ಭೀಮ್ ಆರ್ಮಿ ಮುಖ್ಯಸ್ಥ ಆಜಾದ್ ಬೆಂಗಾವಲು ಮೇಲೆ ಗುಂಡಿನ ದಾಳಿ

ಲಕ್ನೋ, ಅ ೨೬- ತನ್ನ ಬೆಂಗಾವಲು ಪಡೆಯ ಮೇಲೆ ಕೆಲ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಭೀಮ್ ಆರ್ಮಿ ಮುಖ್ಯಸ್ಥ, ಆಜಾದ್ ಸಮಾಜ ಪಕ್ಷದ ನಾಯಕ ಚಂದ್ರಶೇಖರ್ ಆಜಾದ್ ಆರೋಪಿಸಿದ್ದಾರೆ.
ಉತ್ತರ ಪ್ರದೇಶದ ಬುಲಂದ್‌ಶಹರ್ ನಲ್ಲಿ ದಾಳಿ ನಡೆದಿದೆ ಎಂದು ಅವರು ಹೇಳಿದ್ದಾರೆ. ಈ ಸಂಬಂಧ ಅವರು ಟ್ವಿಟ್ ಮಾಡಿದ್ದಾರೆ. “ಬುಲಂದ್‌ಶಹರ್ ಉಪ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದರಿಂದ ಪ್ರತಿ ಸ್ಪರ್ಧಿ ಪಕ್ಷಗಳು ಭಯ ಭೀತಿಗೊಳಗಾಗಿವೆ. ಬುಲಂದ್ ಶಹರ್ ಚುನಾವಣೆ ಪ್ರಚಾರ ಸಭೆ ಪ್ರತಿಸ್ಪರ್ಧಿಗಳಿಗೆ ನಿದ್ರೆ ಇಲ್ಲದಂತೆ ಮಾಡಿದೆ. ಹಾಗಾಗಿ ತಮ್ಮ ಬೆಂಗಾವಲಿನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಘಟನೆ ಪ್ರತಿಸ್ಪರ್ಧಿಗಳಲ್ಲಿರುವ ಚುನಾವಣೆಯಲ್ಲಿ ಸೋಲುವ ನಿರಾಸೆಯನ್ನು ಸೂಚಿಸುತ್ತಿದೆ. ಚುನಾವಣೆಯಲ್ಲಿ ಸೋಲುವ ಭಯದಿಂದ.. ಬುಲಂದ್ ಶಹರ್ ನಲ್ಲಿ ವಾತಾವರಣ ಹಾಳುಗೆಡವಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ಚಂದ್ರ ಶೇಖರ್ ಆಜಾದ್ ಹೇಳಿದ್ದಾರೆ.
ಆದರೆ, ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಕುಮಾರ್ ಸಿಂಗ್, ಘಟನೆ ನಡೆದಿರುವುದನ್ನು ಖಚಿತಪಡಿಸಿಲ್ಲ. ಘಟನೆಗೆ ಸಂಬಂಧಿಸಿದಂತೆ ವಿವರ ಸಂಗ್ರಹಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ. ಇನ್ನೂ ಆಜಾದ್ ಸಮಾಜ ಪಕ್ಷದ ಹೆಸರಿನಲ್ಲಿ ರಾಜಕೀಯ ಪ್ರವೇಶಿಸುವುದಾಗಿ ಚಂದ್ರ ಶೇಖರ್ ಆಜಾದ್ ಈ ಹಿಂದೆ ಘೋಷಿಸಿ, ಭೀಮ್ ಆರ್ಮಿ ಪಕ್ಷದ ಅಂಗವಾಗಿ ಮುಂದುವರಿಸುವುದಾಗಿ ಹೇಳಿದ್ದರು.ಈ ಕ್ರಮವಾಗಿ ಆಜಾದ್ ಸಮಾಜ ಪಕ್ಷ (ಎಎಸ್ಪಿ) ಮೊದಲ ಬಾರಿಗೆ ಚುನಾವಣೆಯಲ್ಲಿ ಕಣಕ್ಕಿಳಿದಿದೆ. ಉತ್ತರ ಪ್ರದೇಶ ಬುಲಂದ್‌ಶಹರ್ ವಿಧಾನಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಹಾಜಿ ಯಾಮಿನ್ ಎಂಬುವರನ್ನು ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ. ಬುಲಂದಶಹರ್ ಶಾಸಕರಾಗಿದ್ದ ಬಿಜೆಪಿ ನಾಯಕ ವಿರೇಂದ್ರ ಸಿರೋಹಿ ನಿಧನದಿಂದಾಗಿ ಇಲ್ಲಿ ಉಪ ಚುನಾವಣೆ ನಡೆಯುತ್ತಿದೆ. ಈ ಕ್ಷೇತ್ರ ಸೇರಿದಂತೆ ಒಟ್ಟು ಏಳು ಕ್ಷೇತ್ರಗಳಿಗೆ ನವೆಂಬರ್ ೩ ರಂದು ಉಪ ಚುನಾವಣೆ ನಡೆಯಲಿದೆ. ಚುನಾವಣಾ ದಿನ ಸಮೀಪಿಸುತ್ತಿರುವಂತೆ ಎ ಎಸ್ಪಿ ಕಾರ್ಯಕರ್ತರು ತಮ್ಮ ಅಭ್ಯರ್ಥಿಯ ಪರವಾಗಿ ಭಾರಿ ಪ್ರಚಾರ ನಡೆಸುತ್ತಿದ್ದಾರೆ. ಮನೆ ಮನೆ ಪ್ರಚಾರದ ಅಭಿಯಾನ ಆರಂಭಿಸಿದ್ದಾರೆ.