
ಕಲಬುರಗಿ:ನ.02: ಜಿಲ್ಲೆಯ ತೊಗರಿ ನಾಡಿನಲ್ಲಿ ಮಳೆ ಕೊರತೆಯಿಂದ ರೈತರ ಹಣದ ಮಾಲು ತೊಗರಿ, ಕಬ್ಬು, ಹತ್ತಿ, ಶೇಂಗಾ, ಕಡಲೆ, ಜೋಳ, ಕುಸುಬಿ ಮುಂತಾದ ಬೆಳೆಗಳು ಒಣಗುತ್ತಿವೆ. ಮಳೆ ಕೊರತೆಯಿಂದ ಭೀಮಾ ನದಿಯಲ್ಲಿ ನೀರಿನ ಕೊರತೆ ಎದ್ದು ಕಾಣುತ್ತದೆ. ಹಾಗಾಗಿ ತಕ್ಷಣವೇ ಮಹಾರಾಷ್ಟ್ರ ರಾಜ್ಯದ ಪುಣೆಯ ಉಜನಿ ಆಣೆಕಟ್ಟೆಯಿಂದ ಭೀಮಾ ನದಿಗೆ ನೀರು ಬಿಡಲು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟನೆಕಾರರು ಗುರುವಾರ ಕರ್ನಾಟಕ ನೀರಾವರಿ ನಿಗಮ ನಿಯಮಿತ ಮುಖ್ಯ ಅಭಿಯಂತರರ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.
ಪ್ರತಿಭಟನೆಕಾರರು ನಂತರ ಜಲ ಮುಖ್ಯ ಅಭಿಯಂತರರ ಮೂಲಕ ರಾಜ್ಯದ ಜಲ ಸಂಪನ್ಮೂಲ ಸಚಿವರೂ ಆದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿ, ಬೆಣ್ಣೆತೊರಾ ಆಣೆಕಟ್ಟೆನಿಂದ ಹಾಗೂ ಗಂಡೋರಿ ನಾಲಾ ಆಣೆಕಟ್ಟು, ಮುಲ್ಲಾಮಾರಿ ಏತ ನೀರಾವರಿ ಜಲಾಶಯದಿಂದ ರೈತರ ಜಮೀನುಗಳಿಗೆ ಬೆಳೆಗಳು ಒಣಗುತ್ತಿರುವುದರಿಂದ ಎಲ್ಲ ರೈತರಿಗೆ ನೀರು ಬಿಡಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯ ತೊಗರಿ ನಾಡಿನಲ್ಲಿ ತೊಗರಿ ಬೆಳೆಗಾರರ ಪರಿಸ್ಥಿತಿ ಸಂಪೂರ್ಣ ಹದಗೆಟ್ಟು ಹೋಗಿದೆ. ರೈತರ ಸಿಕ್ಕಾಪಟ್ಟೆ ಲಾಗುವಾಡಿ ಮಾಡಿದ ಬೆಳೆಗಳು ಮಳೆ ಇಲ್ಲದೇ ತೊಗರಿ ಕಬ್ಬು, ಹತ್ತಿ, ಶೇಂಗಾ, ಕಡಲೆ, ಜೋಳ ಬೆಳೆಗಳಿಗೆ ಮಳೆರಾಯ ಕೈಕೊಟ್ಟಿದೆ. ಹೀಗಾಗಿ ಭೂಮಿ ಹಸಿ ಇಲ್ಲದೇ ಭೂಮಿ ತೇವಾಂಶ ಕಡಿಮೆ ಆಗಿ ಬೆಳೆಗಳು ಒಣಗುತ್ತಿವೆ. ರೈತರು ಮಾಡಿದ ಸಾಲ ಹೇಗೆ ತೋರಿಸಬೇಕು ಎಂಬ ಚಿಂತೆಯನ್ನು ಮಾಡುತ್ತಿದ್ದಾರೆ. ಅನ್ನದಾತರು ಜಿಗುಪ್ಸೆಗೊಂಡು ಸಾಲದ ಬಾಧೆ ತಾಳಲಾರದೇ ಸರಣಿ ರೈತರ ಆತ್ಮಹತ್ಯೆಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಜಿಲ್ಲೆಯ ಜನರು ಅನ್ನದಾತರು ಭೀಮಾ ನದಿ ನೀರಿನ ಮೇಲೆ ನಂಬಿ ಕುಳಿತ ಜನರಿಗೆ ನೀರಡಿಕೆಯಾಗಿದೆ. ಇಂತಹ ಸಮಯದಲ್ಲಿ ಮಹಾರಾಷ್ಟ್ರದ ಪುಣೆ ಉಜನಿ ಆಣೆಕಟ್ಟೆಯ ನೀರು ಬಿಡಲಾರದೇ ನೆನೆಗುದಿಗೆ ಹಾಕಿ ರೈತರು ಜನರು ಹನಿ ಕುಡಿಯುವ ನೀರಿಗಾಗಿ ಜ,ನರು ಪರದಾಡುವಂತಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಜಿಲ್ಲೆಯ ಬೆಣ್ಣೆತೊರೆ, ಗಂಡೋರಿ ನಾಲಾ, ಮುಲ್ಲಾಮಾರಿ ಜಲಾಶಯಗಳಿಂದ ರೈತರ ಜಮೀನುಗಳಿಗೆ ನೀರು ಹರಿಸಬೇಕು. ಆದಾಘ್ಯೂ, ನೀರು ಬಿಟ್ಟಿದ್ದ ಮುಖ್ಯ ಕಾಲುವೆ ಹೂಳು ತುಂಬಿ ಆಪ್ ಬೆಳೆದಿದೆ. ನೀರು ಮುಂದಕ್ಕೆ ಹೋಗಲು ಸಾಧ್ಯವಿಲ್. ಹೀಗಾಗಿ ರೈತರ ಬೆಳೆಗಳು ಒಣಗಿ ಹೋಗುತ್ತಿವೆ. ಕನಿಷ್ಠ ನವೆಂಬರ್ ಮತ್ತು ಡಿಸೆಂಬರ್ ತಿಂಗಳವರೆಗೆ ಅನ್ನದಾತರ ಹಿತ ಕಾಪಾಡಲು ನೀರು ಹರಿಸಬೇಕು ಎಂದು ಅವರು ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರೇವಣಸಿದ್ದಪ್ಪ ಸಾತನೂರು, ಬಸವರಾಜ್ ಶೀಲವಂತ್ ಅರಣಕಲ್, ದಿಲೀಪ್ ನಾಗೂರೆ, ಅನಿಲಕುಮಾರ್ ಗುತ್ತೇದಾರ್, ವಿಜಯಕುಮಾರ್ ಸರಡಗಿ, ಸೋಮಣ್ಣ ಡೋಣೂರ್, ಜಗನ್ನಾಥ್ ಪೂಜಾರಿ, ದತ್ತು ಮಹಾರಾಜ್, ಅಂಬ್ರೀಶ್ ತಡಕಲ್, ಅನಿಲ್ ತೆಗನೂರ್ ಮುಂತಾದವರು ಪಾಲ್ಗೊಂಡಿದ್ದರು.