ಭೀಮ ಕೋರೆಗಾವ್ ವಿಜಯೋತ್ಸವ ಆಚರಣೆ

ದಾವಣಗೆರೆ.ಜ.೩; ನಗರದ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರಗತಿಪರ ಚಿಂತಕರ ವೇದಿಕೆಯ ವತಿಯಿಂದ ಭೀಮ ಕೋರೆಗಾವ್ ವಿಜಯೋತ್ಸವ ಆಚರಣೆ ಮಾಡಲಾಯಿತು.  ಈ ಸಂದರ್ಭದಲ್ಲಿ ವಕೀಲರಾದ ಅನೀಸ್ ಪಾಶ  ಮಾತನಾಡಿ ಭೀಮ ಕೋರೆಗಾಂವ್ ಯುದ್ಧವು 1 ನೇ ಜನವರಿ 1818 ರಲ್ಲಿ ನಡೆದಿದ್ದು, 500 ಮಂದಿ ದಲಿತ ಹೋರಾಟಗಾರರು 28 ಸಾವಿರ ಮಂದಿ ಇದ್ದ ಸೈನ್ಯದ ವಿರುದ್ಧ ನಿರಂತರವಾಗಿ ಕಾದಾಡಿ ಪೇಶ್ವೆಗಳ ವಿರುದ್ಧ ಗೆಲುವನ್ನು ಸಾಧಿಸಿದ ದಿನವಾಗಿದೆ. ನಮ್ಮ ದೇಶದಲ್ಲಿ ಅಸ್ಪೃಶ್ಯತೆಯ ವಿರುದ್ಧ ನಡೆದಂತಹ ಯುದ್ಧವಾಗಿದ್ದು, ಇದು ನಮಗೆ ಪಾಠವಾಗಿದೆ. ಆ ಯುದ್ಧದ ಎರಡನೇ ಶತಮಾನದ ವಿಜಯೋತ್ಸವದ ಸಂದರ್ಭದಲ್ಲಿ ಕೆಲವು ಕೋಮುವಾದಿಗಳು ಗಲಾಟೆಯನ್ನು ಸೃಷ್ಟಿಸಿ ಸುಮಾರು ಜನ ಪ್ರಾಣ ಕಳೆದುಕೊಂಡಿದ್ದಲ್ಲದೆ ಕೋಟ್ಯಾಂತರ ನಷ್ಟ ಕೂಡ ಆಗಿದೆ. ಅದೂ ಅಲ್ಲದೆ ಸುಳ್ಳು ಅಪವಾದಗಳನ್ನು ಮಾಡಿ ಆನಂದ್ ತೇಲ್ತುಂಬ್ಡೆ, ಸ್ಟ್ಯಾನಿ ಸ್ವಾಮಿ, ಸುಧಾ ಭಾರದ್ವಾಜ್ ರಂತಹ ಬಹಳಷ್ಟು ಹೋರಾಟಗಾರರನ್ನ ಜೈಲಿಗೆ ಅಟ್ಟಲಾಗಿದೆ. ಅವರಿಗೆ ನ್ಯಾಯಾಲಯಗಳು ಇದುವರೆಗೆ ಜಾಮೀನನ್ನು ನೀಡಿರುವುದಿಲ್ಲ. ಅವರನ್ನು ಬಿಡಿಸಲು ನಾವುಗಳೆಲ್ಲರೂ ಮತ್ತೆ ಹೋರಾಟ ಮಾಡಬೇಕಾಗಿದೆ ಎಂದು ತಿಳಿಸಿದರು. ಕತ್ತಲಗೆರೆ ತಿಪ್ಪಣ್ಣ ಮಾತನಾಡಿ ಆಗಿನ ಕಾಲದಲ್ಲಿ ಮನುಸ್ಮೃತಿಯ ಅನುಯಾಯಿಗಳು ದಲಿತರನ್ನು ಅತ್ಯಂತ ಕ್ರೂರ ರೀತಿಯಲ್ಲಿ ನಡೆಸಿಕೊಳ್ಳುತ್ತಿದ್ದರು, ಆ ಸಂದರ್ಭದಲ್ಲಿ ತುಂಬಾ ಕಡಿಮೆ ಸಂಖ್ಯೆಯಲ್ಲಿದ್ದ ದಲಿತ ಹೋರಾಟಗಾರರ ಯುದ್ಧವಾಗಿದೆ. ಇದು ದಲಿತರ ಪಾಲಿಗೆ ಒಂದು ಐತಿಹಾಸಿಕ ಯುದ್ಧವಾಗಿದೆ ಎಂದು ಸವಿಸ್ಥಾರವಾಗಿದೆ ಎಂದು ತಿಳಿಸಿದರು. ಹೆಚ್ ಮಲ್ಲೇಶ್  ಮಾತನಾಡಿ ದಲಿತರ ಉಗುಳು ನೆಲಕ್ಕೆ ಬೀಳದಂತೆ ಕೊರಳಿಗೆ ಮಡಿಕೆಯನ್ನು ಮತ್ತು ನಡೆದ ಜಾಗದಲ್ಲಿ ಗುರುತು ಕಾಣದಂತೆ ಪರಕೆಯನ್ನು ಬೆನ್ನಿಗೆ ಕಟ್ಟಿಕೊಂಡು ಓಡಾಡಬೇಕಾಗಿತ್ತು. ಹೀಗೆ ವಿವಿಧ ರೀತಿಯಲ್ಲಿ ದಲಿತರನ್ನು ಅಸ್ಪೃಶ್ಯರನ್ನಾಗಿ ಶೋಷಣೆಗೆ ಒಳಪಡಿಸುತ್ತಿದ್ದರು. ಹೀಗಿದ್ದಾಗ ಶೋಷಣೆಯನ್ನು ಸಹಿಸಲಾರದೆ ಅದರ ವಿರುದ್ಧ ಸಿಡಿದೆದ್ದು ನಡೆದಂತಹ ಒಂದು ಯುದ್ಧವಾಗಿದೆ. ಈ ವಿಚಾರವನ್ನು ಬಾಬಾ ಸಾಹೇಬ್ ಅಂಬೇಡ್ಕರ್ ರವರು ವಿವರವಾಗಿ ತಿಳಿಸಿದ್ದು, ಅವರು ಕುಟುಂಬ ಸಮೇತರಾಗಿ ಹೋಗಿ ಗೌರವ ಸಮರ್ಪಣೆ ಮಾಡುತ್ತಿದ್ದರು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಮುರುಡಪ್ಪ, ವೆಂಕಟೇಶ್ ಬಾಬು ಮಾತನಾಡಿದರು. ಸಭೆಯಲ್ಲಿ ಅಲ್ಲಾಭಕ್ಷಿ, ಅಬ್ದುಲ್ ಸಮದ್, ಸಿದ್ದರಾಮಪ್ಪ, ಬಸವರಾಜ್, ಚನ್ನಬಸಪ್ಪ, ನಾಗರಾಜ್, ಲೋಹಿತ್ ಕುಮಾರ್, ಎಸ್ ಮೂರ್ತಿ, ದಾನಪ್ಪ, ರಾಜ್ ಶೇಖರ್, ಜಾಕೋಬ್, ಮುಸ್ತಾಫಾ, ಸಿದ್ದಪ್ಪ ಮತ್ತಿತರರು ಹಾಜರಿದ್ದರು.