ಭೂಕಬಳಿಕೆಯಲ್ಲಿ ಪ್ರಭಾವಿಗಳು ಹಾಗೂ ಭೂಮಾಫಿಯಾಗಳು ಶಾಮಿಲು

(ಸಂಜೆವಾಣಿ ವಾರ್ತೆ)
ಬೀದರ್: ಜು.28:ಜಿಲ್ಲೆಯಲ್ಲಿರುವ 90,294 ಎಕರೆ ಸರ್ಕಾರಿ ಜಮೀನು ಪೈಕಿ 30,505 ಎಕರೆ ಕಬಳಿಕೆಯಾಗಿದೆ. 3,833 ಎಕರೆ ಜಮೀನನಲ್ಲಿಯ ಒತ್ತುವರಿಯನ್ನು ತೆರವುಗೊಳಿಸಲಾಗಿದೆ ಎಂದು ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ.ಜಿ.ಬೋಪಯ್ಯ ಹೇಳಿದರು.
ನಗರದ ನೌಬಾದ್‍ನಲ್ಲಿರುವ ಸೌಹಾರ್ದ ಅತಿಥಿ ಗೃಹದ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾಧ್ಯಮ ಗೋಷ್ಠಿಯಲ್ಲಿ ಅವರು ಮಾತನಾಡಿದರು.ಭೂಕಬಳಿಕೆಯ 96 ಪ್ರಕರಣಗಳ ವಿಚಾರಣೆ ನ್ಯಾಯಾಲಯಗಳಲ್ಲಿ ನಡೆಯುತ್ತಿದೆ ಎಂದರು.
ಭೂಕಬಳಿಕೆಯಲ್ಲಿ ಪ್ರಭಾವಿಗಳು ಹಾಗೂ ಭೂಮಾಫಿಯಾಗಳೂ ಇದ್ದಾರೆ. ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿರುವುದು ಸಹ ಭೂಕಬಳಿಕೆಗೆ ಕಾರಣವಾಗಿದೆ. ರಾಜ್ಯದಲ್ಲಿ ಸರ್ಕಾರಿ ಜಮೀನು ಕಬಳಿಕೆ, ಒತ್ತುವರಿ ತಡೆಗೆ ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಕಟ್ಟುನಿಟ್ಟಿನ ಕ್ರಮ ವಹಿಸಲಿದೆ. ಈಗಾಗಲೇ ಜಿಲ್ಲಾಧಿಕಾರಿಗಳ ಸಭೆ ಕರೆದು ಕ್ರಮಕ್ಕೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಒತ್ತುವರಿ ಆಗಿರುವ ಸರ್ಕಾರಿ ಜಮೀನುಗಳ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಇದಕ್ಕಾಗಿ ಸರ್ಕಾರಿ ವಕೀಲರನ್ನು ನೇಮಕ ಮಾಡಲಾಗುತ್ತಿದೆ. ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಸ್ತಿತ್ವಕ್ಕೆ ಬಂದಾಗಿನಿಂದ 80 ಸಭೆಗಳನ್ನು ಮಾಡಲಾಗಿದೆ. ಇನ್ನು ಪ್ರತಿ ವಾರ ಸಭೆ ನಡೆಸಲಾಗುವುದು. ಸರ್ಕಾರಿ ಭೂಕಬಳಿಕೆ ಮಾಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ತಿಳಿಸಿದರು.
ಕಲಬುರಗಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಸಭೆ ನಡೆಸಿ ಸರ್ಕಾರಿ ಭೂಮಿ ಒತ್ತುವರಿ ಆಗಿರುವ ಕುರಿತು ಮಾಹಿತಿ ಪಡೆಯಲಾಗಿದೆ. ಒತ್ತುವರಿ ತೆರವಿಗೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.
ಸರ್ಕಾರಿ ಜಮೀನು, ಕೆರೆ, ರಾಜಕಾಲುವೆ ಒತ್ತುವರಿ ಕಂಡು ಬಂದಲ್ಲಿ ಸೂಕ್ತ ದಾಖಲೆಗಳೊಂದಿಗೆ ಸಮಿತಿಯ ಅಧ್ಯಕ್ಷರಿಗೆ, ಸಂಬಂಧಪಟ್ಟ ಜಿಲ್ಲಾಧಿಕಾರಿಗೆ ಸಾರ್ವಜನಿಕರು ತಮ್ಮ ಹೆಸರು ಮತ್ತು ವಿಳಾಸದೊಂದಿಗೆ ದೂರು ಸಲ್ಲಿಸಬೇಕು ಎಂದು ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಕೆಲ ಕಡೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂಕಬಳಿಕೆ ಮಾಡಲಾಗಿದೆ. ಅನೇಕ ಕಡೆ ಅರಣ್ಯ ಇಲಾಖೆ ಭೂಮಿಯನ್ನು ಕಬಳಿಸಲಾಗಿದೆ. ರಾಜ್ಯ ಹೈಕೋರ್ಟ್ ಪ್ರತಿ ತಿಂಗಳು ಎಷ್ಟು ಭೂಕಬಳಿಕೆ ತೆರವುಗೊಳಿಸಲಾಗಿದೆ. ಈ ಕುರಿತು ಮಾಹಿತಿ ನೀಡುವಂತೆಯೂ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿ ನಿಗಾ ವಹಿಸುತ್ತಿದೆ ಎಂದು ಹೇಳಿದರು.
