ಭೂಕಂಪನ ಕುರಿತು ಅಧ್ಯಯನ ವರದಿ 5 ದಿನದಲ್ಲಿ ಸರ್ಕಾರಕ್ಕೆ ಸಲ್ಲಿಕೆ:ಡಾ.ಮನೋಜ ರಾಜನ್

ಕಲಬುರಗಿ,ನ.9: ಕಳೆದ ಅಕ್ಟೋಬರ್ 11 ರಿಂದ ಕಲಬುರಗಿ ಜಿಲ್ಲೆಯ ಚಿಂಚೋಳಿ ಮತ್ತು ಕಾಳಗಿ ತಾಲೂಕಿನ ಆಯ್ದ ಗ್ರಾಮಗಳಲ್ಲಿ ಮತ್ತು ಪಕ್ಕದ ಬೀದರ ಮತ್ತು ವಿಜಯಪುರದಲ್ಲಿ ಕೇಳಿ ಬರುತ್ತಿರುವ ಭೂಕಂಪನ ಸದ್ದಿನ ಕುರಿತ ವೈಜ್ಞಾನಿಕ ವರದಿಯನ್ನು ಅಧ್ಯಯನ ತಂಡಗಳು ಮುಂದಿನ 5 ದಿನದಲ್ಲಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಿವೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಡಾ.ಮನೋಜ ರಾಜನ್ ತಿಳಿಸಿದರು.
ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಭೂಕಂಪನ ಹಿನ್ನೆಲೆಯಲ್ಲಿ ಆಯೋಜಿಸಿದ ಕಾರ್ಯಗಾರದ ನಂತರ ಈ ಕುರಿತು ವಿವರಣೆ ನೀಡಿದ ಅವರು ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಕೇಶ್ವಾರ ಸುತ್ತಮುತ್ತ ಗ್ರಾಮದಲ್ಲಿ ಭೂಕಂಪನ ಸದ್ದು ಪದೇ ಪದೇ ಆಗುತ್ತಿರುವ ಕಾರಣ ಇದರ ವೈಜ್ಞಾನಿಕ ಅಧ್ಯಯನಕ್ಕಾಗಿ ರಾಜ್ಯ ಸರ್ಕಾರವು ವಿವಿಧ ವಿಜ್ಞಾನಿಗಳನ್ನೊಳಗೊಂಡ ಎರಡು ತಂಡಗಳು ನೇಮಿಸಿದ್ದು, ಈ ತಂಡಗಳು ಕಲಬುರಗಿ, ಬೀದರ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಸೋಮವಾರ ಸಂಚರಿಸಿ ಅಧ್ಯಯನ ನಡೆಸಿ ಅಗತ್ಯ ಮಾಹಿತಿ ಸಂಗ್ರಹಿಸಿದ್ದಾರೆ ಎಂದರು.
ಬೆಂಗಳೂರು ವಿಶ್ವವಿದ್ಯಾಲಯದ ಭೂ ವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಬಿ.ಸಿ.ಪ್ರಭಾಕರ ಮತ್ತು ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ಬೆಂಗಳೂರಿನ ಲ್ಯಾಂಡ್ ಸ್ಲೈಡ್ ವಿಭಾಗದ ನಿರ್ದೇಶಕ ಆರ್. ಸಜೀವ, ನವದೆಹಲಿಯ ನ್ಯಾಷನಲ್ ಸೆಂಟರ್ ಫಾರ್ ಸೀಸ್ಮೋಲಾಜಿ ಸಂಸ್ಥೆಯ ವಿಜ್ಞಾನಿ ಡಾ. ಎ.ಪಿ.ಸಿಂಗ್ ಮತ್ತು ಹೈದ್ರಾಬಾದಿನ ಎನ್.ಜಿ.ಆರ್.ಐ ಸಂಸ್ಥೆಯ ವಿಜ್ಞಾನಿ ಡಾ. ಶಶಿಧರ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕ (ಯೋಜನೆ) ಹರೀಷ್ ಹೆಚ್.ಪಿ. ಮತ್ತು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಭೂ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ತೇಜಸ್ವಿ ಅವರ ನೇತೃತ್ವದ ಮೂರು ವಿಜ್ಞಾನಿಗಳ ತಂಡಗಳು ಕ್ಷೇತ್ರ ಭೇಟಿ ಮಾಡಿ ಸ್ಥಳೀಯ ಭೂಮಿಯ ಮಣ್ಣು ಮತ್ತು ಕಲ್ಲಿನ ಕುರಿತು ಸಮಗ್ರ ಅಧ್ಯಯನ ಮಾಡಿವೆ. ಪ್ರತ್ಯೇಕ ವಿಷಯಗಳ ಬಗ್ಗೆ ಮುಂದೆ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ತಂಡಗಳು ಸರ್ಕಾರಕ್ಕೆ ವೈಜ್ಞಾನಿಕ ವರದಿ ಸಲ್ಲಿಸಲಿದ್ದು, ಅದರನ್ವಯ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದರು.
