್ತು ಹರಿಯಾಣ, ಗುಜರಾತ್, ರಾಜಸ್ಥಾನ, ಪಂಜಾಬ್ ಮತ್ತು ಜಮ್ಮುವಿನ ಭಾಗಗಳನ್ನು ಸಹ ತಲುಪಿದೆ. ಇದು ಮುಂದಿನ ೨ ದಿನಗಳಲ್ಲಿ ಮುಂದುವರಿಯುತ್ತದೆ ಮತ್ತು ಇತರ ಭಾಗಗಳನ್ನು ಸಹ ಒಳಗೊಂಡಿದೆ ಎಂದು ಮೊಹಾಪಾತ್ರ ಹೇಳಿದರು.
ದೆಹಲಿಯಲ್ಲಿ ೫ ಸೆಂ.ಮೀ. ಗರಿಷ್ಠ ಮಳೆ ದಾಖಲಾಗಿದೆ, ಮುಂದಿನ ೨ ದಿನಗಳ ಕಾಲ ಮಳೆ ಮುಂದುವರೆಯಲಿದೆ. ಮುಂಬೈ ಪ್ರದೇಶದಲ್ಲಿ ಗರಿಷ್ಠ ೧೮ ಸೆಂ.ಮೀ ಮಳೆ ದಾಖಲಾಗಿದ್ದು, ಇಂದು ಕೂಡ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಮಧ್ಯ ಭಾರತದಲ್ಲಿ ಮಾನ್ಸೂನ್ ಸಕ್ರಿಯವಾಗಿದೆ ಎಂದು ಅವರು ಹೇಳಿದರು.
ಹಿಮಾಚಲ ಪ್ರದೇಶದಲ್ಲಿ, ಮಂಡಿ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಮೈಲ್ ೭ ರ ಬಳಿ ಚಂಡೀಗಢ-ಮನಾಲಿ ಹೆದ್ದಾರಿಯಲ್ಲಿ ಭೂಕುಸಿತ ಉಂಟಾಗಿದೆ ಎನ್ನಲಾಗಿದೆ.