ಭುಜಗನಪುರದಲ್ಲಿ ಬಾನಲ್ಲೆ ಮದುವೆಗೆ ಚಲನಚಿತ್ರದ ಆಡಿಯೋ ಬಿಡುಗಡೆ

ಚಾಮರಾಜನಗರ, ಮಾ. 04:- ಯುವ ನಿರ್ದೇಶಕ ಯೋಗೇಶ ನಂದ ನಿರ್ದೇಶನ ಮಾಡಿರುವ ಬಾ ನಲ್ಲೆ ಮದುವೆಗೆ ಚಲನ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ನಿರ್ದೇಶಕರ ಸ್ವಗ್ರಾಮ ಭುಜಗನಪುರದಲ್ಲಿ ಇಂದು ಗ್ರಾಮಸ್ಥರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.
ಭುಜಗನಪುರ ಗ್ರಾಮ ಅಕ್ಷರಶಃ ತಳಿರು ತೋರಣಗಳಿಂದ ಶೃಂಗಾರ ಗೊಂಡಿತ್ತು. ಬಾ ನಲ್ಲೆ ಮದುವೆ ಚಿತ್ರದ ಪೋಸ್ಟರ್ ಹಾಗೂ ಫೆಕ್ಸ್‍ಗಳನ್ನು ಕಟ್ಟಿ, ಮಾವಿನ ತೋರವನ್ನು ಕಟ್ಟಿ ಗಣ್ಯರನ್ನು ಸ್ವಾಗತಿಸಲಾಯಿತು. ಗ್ರಾಮದ ದೇವತೆ ಮಾರಮ್ಮ ಸನ್ನಿಧಿಯಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಯೋಗೇಶ್ ತಾಯಿ ಕೆಂಪಮ್ಮ ಅಡಿಯೋ ಬಿಡುಗಡೆ ಮಾಡುವ ಮೂಲಕ ಪ್ರಥಮ ಹಾಡಿನಲ್ಲಿ ನಾಯಕ ನಟನೊಂದಿಗೆ ಹಬ್ಬದ ಹಾಡಿ ಸಂಭ್ರಮದಲ್ಲಿ ಭುಜಗನಪುರ ಗ್ರಾಮಸ್ಥರೆಲ್ಲರು ಭಾಗವಹಿಸಿರುವುದು ವಿಶೇಷವಾಗಿತ್ತು.
ಕಲಾವಿದರಾದ ಮೈಸೂರಿನ ಶ್ರೀ ಹರಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಮಾತನಾಡಿ, ಬಾ ನಲ್ಲೆ ಮದುವೆಗೆ ಚಲನ ಚಿತ್ರ ಯಶಸ್ಸು ದೊರೆಯಲಿ. ಚಾಮರಾಜನಗರ ಜಿಲ್ಲೆ ಕಲಾವಿದರ ಬೀಡು. ಡಾ. ರಾಜಕುಮಾರ್ ಹುಟ್ಟಿದ ನಾಡು. ಬಹಳಷ್ಟು ಮಂದಿ ಚಿತ್ರರಂಗದಲ್ಲಿ ಯಶಸ್ಸು ಕಂಡಿದ್ದಾರೆ. ಆದೇ ಹಾದಿಯಲ್ಲಿ ಯುವ ನಿರ್ದೇಶಕ ಯೋಗೇಶ್ ಮುನ್ನಡೆಯಲಿ. ಪ್ರಥಮ ಚಿತ್ರವೇ ಬಹಳ ಅದ್ಬುತವಾಗಿ ಮೂಡಿ ಬಂದಿದೆ. ಚಿತ್ರ ಹಾಡುಗಳು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಛಾಯಾಗ್ರಾಹಣ ಚೆನ್ನಾಗಿ. ಈ ಚಿತ್ರವನ್ನು ಎಲ್ಲರು ಚಿತ್ರಮಂದಿರದಲ್ಲಿಯೇ ನೋಡಿ ಪ್ರೋತ್ಸಾಹಿಸಬೇಕು ಎಂದರು.
ಗ್ರಾ.ಪಂ. ಮಾಜಿ ಸದಸ್ಯ ಕೆಂಪರಾಜು ಮಾತನಾಡಿ, ಯುವಕರಾಗಿರುವ ಯೋಗೇಶ್ ಭುಜಗನಪುರ ಸಣ್ಣ ಗ್ರಾಮದಿಂದ ಬೆಂಗಳೂರಿಗೆ ಹೋಗಿ ತರಬೇತಿ ಪಡೆದು, ನಿರ್ದೇಶಕನಾಗಿ ಚಲನಚಿತ್ರ ನಿರ್ಮಾಣ ಮಾಡುವ ಹಂತಕ್ಕೆ ಬಂದಿರುವುದು ಸಾಧನೆಯಾಗಿದೆ. ಅವರ ಪ್ರಯತ್ನಕ್ಕೆ ನಮ್ಮೆಲ್ಲರ ಬೆಂಬಲ ಸದಾ ಇದೆ. ಜಿಲ್ಲಾ ಕೇಂದ್ರದಲ್ಲಿ ಕಾರ್ಯಕ್ರಮ ಮಾಡುವ ಮೂಲಕ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಉತ್ತಮ ಹೆಸರು ಮಾಡಲಿ. ಅಲ್ಲದೇ ಬೆಂಗಳೂರಿನಲ್ಲಿ ಬೆಳೆದರು ಸಹ ನನ್ನ ಊರಿನಲ್ಲಿ ಚಿತ್ರದ ಅಡಿಯೋ ಬಿಡುಗಡೆ ಮಾಡಬೇಕೆಂಬ ಅವರ ಹಂಬಲ ಮೆಚ್ಚುವಂತಾಗಿದೆ ಎಂದರು.
