ಭುಜಗಳ ನೋವಿಗೆ ಮನೆ ಮದ್ದು

ಸಾಮಾನ್ಯವಾಗಿ ಎದುರಾಗುವ ಮೂಳೆಸಂಧುಗಳ ಮತ್ತು ಸ್ನಾಯುಗಳ ನೋವುಗಳಲ್ಲಿ ಭುಜದ ಸ್ನಾಯುಗಳ ನೋವು ಹೆಚ್ಚಿನ ಪ್ರಮಾಣದಲ್ಲಿದೆ. ಇದನ್ನು ನಿವಾರಿಸಲು ನೋವು ನಿವಾರಕ ಗುಳಿಗೆಗಳನ್ನು ಸೇವಿಸುವ ಬದಲು ಸುರಕ್ಷಿತವಾದ ಸುಲಭ ಮನೆಮದ್ದುಗಳು
ಐಸ್ ಥೆರಪಿ: ನೋವಿಗೊಳಗಾದ ಭಾಗವನ್ನು ಕೊಂಚ ಹೊತ್ತು ಮಂಜುಗಡ್ಡೆಯ ತಂಪಿನಿಂದ ಮರಗಟ್ಟಿಸುವ ಮೂಲಕ ಈ ನೋವನ್ನು ತಾತ್ಕಾಲಿಕವಾಗಿ ಕಡಿಮೆಗೊಳಿಸಬಹುದು. ಈ ಭಾಗವನ್ನು ತಣಿಸುವ ಮೂಲಕ ಸ್ನಾಯುಗಳು ಮತ್ತು ಮೂಳೆಸಂಧುಗಳು ಸಡಿಲಗೊಳ್ಳುತ್ತವೆ. ಇದಕ್ಕಾಗಿ ಒಂದು ಮೃದುವಾದ ಟವೆಲ್ನಲ್ಲಿ ಸಾಕಷ್ಟು ಮಂಜುಗಡ್ಡೆಯ ತುಂಡುಗಳನ್ನು ಇರಿಸಿ ಬಟ್ಟೆಯ ಭಾಗ ನೋವಿರುವ ಭಾಗಕ್ಕೆ ತಾಕುವಂತೆ ಸುಮಾರು ಇಪ್ಪತ್ತು ನಿಮಿಷ ಇರಿಸ ಬೇಕು. ದಿನದಲ್ಲಿ ಸುಮಾರು ಐದು ಬಾರಿ ಈ ವಿಧಾನವನ್ನು ಪುನರಾವರ್ತಿಸಬೇಕು .ಈ ನೋವು ಎದುರಾದ ಪ್ರಾರಂಭದಲ್ಲಿಯೇ ಈ ವಿಧಾನವನ್ನು ಅನುಸರಿಸಿದರೆ ನೋವು ಉಲ್ಬಣಗೊಳ್ಳದೇ ತಾನಾಗಿಯೇ ಇಲ್ಲವಾಗಲು ಸಾಧ್ಯವಾಗುತ್ತದೆ.
ಶಾಖದ ಒತ್ತಡ: ಒಂದು ವೇಳೆ ನೋವು ಹಳೆಯದಾಗಿದ್ದರೆ ಈ ವಿಧಾನ ಹೆಚ್ಚು ಸೂಕ್ತವಾಗಿದೆ. ಹಳೆಯ ನೋವಿರುವ ಭಾಗಕ್ಕೆ ಸಾಕಷ್ಟು ಶಾಖ ಒದಗಿಸುವ ಮೂಲಕ ಪೆಡಸಾಗಿದ್ದ ಈ ಭಾಗದಲ್ಲಿ ರಕ್ತಪರಿಚಲನೆ ಹೆಚ್ಚುವ ಮೂಲಕ ಸ್ನಾಯುಗಳು ಸಡಿಲಗೊಳ್ಳಲು ಸಾಧ್ಯವಾಗುತ್ತದೆ. ಶಾಖವನ್ನು