ಭೂಕಬಳಿಕೆದಾರರ ವಿರುದ್ಧ ಪ್ರಕರಣ ದಾಖಲಿಸಲು ಒತ್ತಾಯ

ಕೋಲಾರ,ಮಾ.೨೫: ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿರುವ ಸರ್ಕಾರಿ ಜಮೀನುಗಳನ್ನು ಉಳಿಸಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಮನವಿ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಟಿ.ಎನ್.ರಾಮೇಗೌಡ ಮಾತನಾಡಿ, ಜಿಲ್ಲೆಯಲ್ಲಿ ಭೂ ಮಾಫಿಯಾದವರು ಅಧಿಕಾರಿಗಳೊಂದಿಗೆ ಶಾಮೀಲಾಗಿ ಸರ್ಕಾರಿ ಜಮೀನುಗಳನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಕ್ರಮವಾಗಿ ಖಾತೆಗಳನ್ನು ಮಾಡಿಕೊಂಡಿದ್ದು, ಜಿಲ್ಲಾಡಳಿತ ಎಚ್ಚೆತ್ತುಕೊಂಡು ಸರ್ಕಾರದ ಜಮೀನುಗಳನ್ನು ಉಳಿಸುವ ಕೆಲಸ ಹಾಗೂ ಸಂಭಂದ ಪಟ್ಟ ಅಧಿಕಾರಿಗಳ ವಿರುದ್ದ ಕ್ರಮಕೈಗೊಳ್ಳಲು ಒತ್ತಾಯಿಸಿದರು.
ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಂಬಲ ಬೆಲೆ ಸಿಗುತ್ತಿಲ್ಲ, ಜಿಲ್ಲೆಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸಾವಿರಾರು ಎಕರೆಗಳಲ್ಲಿ ಆಲೂಗಡ್ಡೆ ಬೆಳೆದಿದ್ದು ಸದ್ಯದ ಪರಿಸ್ಥಿತಿಯಲ್ಲಿ ಬೆಲೆ ಇಲ್ಲದ ಕಾರಣ ಆಲೂಗಡ್ಡೆ ಮಾರಾಟ ಮಾಡಲು ಸಾಧ್ಯವಾಗದೆ ಬಿತ್ತನೆ ಬೀಜ ಕೊಟ್ಟವರ ಹಣ ಪಾವತಿಸಲು ಸಾಧ್ಯವಿಲ್ಲ, ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ರೈತರಿಗೆ ಕಾಲಾವಕಾಶ ಕೊಡಿಸಬೇಕೆಂದು ಆಗ್ರಹಿಸಿದರು.
ಹಳ್ಳಿಗಳಲ್ಲಿ ಕುಡಿಯುವ ನೀರಿಗೂ ಬರ ಬಂದಿದ್ದು, ದನ ಕರುಗಳಿಗೆ ನೀರು ಒದಗಿಸಲು ಗ್ರಾಮ ಪಂಚಾಯತಿಗಳ ಮೂಲಕ ನೀರಿನ ತೊಟ್ಟಿಗಳನ್ನು ನಿರ್ಮಿಸಿ ಬೇಸಿಗೆ ಮುಗಿಯುವವರೆಗೂ ನೀರು ಸರಬರಾಜು ಮಾಡಬೇಕೆಂದರು.
ನಿಯೋಗದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ದಿನ್ನೊಹೊಸಹಳ್ಳಿ ರಮೇಶ್, ಜಿಲ್ಲಾ ಉಪಾಧ್ಯಕ್ಷ ಲಕ್ಷ್ಮಣ್, ಜಿಲ್ಲಾ ಮುಖಂಡರುಗಳಾದ ಹೊಳಲಿ ಹೊಸೂರು ಚಂದ್ರಪ್ಪ, ಮುಖಂಡರುಗಳಾದ ಹೆಚ್.ವಿ.ವೆಂಕಟರೆಡ್ಡಿ, ಎನ್.ಶ್ರೀರಾಮ, ಬಚ್ಚರೆಡ್ಡಿ, ಜಗನ್ನಾಥ, ವೆಂಕಟಾಚಲಪತಿ, ವೆಂಕಟಸ್ವಾಮಿ, ಚಿಕ್ಕಪಿಳ್ಳಪ್ಪಮುರಳಿ, ಶ್ರೀನಿವಾಸ್, ವಾನರಾಶಿ ಮುನಿವೆಂಕಟಪ್ಪ, ಮುದುವಾಡಿ ಆಚಾರಪ್ಪ, ವೆಂಕಟೇಶಪ್ಪ, ಲೋಕೇಶ್ ಉಪಸ್ಥಿತರಿದ್ದರು.