ಎನ್.ಜಿ.ಆರ್.ಐ ಹೈದ್ರಾಬಾದ, ಎನ್.ಐ.ಆರ್.ಎಂ. ಬೆಂಗಳೂರು, ಸಿ.ಎಸ್.ಐ.ಆರ್ ಬೆಂಗಳೂರು, ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ಬೆಂಗಳೂರು, ನ್ಯಾಷನಲ್ ಸೆಂಟರ್ ಫಾರ್ ಸೀಸ್ಮೋಲಾಜಿ ನವದೆಹಲಿ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಬೆಂಗಳೂರು ವಿಶ್ವವಿದ್ಯಾಲಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಕೆ.ಎಸ್.ಡಿ.ಎಂ.ಎ & ಕೆ.ಎಸ್.ಎನ್.ಡಿ.ಎಂ.ಸಿ ಹೀಗೆ 9 ಸಂಸ್ಥೆಗಳು ಜಂಟಿಯಾಗಿ ಭೂಕಂಪನದ ಕುರಿತು ಅಧ್ಯಯನ ನಡೆಸಿದ್ದು, ಅದರ ಪ್ರಾತ್ಯಕ್ಷಿತೆ ಇಂದು ಪ್ರಸ್ತುತಪಡಿಸಲಾಗಿದೆ. ಇದನ್ನು ಕ್ರೋಢಿಕರಿಸಿ ತಂಡಗಳು ಸರ್ಕಾರಕ್ಕೆ ವರದಿ ಸಲ್ಲಿಸಲಿವೆ ಎಂದರು.
ವಿಜ್ಞಾನಿ ತಂಡಗಳ ಪ್ರಾಥಮಿಕ ಮಾಹಿತಿ ಪ್ರಕಾರ ಜಿಲ್ಲೆಯ ಗಡಿಕೇಶ್ವರ, ವಿಜಯಪುರ ಸೇರಿದಂತೆ ದೇಶದ ವಿವಿಧ ಪ್ರದೇಶದಲ್ಲಿ ಈ ರೀತಿಯ ಸಣ್ಣ ಪ್ರಮಾಣದ ಭೂಕಂಪನಗಳು ಜರುಗಿವೆ. ಜಿಲ್ಲೆಯ ಗಡಿಕೇಶ್ವರದಲ್ಲಿ ಎರಡು ಬಾರಿ ಭೂಕಂಪದ ತೀವ್ರತೆ ರಿಕರ್ ಮಾಪಕ 4 ದಾಟಿದರೆ ಉಳಿದೆಲ್ಲ ಸಮಯ ್ಲ 1 ರಿಂದ 3ರ ವರೆಗೆ ಮಾತ್ರ ತೀವ್ರತೆ ದಾಖಲಾಗಿದೆ. ಇದರಿಂದ ಭಯಪಡುವ ಅವಶ್ಯಕತೆವಿಲ್ಲ ಎಂದು ತಿಳಿಸಿದ್ದಾರೆ ಎಂದರು.