ಕೆಲವಾರು ವಿಧಾನಗಳಿಂದ ಒದಗಿಸಬಹುದು. ಬಿಸಿನೀರು ತುಂಬಿಸಿರುವ ರಬ್ಬರ್ ನ ಚೀಲ ಅಥವಾ ಬಿಸಿನೀರು ಗಾಜಿನ ಬಾಟಲಿ ಮೊದಲಾದವುಗಳನ್ನು ಬಳಸಬಹುದು. ಒಂದು ವೇಳೆ ವಿದ್ಯುತ್ ಚಾಲಿತ ಉಪಕರಣ ವಾಗಿದ್ದರೆ ಇದರ ಬಿಸಿ ಮಧ್ಯಮ ತೀವ್ರತೆಯಲ್ಲಿರುವಂತೆ ಎಚ್ಚರ ವಹಿಸಿ. ಎಕೆಂದರೆ ನಮ್ಮ ದೇಹ ಮಧ್ಯಮ ತೀವ್ರತೆಯ ಬಿಸಿಗೆ ಹೆಚ್ಚು ಸ್ಪಂದಿಸುತ್ತದೆ. ಇದರ ಜೊತೆಗೇ ಸ್ನಾನದ ಸಮಯದಲ್ಲಿ ಬೆಚ್ಚನೆಯ ನೀರು ನೋವಿರುವ ಭಾಗದ ಮೇಲೆ ಕೊಂಚ ಕಾಲ ಸುರಿಯುಂತೆ ಮಾಡುವ ಮೂಲಕವೂ ನೋವನ್ನು ಕಡಿಮೆಗೊಳಿಸಬಹುದು.. ಭುಜದ ನೋವಿಗೆ ಕಾರಣ ಯಾವುದೇ ಇರಲಿ, ಈ ವಿಧಾನದಿಂದ ಎಲ್ಲ ಬಗೆಯ ನೋವುಗಳೂ ಕಡಿಮೆಯಾಗುತ್ತವೆ.
ಲ್ಯಾವೆಂಡರ್ ಎಣ್ಣೆಯ ಸುವಾಸನೆಯ ಚಿಕಿತ್ಸಾ ವಿಧಾನ: ಅರೋಮಾ ಥೆರಪಿ ಎಂದು ಕರೆಯಲ್ಪಡುವ ಈ ವಿಧಾನದಲ್ಲಿ ಲ್ಯಾವೆಂಡರ್ ಎಣ್ಣೆಯ ಉರಿಯೂತ ನಿವಾರಕ ಮತ್ತು ಗುಣಪಡಿಸುವ ಗುಣಗಳನ್ನು ಬಳಸಲಾಗುತ್ತದೆ. ಇದಕ್ಕಾಗಿ ಕೆಲವು ತೊಟ್ಟು ಲ್ಯಾವೆಂಡರ್ ಎಣ್ಣೆಯ ಕೆಲವು ತೊಟ್ಟುಗಳನ್ನು ಸ್ನಾನದ ತೊಟ್ಟಿಯ ನೀರಿಗೆ ಬೆರೆಸಿ ಈ ನೀರಿನಲ್ಲಿ ನೋವಿರುವ ಭಾಗ ಪೂರ್ಣವಾಗಿ ಮುಳುಗುವಂತೆ ಸುಮಾರು ಅರ್ಧಘಂಟೆಯಾದರೂ ಇರಬೇಕು. ಈ ಎಣ್ಣೆ ಸ್ನಾಯುಗಳ ನೋವನ್ನು ನಿವಾರಿಸುವ ಜೊತೆಗೇ ಇದರ ಪರಿಮಳ ಮನಸ್ಸನ್ನು ನಿರಾಳಗೊಳಿಸುತ್ತದೆ. ಅಲ್ಲದೇ ಭುಜದ ಹಾಗೂ ಕುತ್ತಿಗೆಯ ನೋವನ್ನೂ ಇಲ್ಲವಾಗಿಸುತ್ತದೆ.