ಸಮಿತಿ ಸದಸ್ಯ ಎ.ಟಿ.ರಾಮಸ್ವಾಮಿ ಮಾತನಾಡಿ, ಭೂಕಬಳಿಕೆ ರಾಜ್ಯದಲ್ಲಿ ಉದ್ದಅಗಲಕ್ಕೂ ಇದೆ. ಭೂಮಾಫಿಯಾ ವ್ಯಾಪಕವಾಗಿ ಬೆಳೆದಿದೆ. ಬಹುತೇಕ ಕಡೆ ಆಸ್ತಿ ವಹಿಗಳನ್ನು ಸರಿಯಾಗಿ ನಿರ್ವಹಿಸಿಲ್ಲ. ಅತಿಕ್ರಮಣ ನಿಲ್ಲಿಸಲು ಎಲ್ಲ ರೀತಿಯ ಪ್ರಯತ್ನ ನಡೆಸಲಾಗುತ್ತಿದೆ. ಮುಂದಿನ ಪೀಳಿಗೆಗಾಗಿ ಭೂಕಬಳಿಕೆ ತಡೆಯಬೇಕಾಗಿದೆ ಎಂದರು.
ನಕಲಿ ದಾಖಲೆಗಳನ್ನು ಸೃಷ್ಟಿಸಿ ಅದನ್ನು ಕೊಂಡಂತೆ ಮಾಡಿ ಬೇರೆಯವರಿಗೆ ಮಾರಾಟ ಮಾಡುತ್ತಾರೆ. ಅಧಿಕಾರಿಗಳು ಇದನ್ನು ಸೂಕ್ಷ್ಮವಾಗಿ ಗಮನಿಸುವುದರ ಜತೆಗೆ ಸರ್ಕಾರಿ ಜಮೀನಿನ ರಕ್ಷಣೆ ಮಾಡಬೇಕು. ಹುಮನಾಬಾದ್ ತಾಲ್ಲೂಕಿನಲ್ಲಿ ಪುರಸಭೆ ವತಿಯಿಂದ 1,200 ನಿವೇಶನಗಳನ್ನು ಅಕ್ರಮವಾಗಿ ಸರ್ಕಾರಿ ಜಮೀನಿನಲ್ಲಿ ನಿರ್ಮಿಸಲಾಗಿದೆ ಇದು ಕೇವಲ ಒಂದು ಉದಾಹರಣೆ ಮಾತ್ರ. ರಾಜ್ಯದಲ್ಲಿ ಇಂತಹ ಹಲವಾರು ನಿದರ್ಶನಗಳಿವೆ ಎಂದು ತಿಳಿಸಿದರು.
ಇನೊಬ್ಬರು ಸದಸ್ಯರಾದ ಹುಮನಾಬಾದ್ ಶಾಸಕ ರಾಜಶೇಖರ ಬಿ.ಪಾಟೀಲ ಮಾತನಾಡಿ, ಸಮಿತಿ ಅಧ್ಯಕ್ಷರಿಗೆ ಹದಿನೈದು ದಿನಗಳ ಹಿಂದೆಯೇ ಬೀದರ್ ಜಿಲ್ಲಾ ಕೇಂದ್ರದಲ್ಲೇ ಸಭೆ ನಡೆಸಿ ಭೂ ಒತ್ತುವರಿ ತಡೆಯಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೆ. ಮೂರು ತಾಸು ಸಭೆ ನಡೆಸಿ ಎಲ್ಲ ಮಾಹಿತಿಯನ್ನೂ ಪಡೆದುಕೊಂಡಿದ್ದಾರೆ ಎಂದು ಹೇಳಿದರು.
ಸಮಿತಿಯ ಸದಸ್ಯ ಕಾರ್ಯದರ್ಶಿ ವಸಂತಕುಮಾರ, ಕಂದಾಯ ಇಲಾಖೆಯ ಜಂಟಿ ಕಾರ್ಯದರ್ಶಿ ಕವಿತಾ ರಾಣಿ, ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಎಂ., ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಬೀದರ್ ಉಪ ವಿಭಾಗಾಧಿಕಾರಿ ಮಹಮ್ಮದ್ ಮೊಸಿನ್ ಮೋಮಿನ್, ಬೀದರ್ ತಹಶೀಲ್ದಾರ್ ಅಣ್ಣಾರಾವ್ ಪಾಟೀಲ ಇದ್ದರು.