ಗಡಿಕೇಶ್ವಾರ ಗ್ರಾಮದಲ್ಲಿ ಮನೆ ಮುಂದೆ ಶೆಡ್ ನಿರ್ಮಾಣ ಕುರಿತು ಗ್ರಾಮಸ್ಥರ ಬೇಡಿಕೆ ವಿಷಯ ಸರ್ಕಾರದ ಮಟ್ಟದಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಈ ಸಂಬಂಧ ಈಗಾಗಲೆ ಜಿಲ್ಲಾಡಳಿತ 885 ಮನೆಗಳನ್ನು ಸರ್ವೇ ಮಾಡಿ ವರದಿ ನೀಡಿದೆ ಎಂದರು.
ಬೆಂಗಳೂರು ವಿಶ್ವವಿದ್ಯಾಲಯದ ಭೂ ವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಬಿ.ಸಿ.ಪ್ರಭಾಕರ ಮಾತನಾಡಿ ಇಲ್ಲಿ ಸುಣ್ಣದ ಕಲ್ಲಿನ ಪದೇಶವಾಗಿದೆ. ಇತ್ತೀಚೆಗೆ ಹೆಚ್ಚಿನ ಮಳೆಯ ಕಾರಣ ಸುಣ್ಣದ ಕಲ್ಲು ಮತು ನೀರಿನ ಮಿಶ್ರಣದಿಂದ ಈ ರೀತಿಯ ಸದ್ದುಗಳು ಬರುವ ಸಾಧ್ಯತೆವಿದ್ದು, ಸಮಗ್ರ ಅಧ್ಯಯನ ಮಾಡಲಾಗುತ್ತಿದೆ. ತೀರಾ ಸಣ್ಣ ಪ್ರಮಾಣದ ಭೂಕಂಪನಗಳು ಇದಾಗಿರುವುದರಿಂದ ಗ್ರಾಮಸ್ಥರು ಭಯಪಡುವ ಅವಶ್ಯಕತೆವಿಲ್ಲ ಎಂದರು.
ಪ್ರತಿ ವರ್ಷ ವಿಶ್ವದಾದ್ಯಂತ 10 ಲಕ್ಷ ಸಂಖ್ಯೆಯಲ್ಲಿ ಈ ರೀತಿಯ ಸಣ್ಣ ಪ್ರಮಾಣದ ಭೂಕಂಪನಗಳು ಸಂಭವಿಸುತ್ತವೆ. ಕರ್ನಾಟಕ ರಾಜ್ಯವು ಸ್ಥಿರ ಭೂಮಿ ಹೊಂದಿರುವುದರಿಂದ ಇಲ್ಲಿ ಹೆಚ್ಚಿನ ಹಾನಿಯಾಗುವುದಿಲ್ಲ. ಇನ್ನೂ ಗಣಿಗಾರಿಕೆ, ಕೈಗಾರಿಕೆಗಳಿಂದ ಭೂಕಂಪನ ಸಂಭವಿಸುತ್ತದೆ ಎಂಬ ಮಾತು ಸುಳ್ಳಾಗಿದ್ದು, ಯಾವುದೇ ವೈಜ್ಞಾನಿಕ ಪುರಾವೆ ದೊರೆತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ, ಕಲಬುರಗಿ ಅಪರ ಜಿಲ್ಲಾಧಿಕಾರಿ ಡಾ.ಶಂಕರ ವಣಿಕ್ಯಾಳ, ಬೀದರ ಹೆಚ್ಚುವರಿ ಎಸ್.ಪಿ. ಗೋಪಾಲ, ಬಸವಕಲ್ಯಾಣ ಸಹಾಯಕ ಆಯುಕ್ತ ಭುವನೇಶ ಪಾಟೀಲ, ಹೈದ್ರಾಬಾದಿನ ಎನ್.ಜಿ.ಆರ್.ಐ ಸಂಸ್ಥೆಯ ಹಿರಿಯ ಭೂ ವಿಜ್ಞಾನಿ ಡಾ. ಶಶಿಧರ ಮತ್ತು ಹಿರಿಯ ತಾಂತ್ರಿಕ ಅಧಿಕಾರಿ ಡಾ. ಸುರೇಶ, ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ರಾಕ್ ಮೆಕ್ಯಾನಿಸ್ಮ್ (ಎನ್.