ಅರಿಶಿನದ ಲೇಪ: ಅರಿಶಿನದಲ್ಲಿರುವ ಕುರ್ಕುಮಿನ್ ಎಂಬ ಪೋಷಕಾಂಶದಲ್ಲಿ ಪ್ರಬಲ ಉರಿಯೂತ ನಿವಾರಕ ಗುಣವಿದೆ. ಹಾಗಾಗಿ ಉರಿಯೂತದ ಕಾರಣದಿಂದ ಊದಿಕೊಂಡು ನೋವು ಎದುರಾಗಿರುವ ಭುಜದ ನೋವಿಗೆ ಅರಿಶಿನದ ಲೇಪ ಹೆಚ್ಚಿನ ಪೋಷಣೆ ಒದಗಿಸುತ್ತದೆ. ಇದಕ್ಕಾಗಿ ಕೊಂಚ ಉಗುರು ಬೆಚ್ಚಗಿನ ಕೊಬ್ಬರಿ ಎಣ್ಣೆಯಲ್ಲಿ ಅರಿಶಿನದ ಪುಡಿಯನ್ನು ಬೆರೆಸಿ ನೋವಿರುವ ಭಾಗಕ್ಕೆ ತೆಳುವಾಗಿ ಲೇಪಿಸಿಕೊಂಡು ಒಣಗಲು ಬಿಡಬೇಕು. ಕನಿಷ್ಟ ಅರ್ಧ ಘಂಟೆಯಾದರೂ ಹಾಗೇ ಬಿಟ್ಟು ಬಳಿಕ ತೊಳೆದುಕೊಳ್ಳಬೇಕು.
ಭುಜಗಳನ್ನು ಸೆಳೆಯುವ ವ್ಯಾಯಾಯ: ಭುಜಗಳನ್ನು ಸೆಳೆಯಬಹುದಾದ ಯಾವುದೇ ಬಗೆಯ ಸರಳ ವ್ಯಾಯಾಮವನ್ನು ದಿನಕ್ಕೆ ಎರಡರಿಂದ ಮೂರು ಬಾರಿ, ಆದರೆ ತುಂಬಾ ನಿಧಾನವಾಗಿ ನಿರ್ವಹಿಸಬೇಕು. ಉದಾಹರಣೆಗೆ ನೋವಿರುವ ಭುಜದ ಕೈಯನ್ನು ನಿಧಾನವಾಗಿ ಕೆಳಗಿನಿಂದ ಕೈ ಮಡಚದೇ ಮೇಲೆತ್ತಿ ನಿಧಾನವಾಗಿಯೂ ಇಳಿಸಬೇಕು. ನಿಮ್ಮ ಮನೆಯ ಕಪಾಟಿನ ಎರಡೂ ಬಾಗಿಲುಗಳನ್ನು ತೆರೆದು ನಿಧಾನವಾಗಿ ಮುಚ್ಚುವುದು ಇನ್ನೊಂದು ವ್ಯಾಯಾಮವಾಗಿದೆ. ಆದರೆ ಇದಕ್ಕೂ ಮುನ್ನ ನೋವಿರುವ ಭಾಗಕ್ಕೆ ಶಾಖವನ್ನು ನೀಡುವ ಬಿಸಿನೀರಿನ ಬಾಟಲಿಯಿಂದ ಈ ಭಾಗಕ್ಕೆ ಕೊಂಚ ಶಾಖ ನೀಡಿದರೆ ಉತ್ತಮ ಪರಿಣಾಮ ದೊರಕುತ್ತದೆ. ಉಳಿದ ವ್ಯಾಯಾಮಗಳಲ್ಲಿ ಟವೆಲ್ಲೊಂದರ ಎರಡೂ ತುದಿಗಳನ್ನು ಕೈಗಳಲ್ಲಿ ಹಿಡಿದು ಟವೆಲ್ ಮುಂಭಾಗದಿಂದ ಬೆನ್ನಿನವರೆಗೆ ಬರುವಂತೆ ಕೈಗಳನ್ನು ಮಡಚದೇ ತರುವ ಮೂಲಕ ಭುಜದ ಸ್ನಾಯುಗಳಿಗೆ ಉತ್ತಮ ವ್ಯಾಯಾಮ ದೊರಕುತ್ತದೆ. ಅಲ್ಲದೇ ಕೈಗಳನ್ನು ಪಕ್ಕಕ್ಕೆ ಸೆಳೆಯುವ ಹಾಗೂ ಕ್ರಿಕೆಟ್ ಬೌಲಿಂಗ್ ಮಾಡುವ ಪರಿಯಲ್ಲಿ ಪ್ರದಕ್ಷಿಣ ಮತ್ತು ಅಪ್ರದಕ್ಷಿಣವಾಗಿ ಕೈಗಳನ್ನು ತಿರುಗಿಸುವ ಮೂಲಕವೂ ಉತ್ತಮ ವ್ಯಾಯಾಮ ಪಡೆಯಬಹುದು.