ಭೀಮಾ ನದಿಗೆ ಹರಿದು ಬಂತು 0.015 ಟಿಎಂಸಿ ನೀರು ನಾಳೆಯಿಂದ ಅಫಜಲಪುರ ಪಟ್ಟಣಕ್ಕೆ ನೀರು ಸರಬರಾಜು

ಸಂಜೆ ವಾಣಿ ಫಲಶೃತಿ
ಅಫಜಲಪುರ:ಸೆ.26: ಭೀಮಾ ನದಿಯಲ್ಲಿ ಉಂಟಾದ ನೀರಿನ ಅಭಾವ ಹಾಗೂ ಅಫಜಲಪುರ ಪಟ್ಟಣದಲ್ಲಿ ಸ್ಥಗಿತಗೊಂಡ ನೀರು ಸರಬರಾಜು ಎಂಬ ಶೀರ್ಷಿಕೆ ಅಡಿಯಲ್ಲಿ ದಿ. ಸೆ. 25 ರಂದು ಸಂಜೆ ವಾಣಿ ದಿನಪತ್ರಿಕೆಯಲ್ಲಿ ಪ್ರಕಟಗೊಂಡ ವರದಿ ಹಿನ್ನೆಲೆ ಸಂಬಂಧಪಟ್ಟ ಅಧಿಕಾರಿಗಳು ತ್ವರಿತಗತಿಯಲ್ಲಿ ಭೀಮಾ ನದಿಗೆ ಮಂಗಳವಾರ ಬೆಳಗಿನ ಜಾವ ನೀರು ಬಿಟ್ಟಿದ್ದಾರೆ.

ಇಂಡಿ ಉಪ ವಿಭಾಗದ ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಶಿವಪುರ ಗೇಟ್‍ಗಳನ್ನು ನಿನ್ನೆ ಸಾಯಂಕಾಲ ಬಂದ್ ಮಾಡಲಾಗಿದ್ದು ಇದೀಗ ಭೀಮಾ ಆಣೆಕಟ್ಟಿನಿಂದ 0.015 ಟಿಎಂಸಿ ನೀರು ಹರಿಸಲಾಗಿದೆ. ನದಿಯಲ್ಲಿ ಸಂಗ್ರಹವಾದ 0.015 ಟಿಎಂಸಿ ನೀರಿನಿಂದ ಸುಮಾರು 2 ತಿಂಗಳವರೆಗೆ ಅಫಜಲಪುರ ಪಟ್ಟಣಕ್ಕೆ ನಿಯಮಿತವಾಗಿ ನೀರು ಸರಬರಾಜು ಆಗಲಿದ್ದು ನಾಳೆಯಿಂದ ಎಂದಿನಂತೆ ಅಫಜಲಪುರ ಪಟ್ಟಣಕ್ಕೆ ನೀರು ಸರಬರಾಜು ಮಾಡುವುದಾಗಿ ಪುರಸಭೆಯ ಅಧಿಕಾರಿಗಳು ತಿಳಿಸಿದ್ದಾರೆ.


ನಾಳೆಯಿಂದ ಅಫಜಲಪುರ ಪಟ್ಟಣಕ್ಕೆ ಎಂದಿನಂತೆ ನೀರು ಸರಬರಾಜು ಮಾಡಲಾಗುವುದು ಹಾಗೂ ಭೀಮಾ ಆಣೆಕಟ್ಟಿನಲ್ಲಿ ನೀರಿನ ಸಂಗ್ರಹ ಪ್ರಮಾಣ ಕಡಿಮೆ ಇರುವುದರಿಂದ ಜನರಿಗೆ ಕುಡಿಯುವ ನೀರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ನದಿ ಪಾತ್ರದ ಪಂಪ್‍ಸೆಟ್‍ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಅಫಜಲಪುರ ಜೆಸ್ಕಾಂ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಹಾಗೂ ಶಿವಪುರ ಗೇಟ್ ಬಳಿ ಸಿಬ್ಬಂದಿ ನಿಯೋಜಿಸುವಂತೆ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು.

ವಿಜಯ ಮಹಾಂತೇಶ, ಮುಖ್ಯಾಧಿಕಾರಿಗಳು ಪುರಸಭೆ ಅಫಜಲಪುರ