ಭೂಕಂಪ:ಸತ್ತವರ ಸಂಖ್ಯೆ 2000

ರಬತ್ (ಮೊರಾಕ್ಕೊ), ಸೆ.೧೦- ಉತ್ತರ ಆಫ್ರಿಕಾದ ಮೊರಾಕ್ಕೊ ದೇಶದ ಅಟ್ಲಾಸ್ ಪರ್ವತ ಶ್ರೇಣಿಯಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಮೃತರ ಸಂಖ್ಯೆ ಇದೀಗ ೨೦೦೦ ದಾಟಿದ್ದು, ೨೦೦೦ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳ ೧೪೦೪ ಮಂದಿಯ ಸ್ಥಿತಿ ಗಂಭೀರವಾಗಿದ್ದು, ಮೃತರ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಕಳೆದ ಆರು ದಶಕಗಳಲ್ಲೇ ಇದು ಮೊರಾಕ್ಕೊದ ಅತೀ ಭೀಕರ ಭೂಕಂಪವೆಂದು ಗುರುತಿಸಲಾಗಿದೆ.
ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಮರಕೇಶ್‌ನಲ್ಲಿ ಹೆಚ್ಚಿನ ಹಾನಿ ಸಂಭವಿಸಿದ್ದು, ಹಲವು ನಾಗರಿಕರ ಸ್ಥಳಾಂತರ ಕಾರ್ಯದಲ್ಲೂ ತೊಡಕುಂಟು ಮಾಡಿದೆ. ಅಮೆರಿಕಾದ ಭೂವಿಜ್ಞಾನ ಸರ್ವೇಕ್ಷಣಾಲಯ (ಯುಎಸ್‌ಜಿಎಸ್)ನಲ್ಲಿ ಭೂಕಂಪದ ತೀವ್ರತೆ ಸುಮಾರು ೭.೨ರಷ್ಟು ದಾಖಲಾಗಿದೆ. ಮಾರಕೇಶ್ ಪಟ್ಟಣದಿಂದ ನೈಋತ್ಯಕ್ಕೆ ೭೧ ಕಿ.ಮೀ. ದೂರದಲ್ಲಿ ಭೂಕಂಪನದ ಕೇಂದ್ರ ಗುರುತಿಸಲಾಗಿದ್ದು, ಸುಮಾರು ೧೮.೫ ಕಿ.ಮೀ. ಆಳದಲ್ಲಿ ಇತ್ತು ಎಂದು ಯುಎಸ್‌ಜಿಎಸ್ ವರದಿ ಮಾಡಿದೆ. ಇನ್ನು ಈಗಾಗಲೇ ಭೂಕಂಪನದಿಂದ ರಾಜಧಾನಿ ರಬತ್, ಮಾರಕೇಶ್, ಕರಾವಳಿಯ ಎಸ್ಸೌರಿಯಾ ಮತ್ತು ಕಸಾಬ್ಲಾಂಕಾ ನಗರಗಳು ಭಾರೀ ಪ್ರಮಾಣದಲ್ಲಿ ಹಾನಿಗೀಡಾಗಿವೆ. ಅದರಲ್ಲೂ ಮಾರಕೇಶ್‌ನಲ್ಲಿರುವ ಯುನೆಸ್ಕೊ ವಿಶ್ವ ಪಾರಂಪರಿಕ ತಾಣದಲ್ಲಿ ಸ್ಥಾನ ಪಡೆದಿರುವ ರೆಡ್ ವಾಲ್‌ಗೂ ಹಾನಿ ಉಂಟಾಗಿದೆ ಎಂದು ರಾಯಲ್ ಮೊರಾಕ್ಕನ್ ಸೇನೆ ತಿಳಿಸಿದೆ. ಅದೂ ಅಲ್ಲದೆ ಅವಘಡದಿಂದ ಅಪಾರ ಪ್ರಮಾಣದಲ್ಲಿ ಜನರ ಆಸ್ತಿ-ಪಾಸ್ತಿಗೆ ಹಾನಿ ಉಂಟಾಗಿದೆ. ಸದ್ಯ ವಿವಿಧ ಕಟ್ಟಡಗಳಡಿಯಲ್ಲಿ ಸಿಲುಕಿಕೊಂಡಿರುವವರ ಶೋಧಕಾರ್ಯ ಮುಂದುವರೆದಿದೆ. ಆದರೆ ಹಲವಾರು ಹಳ್ಳಿ ಪ್ರದೇಶಗಳಲ್ಲಿ ತುರ್ತು ಕಾರ್ಯ ಸಿಬ್ಬಂದಿ ತೆರಳಲು ಸಮಯ ಹಿಡಿದಿರುವ ಹಿನ್ನೆಲೆಯಲ್ಲಿ ಮೃತರ ಸಂಖ್ಯೆಯಲ್ಲೂ ಹೆಚ್ಚಾಗುವ ಎಲ್ಲಾ ಸಾಧ್ಯತೆಗಳಿವೆ ಎನ್ನಲಾಗಿದೆ. ಈ ನಡುವೆ ತುರ್ತು ಚಿಕಿತ್ಸಾ ಕಾರ್ಯವನ್ನು ವೇಗಗೊಳಿಸುವಂತೆ ಮೊರಕ್ಕೊದ ರಾಜ ಆರನೇ ಮುಹಮ್ಮದ್ ಅವರು ಮಿಲಿಟರಿ ಅಧಿಕಾರಿಗಳು ಹಾಗೂ ಇತರೆ ಸಿಬ್ಬಂದಿಗೆ ಸೂಚಿಸಿದ್ದಾರೆ. ಇನ್ನು ಮೊರಾಕ್ಕೊ ಭೂಕಂಪ ವಲಯ ದೇಶವಾಗಿದ್ದು, ೧೯೬೦ರಲ್ಲಿ ೫.೮ರ ತೀವ್ರತೆಯ ಭೂಕಂಪ ಸಂಭವಿಸಿ ಬರೊಬ್ಬರಿ ೧೨ ಸಾವಿರ ಮಂದಿ ಮೃತಪಟ್ಟಿದ್ದರು. ಅಲ್ಲದೆ ೨೦೦೪ರಲ್ಲಿ ಅಲ್ ಹೋಸಿಮಾದಲ್ಲಿ ಸಂಭವಿಸಿದ ಭೂಕಂಪದಲ್ಲಿ ೬೩೦ ಮಂದಿ ಮೃತಪಟ್ಟಿದ್ದರು. ಇನ್ನು ಭೀಕರ ಭೂಕಂಪಕ್ಕೆ ಜಾಗತಿಕ ನಾಯಕರಿಂದ ತೀವ್ರ ಸಂತಾಪ ವ್ಯಕ್ತವಾಗಿದೆ. ಪ್ರಧಾನಿ ಮೋದಿ, ಜರ್ಮನಿ ಚಾನ್ಸಲರ್ ಓಲಾಫ್ ಸ್ಟೋಲ್ಝ್, ರಷ್ಯಾ ಅಧ್ಯಕ್ಷ ಪುಟಿನ್, ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ, ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಸೇರಿದಂತೆ ಹಲವಾರು ಜಾಗತಿಕ ನಾಯಕರು ಸಂತಾಪ ಸೂಚಿಸಿದ್ದಾರೆ.