ಭೂಕುಸಿತ: ಗೋವಾ ರೇಲ್ವೆ ಮಾರ್ಗ ಸಂಪೂರ್ಣ ಬಂದ್

ಬೆಳಗಾವಿ,ಜು.26: ಧಾರಾಕಾರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ದೂಧ ಸಾಗರ್ ಜಲಪಾತದ ಬಳಿ ರೈಲ್ವೆ ಹಳಿಯ ಮೇಲೆ ಭೂಕುಸಿತ ಉಂಟಾಗಿದ್ದರಿಂದ ಗೋವಾ ರೈಲ್ವೆ ಮಾರ್ಗ ಸಂಪೂರ್ಣ ಬಂದಾಗಿದೆ.
ಬೆಳಗಾವಿ ಜಿಲ್ಲೆಯ ಗಡಿಭಾಗಕ್ಕೆ ಹೊಂದಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ವಿಶ್ವವಿಖ್ಯಾತ ದೂಧ ಸಾಗರ ಜಲಪಾತದ ಬಳಿ ಭಾರಿ ಮಳೆಯಿಂದಾಗಿ ಭೂಕುಸಿತ ಉಂಟಾಗಿದ್ದು, ಗೋವಾಕ್ಕೆ ತೆರಳುವ ಹಾಗೂ ಗೋವಾದಿಂದ ಆಗಮಿಸುವ ರೈಲುಗಳನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ.
ಕ್ಯಾಸಲ್ ರಾಕ್ ನಿಂದ ದೂಧಸಾಗರ ಜಲಪಾತದವರೆಗೆ ಸಾಗುವ ಮಾರ್ಗ ಮಧ್ಯೆ ಮೂರನೇ ಸುರಂಗ ಮಾರ್ಗದಲ್ಲಿಯೂ ಗುಡ್ಡ ಕುಸಿತವಾಗಿದ್ದು, ರೈಲ್ವೆ ಹಳಿಗಳ ಮೇಲೆ ಭಾರಿ ಪ್ರಮಾಣದಲ್ಲಿ ಮಣ್ಣು ಹಾಗೂ ಮರದ ದಿಣ್ಣೆಗಳು ಬಿದ್ದಿವೆ.
ಗೋವಾದಿಂದ ಬೆಳಗಾವಿ ಮಾರ್ಗವಾಗಿ ದೆಹಲಿಗೆ ತೆರಳುವ ನಿಜಾಮುದ್ದೀನ್ ಎಕ್ಸಪ್ರೆಸ್ ರೈಲಿನ ಮಾರ್ಗವನ್ನು ಬದಲಾಯಿಸಲಾಗಿದೆ.
ದೆಹಲಿಯಿಂದ ಗೋವಾಕ್ಕೆ ತೆರಳುವ ನಿಜಾಮುದ್ದೀನ್ ಎಕ್ಸ್ಪ್ರೆಸ್ ರೈಲು ಮಿರಜ್ ಮಾರ್ಗವಾಗಿ ಬೆಳಗಾವಿಗೆ ಆಗಮಿಸಿದ್ದು ಆ ರೈಲಿನಲ್ಲಿ ಆಗಮಿಸಿರುವ ಪ್ರಯಾಣಿಕರನ್ನು 16 ಬಸ್ಸುಗಳ ಮೂಲಕ ಗೋವಾಕ್ಕೆ ಕಳುಹಿಸಲಾಗಿದೆ.