ಸಾಹಿತಿ ಶ್ರೀಧರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಚಲನಚಿತ್ರಗಳನ್ನು ನಿರ್ಮಾಣ ಮಾಡುವುದು ಎಂದರೆ ಕಷ್ಟದ ಕೆಲಸವಾಗಿದೆ. ಕೋಟಿ ಲೆಕ್ಕದಲ್ಲಿ ಹಣ ಸುರಿಬೇಕಾಗಿದೆ. ಆದರೆ, ನಮ್ಮ ಭಾಗದ ಯೋಗೇಶ್ ಅವರು ಈ ಮಧ್ಯೆ ಧೈರ್ಯ ಮಾಡಿ ಬಾ ನಲ್ಲೆ ಮದುವೆ ಚಿತ್ರದ ನಿರ್ದೇಶನ ಮಾಡುವ ಜೊತೆಗೆ ನಿರ್ಮಾಪಕರು ಆಗಿದ್ದಾರೆ. ಅವರ ಪ್ರಯತ್ನಕ್ಕೆ ನಾವೆಲ್ಲರು ಬೆಂಬಲವಾಗಿ ನಿಲ್ಲಬೇಕು. ಇಂಥ ಯುವ ಪ್ರತಿಭೆಗಳನ್ನು ಬೆಳೆಸುವ ಮೂಲಕ ಚಲನ ಚಿತ್ರ ರಂಗಕ್ಕೆ ಆಸ್ತಿಯನ್ನಾಗಿಸಬೇಕು ಎಂದರು.
ನಾಯಕ ನಟ ಅರ್ಜುನ್ ಮಾತನಾಡಿ, ಬಾ ನಲ್ಲೆ ಮದುವೆ ಚಿತ್ರ ಬಹಳ ಚೆನ್ನಾಗಿ ಮೂಡಿ ಬಂದಿದೆ. ಈ ಚಿತ್ರದಲ್ಲಿ ನನ್ನನ್ನು ನಾಯಕ ನಟನ್ನಾಗಿ ಆಯ್ಕೆ ಮಾಡಿದ ನಿರ್ದೇಶಕ ಯೋಗೇಶ್ ಅವರಿಗೆ ಅಭಾರಿಯಾಗಿದ್ದೇನೆ. ನವಿರಾದ ಪ್ರೇಮ ಕಥೆಯನ್ನು ಚಿತ್ರ ಹೊಂದಿದೆ. ಚಿತ್ರವನ್ನು ಚಿತ್ರಮಂದಿರದಲ್ಲಿಯೇ ನೋಡುವ ಮೂಲಕ ನಮ್ಮನ್ನು ಪ್ರೋತ್ಸಾಹಿಸಬೇಕು ಎಂದರು.
ಚಿತ್ರದ ನಿರ್ದೇಶಕ ಯೋಗೇಶ್ ನಂದ ಮಾತನಾಡಿ, ಬೆಂಗಳೂರಿನಲ್ಲಿ ಚಲನಚಿತ್ರ ನಿರ್ದೇಶಕ ಪದವಿ ಪಡೆದುಕೊಂಡಾಗ ಸ್ವಂತ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣ ಮಾಡಬೇಕೆಂಬ ನನ್ನ ಆಸೆ ತಾಯಿ ಎಲ್ಲಾ ರೀತಿಯ ಸಹಕಾರ ನೀಡಿದ್ದಾರೆ. ಇದೊಂದು ನವಿರಾದ ಪ್ರೇಮ ಕಥೆಯಾಗಿದ್ದು, ನನ್ನ ಸ್ವಗ್ರಾಮ ಹಾಗು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಈ ಚಿತ್ರವನ್ನು ತಾವೆಲ್ಲರು ನೋಡುವ ಮೂಲಕ ಪ್ರೋತ್ಸಾಹಿಸಬೇಕು ಎಂದರು.
ರಂಗಭೂಮಿ ಕಲಾವಿದ ಉಮ್ಮತ್ತೂರು ಬಸವರಾಜು ಅವರು ಪ್ರಾಸ್ತವಿಕವಾಗಿ ಬಹಳ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪನೆ ಮಾಡಿ, ಗ್ರಾಮಸ್ಥರನ್ನು ತಮ್ಮ ಗ್ರಾಮೀಣ ಹಾಸ್ಯದಲ್ಲಿ ರಂಜಿಸಿದರು. ಚಿತ್ರದಲ್ಲಿ ನನಗೊಂದು ಪಾತ್ರವನ್ನು ಕೊಟ್ಟಿದ್ದು, ನಮ್ಮೂರಿನ ಪ್ರತಿಭೆ ಚಿತ್ರರಂಗದಲ್ಲಿ ಬೆಳೆಯಬೇಕು. ಅಂಥ ಪ್ರತಿಭೆ ಅವರಲ್ಲಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಮಂಜು, ಚನ್ನಬಸಪ್ಪ, ಯಜಮಾನ ರಾಜಣ್ಣ, ಬಿಳಿಗಿರಿ, ಕೆರೆಹಳ್ಳಿ ಮಂಜು ಮಾಸ್ಟರ್ ಹಾಗೂ ಭುಜಗನಪುರದ ಅಂಬೇಡ್ಕರ್ ಯುವಕ ಸಂಘದ ಪದಾಧಿಕಾರಿಗಳು, ಯುವಕರು, ಗ್ರಾಮಸ್ಥರು, ಮಹಿಳಾ ಸಂಘದ ಪ್ರತಿನಿಧಿಗಳು ಹೆಚ್ಚಿನ ಸಂಖ್ಕೆಯಲ್ಲಿ ಇದ್ದರು.