ಐ.ಆರ್.ಎಂ.) ಬೆಂಗಳೂರಿನ ಸೀಸ್ಮೋಲಾಜಿ ಇಂಜಿನೀಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಬಾಲಸುಬ್ರಮಣಿಯಂ ವಿ.ಆರ್. ಮತ್ತು ಸೀಸ್ಮೋ ಟೆಕ್ಟಾನಿಕ್ಸ್ ವಿಭಾಗದ ಮುಖ್ಯಸ್ಥ ಡಾ. ಬಿಜು ಜಾನ್, ಸಿ.ಎಸ್.ಐ.ಆರ್ ಬೆಂಗಳೂರು ಸಂಸ್ಥೆಯ ಹಿರಿಯ ವಿಜ್ಞಾನಿ ಚಿರಂಜೀವಿ ಜಿ. ವಿವೇಕ ಮತ್ತು ಯೋಜನಾ ಸಿಬ್ಬಂದಿ ರಮೀಸ್ ರಾಜಾ ಮಿರ್, ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ಬೆಂಗಳೂರು ಸಂಸ್ಥೆಯ ಲ್ಯಾಂಡ್ ಸ್ಲೈಡ್ ವಿಭಾಗದ ನಿರ್ದೇಶಕ ಆರ್. ಸಜೀವ ಮತ್ತು ಭೂ ವಿಜ್ಞಾನಿ ಅಚನ್ ಕೋನ್ಯಾಕ್, ನ್ಯಾಷನಲ್ ಸೆಂಟರ್ ಫಾರ್ ಸೀಸ್ಮೋಲಾಜಿ ನವದೆಹಲಿಯ ವಿಜ್ಞಾನಿ ಡಾ. ಎ.ಪಿ.ಸಿಂಗ್, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸೀನಿಯರ್ ಕನ್ಸಲ್ಟೆಂಟ್ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಭೂ ವಿಜ್ಞಾನ ವಿಭಾಗದ ಹಿರಿಯ ಸಹಾಯಕ ಪ್ರಾಧ್ಯಾಪಕ ಡಾ. ಲಿಂಗದೇವರು ಮತ್ತು ಸಹಾಯಕ ಪ್ರಾಧ್ಯಾಪಕ ಡಾ. ತೇಜಸ್ವಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕ (ಯೋಜನೆ) ಹರೀಷ್ ಹೆಚ್.ಪಿ. ಮತ್ತು ಹೊಸಪೇಟೆ ಉಪನಿರ್ದೇಶಕ ಮಹಾವೀರ ಕೆ.ಎ. ಹಾಗೂ ಕೆ.ಎಸ್.ಎನ್.ಡಿ.ಎಂ.ಸಿ.ಯ ಎಸ್.ಓ. ಎಸ್. ಜಗದೀಶ, ಜೆ.ಎಸ್.ಓಗಳಾದ ಕೆ.ಕೆ.ಅಭಿನಯ, ಎಸ್. ಎಮಿಲಿ ಪ್ರಭಾ ಜ್ಯೋತಿ ಹಾಗೂ ಡಾ. ರಮೇಶ ಎಲ್. ದಿಕ್ಪಾಲ್, ಎಸ್.ಎ.ಗಳಾದ ಅಣವೀರಪ್ಪ ಮತ್ತು ಆರ್. ಸಂತೋಷಕುಮಾರ ಸೇರಿದಂತೆ ಮೂರು ಜಿಲ್ಲೆಗಳ ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿಗಳು, ಚಿಂಚೋಳಿ ತಹಶೀಲ್ದಾರ ಅಂಜುಮ್ ತಬ್ಬಸ್ಸುಮ್, ಕಾಳಗಿ ತಹಶೀಲ್ದಾರ ನಾಗನಾಥ ತರಗೆ ಸೇರಿದಂತೆ ವಿವಿಧ ಅಧಿಕಾರಿಗಳಿದ್ದರು.