ಭೂಕಂಪನ ಪೀಡಿತ ಪ್ರದೇಶಗಳಿಗೆ ತಜ್ಞರ ಭೇಟಿಃ ಜನರು ಅನಗತ್ಯವಾಗಿ ಆತಂಕಕ್ಕೆ ಒಳಗಾಗದಿರಿಃ ಉಪವಿಭಾಗಾಧಿಕಾರಿ ಬಲರಾಮ ಲಮಾಣಿ

ವಿಜಯಪುರ, ನ.9-ಜಿಲ್ಲೆಯ ವಿವಿಧ ಕಡೆ ಸಂಭವಿಸುತ್ತಿರುವ ಲಘು ಭೂಕಂಪನಗಳು ಹಾಗೂ ಭೂಗರ್ಭದಿಂದ ಶಬ್ದ ಹೊರಡುತ್ತಿರುವ ಹಿನ್ನೆಲೆಯಲ್ಲಿ ಮನಗೂಳಿ, ಮಸೂತಿ ಭಾಗದ ಜನರು ಅನಗತ್ಯವಾಗಿ ಯಾವುದೇ ಆತಂಕಕ್ಕೊಳಗಾಗದೇ ಆತ್ಮಸ್ಥೈರ್ಯದಿಂದಿದ್ದು, ತಮ್ಮ ದಿನನಿತ್ಯದ ಕಾರ್ಯದಲ್ಲಿ ತೊಡಗಬೇಕು. ಜಿಲ್ಲಾಡಳಿತ ನಿಮ್ಮೊಂದಿಗೆ ಇದೆ ಎಂದು ಉಪವಿಭಾಗಾಧಿಕಾರಿ ಬಲರಾಮ ಲಮಾಣಿ ಅವರು ಹೇಳಿದರು.
ಜಿಲ್ಲೆಯ ವ್ಯಾಪ್ತಿಯ ಕೆಲವೆಡೆ 2019 ರಿಂದ ಸಂಭವಿಸುತ್ತಿರುವ ಲಘು ಭೂಕಂಪನಗಳು ಹಾಗೂ ಭೂಗರ್ಭದಿಂದ ಶಬ್ದ ಹೊರಡುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣೆ ಪ್ರಾಧಿಕಾರ, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಹಯೋಗದಲ್ಲಿ ಜನರಲ್ಲಿ ಭೂಕಂಪನ ಜಾಗೃತಿ ಮತ್ತು ಆತ್ಮವಿಶ್ವಾಸ ವೃದ್ಧಿಯ ಕುರಿತು ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಅದರಂತೆ ಜಿಲ್ಲೆಯಲ್ಲಿ ಈಗಾಗಲೇ ಆಲಮಟ್ಟಿ ಜಲಾಶಯ ಹಾಗೂ ಮಸೂತಿ ಗ್ರಾಮದಲ್ಲಿ ಎರಡು ಭೂಕಂಪನ ಮಾಪಕಗಳನ್ನು ಅಳವಡಿಸಲಾಗಿದ್ದು, ಲಘು ಭೂಕಂಪನ ಸಂಭವಿಸಿದ್ದಲ್ಲಿ ತಕ್ಷಣವೇ ಮಾಹಿತಿ ಲಭ್ಯವಾಗುತ್ತದೆ. ಜನರು ಯಾವುದೇ ಭಯಕ್ಕೆ ಒಳಗಾಗಬಾರದು.
ಈ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಜಿಲ್ಲೆಯಲ್ಲಿ ಭೂಕಂಪನ ಸಂಭವಿಸುತ್ತಿರುವ ಪ್ರದೇಶಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜಾಗೃತ ಕರಪತ್ರಗಳನ್ನು ಹಂಚಲಾಗುವುದು. ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ಹೇಳಿದರು.
ಅದರಂತೆ ಈ ಕಾರ್ಯಾಗಾರದಲ್ಲಿ ಹೆಸರಾಂತ ವಿವಿಧ ರಾಷ್ಟ್ರೀಯ ಸಂಸ್ಥೆಗಳಾದ ರಾಷ್ಟ್ರೀಯ ಭೌತ ಸಂಶೋಧನಾ ಸಂಸ್ಥೆ (ಹೈದರಾಬಾದ್), ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (ಬೆಂಗಳೂರು), ಭಾರತೀಯ ವಿಜ್ಞಾನ ಸಂಸ್ಥೆ (ಬೆಂಗಳೂರು) ರಾಷ್ಟ್ರೀಯ ಶಿಲಾ ಯಾಂತ್ರಿಕತೆ ಸಂಶೋಧನಾ ಸಂಸ್ಥೆ (ಬೆಂಗಳೂರು), ರಾಷ್ಟ್ರೀಯ ಭೂಕಂಪನ ಅಧ್ಯಯನ ಸಂಸ್ಥೆ (ಹೊಸದೆಹಲಿ) ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಂಸ್ಥೆ (ಬೆಂಗಳೂರು) ಸಂಸ್ಥೆಗಳ ವಿಷಯ ತಜ್ಞರು ಹಾಗೂ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಕಲಬುರಗಿ) ಮೈಸೂರು ವಿಶ್ವವಿದ್ಯಾಲಯ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕರ್ನಾಟಕ ಸರ್ಕಾರದ ಅಧಿಕಾರಿಗಳು ನೀಡಿದ ವರದಿಯನ್ನಾದರಿಸಿ ಕ್ರಮಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ವಿಜ್ಞಾನಿ ಡಾ.ಬಿಜೂ ಜಾನ್ ಅವರು ಜಿಲ್ಲೆಯಲ್ಲಿ ನಡೆಯುತ್ತಿರುವ ಭೂಕಂಪನದ ಬಗ್ಗೆ ಅಧ್ಯಯನ ನಡೆಸಲು ಕಲಬುರ್ಗಿ, ಬೀದರ್, ವಿಜಯಪುರಗಳಲ್ಲಿ ವಿಜ್ಞಾನಿಗಳ ತಂಡವು ಆಗಮಿಸಿದ್ದು, ವಿಜಯಪುರ ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಲಘು ಭೂಕಂಪನಗಳ ಬಗ್ಗೆ ಅಧ್ಯಯನವನ್ನು ಕೈಗೊಂಡು, ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಅನಗತ್ಯವಾಗಿ ಜನರು ಆತಂಕಕ್ಕೊಳಗಾಗದೇ, ಧೈರ್ಯದಿಂದಿದ್ದು, ತಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ತೊಡಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ.ಜಿ.ಎಸ್ ಶ್ರೀನಿವಾಸ್ ರೆಡ್ಡಿ, ಡಾ.ಬಿ.ಸಿ ಪ್ರಭಾಕರ, ಡಾ.ಸುರೇಶ, ಡಾ.ರಮೀಶ ರಾಜಾ ಮೀರ್, ಶ್ರೀ ಅಚಾನ್ ಕೋನಯಾಕ್, ಮಹಾವೀರ ಕೆ. ಎ, ಡಾ.ತೇಜಸ್ವಿನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.