ಭೀಮಾ ನದಿಗೆ ನೀರು ಹರಿಸಲು ಆಗ್ರಹಿಸಿ ರಸ್ತೆ ತಡೆದು ಮಿಂಚಿನ ಪ್ರತಿಭಟನೆ|ಅಕ್ರಮ ಮರಳು ದಂಧೆಯಲ್ಲಿ ಅಧಿಕಾರಿಗಳು ಷಾಮೀಲು: ಸಿದ್ದು ದಣ್ಣೂರ ಗಂಭಿರ ಆರೋಪ

ಅಫಜಲಪುರ:ಏ.6: ಸೊನ್ನ ಅಣೆಕಟ್ಟಿನಿಂದ ಭೀಮಾ ನದಿಗೆ ನೀರು ಹರಿಸುವಂತೆ ಆಗ್ರಹಿಸಿ ಗುಡ್ಡೇವಾಡಿ ಹಾಗೂ ಭೀಮಾನದಿಗೆ ಹೊಂದಿಕೊಂಡಿರುವ ಸುತ್ತಮುತ್ತಲ ರೈತರು ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆದು ಮಿಂಚಿನ ಪ್ರತಿಭಟನೆ ನಡೆಸಿದರು.

ಕರ್ನಾಟಕ ಪ್ರಾಂತ ರೈತ ಸಂಘ ಅಫಜಲಪುರ ಹಾಗೂ ತಾಲೂಕಾ ಜಲಸಮಿತಿಗಳ ಒಕ್ಕೂಟದ ಸಹಯೋಗದೊಂದಿಗೆ ಹಮ್ಮಿಕೊಂಡ ಪ್ರತಿಭಟನೆ ಉದ್ದೇಶಿಸಿ ಜಲಸಮಿತಿ ಒಕ್ಕೂಟದ ತಾಲೂಕು ಅಧ್ಯಕ್ಷ ಸಿದ್ದು ದಣ್ಣೂರ ಮಾತನಾಡಿ, ಕಳೆದ 20 ದಿನಗಳಿಂದ ತಾಲೂಕಿನ ಗುಡ್ಡೇವಾಡಿ ಗ್ರಾಮಕ್ಕೆ ಹೊಂದಿಕೊಂಡಿರುವ ಭೀಮಾ ನದಿಯಲ್ಲಿ ರೈತರು ಹಗಲು ರಾತ್ರಿ ಎನ್ನದೇ ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ನಾರಾಯಣಪುರ ಜಲಾಶಯದಿಂದ ಸೊನ್ನ ಆಣೆಕಟ್ಟಿಗೆ 1 ಟಿಎಂಸಿ ನೀರು ಹರಿಸಲಾಗಿದೆ. ಆದರೆ ಸೊನ್ನ ಅಣೆಕಟ್ಟಿನಿಂದ ಭೀಮಾ ನದಿಗೆ ನೀರು ಹರಿಸದ ಕಾರಣ ನದಿ ಪಾತ್ರದ ಗ್ರಾಮೀಣ ಭಾಗದ ಜನ ಜಾನುವಾರಗಳು ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ. ಅಲ್ಲದೆ ಭೀಮಾ ನದಿಯಲ್ಲಿ ನೀರಿಲ್ಲದ ಕಾರಣ ಅಕ್ರಮ ಮರಳು ದಂಧೆಕೋರರು ಮರಳು ಸಾಗಾಟ ಮಾಡುತ್ತಿದ್ದಾರೆ. ಈ ಅಕ್ರಮ ಮರಳು ದಂಧೆಯಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಂಪೂರ್ಣವಾಗಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿದ ಅವರು ಎಗ್ಗಿಲ್ಲದೆ ಅಕ್ರಮವಾಗಿ ಮರಳು ಸಾಗಾಟ ಮಾಡಲು ಭೀಮಾ ನದಿಗೆ ನೀರು ಹರಿಸುತ್ತಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇದು ಹೀಗೆ ಮುಂದುವರೆದರೆ ಮುಂದೊಂದು ದಿನ ಭೀಮಾ ನದಿ ನಾಶವಾಗುವುದರಲ್ಲಿ ಸಂಶಯವಿಲ್ಲ ಎಂದರು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ರಮೇಶ ಹೂಗಾರ ಮಾತನಾಡಿ, ಇಂದು ರೈತರ ಜೀವನ ಪ್ರತಿಯೊಂದಕ್ಕೂ ಹೋರಾಟ ಮಾಡಬೇಕಾದ ಅನಿವಾರ್ಯ ಬಂದೊದಗಿದೆ ಎಂದು ಸರ್ಕಾರದ ಆಡಳಿತ ವ್ಯವಸ್ಥೆಯ ವಿರುದ್ಧ ಕಿಡಿಕಾರಿದ ಅವರು ಸಾಲ ಮನ್ನಕ್ಕಾಗಿ ಹೋರಾಟ, ಬೆಳೆ ಪರಿಹಾರಕ್ಕಾಗಿ ಹೋರಾಟ, ನೀರಿಗಾಗಿ ಹೋರಾಟ ಹೀಗೆ ಎಲ್ಲದಕ್ಕೂ ಹೋರಾಟ ಮಾಡಿ ರೈತನ ಜೀವನ ಸಾಲದಲ್ಲಿ ಮುಳುಗಿ ಹೋಗಿದೆ. ಹೀಗಾಗಿ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ರೈತರ ಬೇಡಿಕೆಗಳನ್ನು ಈಡೇರಿಸಬೇಕು ಮತ್ತು ಈ ಕೂಡಲೇ ಭೀಮಾ ನದಿಗೆ ನೀರು ಹರಿಸಿ ರೈತರ ಹಿತ ಕಾಯಲು ಮುಂದೆ ಬರಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆ ಉದ್ದೇಶಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಅಶೋಕ ಹೂಗಾರ, ಅವ್ವಣ್ಣ ಮ್ಯಾಕೇರಿ ಅನೇಕರು ಮಾತನಾಡಿದರು.

ಪ್ರತಿಭಟನಾ ಸ್ಥಳಕ್ಕೆ ತಹಶೀಲ್ದಾರ್ ಸಂಜೀವಕುಮಾರ್ ದಾಸರ್ ಅವರು ತೆರಳಿ ಹೋರಾಟಗಾರರಿಂದ ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಅವರು, ನಿಮ್ಮ ನ್ಯಾಯಯುತ ಬೇಡಿಕೆಯನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಭೀಮಾ ನದಿಗೆ ನೀರು ಹರಿಸಲು ಪ್ರಯತ್ನ ಮಾಡುವುದಾಗಿ ತಿಳಿಸಿದರು.