ಭೀಮಾ ತೀರದ ಭೈರಗೊಂಡನ ಮೇಲೆ ಗುಂಡಿನ ದಾಳಿ ಇಬ್ಬರು ಸೆರೆ

ವಿಜಯಪುರ,ನ.೬-ಭೀಮಾ ತೀರದ ಮಹಾದೇವ ಭೈರಗೊಂಡ ಮೇಲಿನ ಗುಂಡಿನ ದಾಳಿ ಪ್ರಕರಣದ ಇಬ್ಬರನ್ನು ಜಿಲ್ಲಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಜಯಪುರದ ವಿಜಯ ತಾಳಿಕೋಟೆ (೨೭) ಈತನೊಂದಿಗೆ ಭೈರಗೊಂಡ ಕಾರಿಗೆ ಟಿಪ್ಪರ್ ಡಿಕ್ಕಿ ಹೊಡೆಸಿದ ಚಾಲಕ ನಾಗಪ್ಪ ಪೀರಗೊಂಡ (೨೮) ಬಂಧಿತ ಆರೋಪಿಗಳಾಗಿದ್ಧಾರೆ.
ಭೈರಗೊಂಡ ಕುಟುಂಬದ ಧರ್ಮರಾಜ ಮೇಲಿನ ಹುಚ್ಚು ಅಭಿಮಾನ, ಶೀಘ್ರವೇ ದೊಡ್ಡ ಮಟ್ಟದ ಗ್ಯಾಂಗ್ ಕಟ್ಟಿ ದಿಢೀರ ಶ್ರೀಮಂತಿಕೆ ಹಾಗೂ ಡಾನ್ ಆಗುವ ದೂರಾಲೋಚನೆ ದೊಡ್ಡ ಮಟ್ಟದ ದಾಳಿಗೆ ಕಾರಣ ಎಂಬುದು ಬಹಿರಂಗವಾಗಿದೆ ಎಂದು
ತುರ್ತು ಪತ್ರಿಕಾಗೋಷ್ಠಿಯಲ್ಲಿ ಬೆಳಗಾವಿ ಐಜಿಪಿ ರಾಘವೇಂದ್ರ ಸುಹಾಸ್ ಅವರು ತಿಳಿಸಿದ್ದಾರೆ.
ಮಹಾದೇವ ಭೈರಗೊಂಡ ಮೇಲಿನ ಗುಂಡಿನ ದಾಳಿ ಪ್ರಕರಣದ ಹಲವು ಕುತೂಹಲಕರ ಸಂಗತಿಗಳನ್ನೂ ಬಿಚ್ಚಿಟ್ಟ ಅವರು ಮಹಾದೇವ ಭೈರಗೊಂಡ ಮೇಲಿನ ದಾಳಿಗೆ ಅವರ ಕುಟುಂಬದೊಂದಿಗೆ ದ್ವೇಷ ಹೊಂದಿರುವ ಪೊಲೀಸ್ ನಕಲಿ ಎನ್ ಕೌಂಟರ್ ನಲ್ಲಿ ಮೂರು ವರ್ಷಗಳ ಹಿಂದೆ ಹತ್ಯೆಯಾದ ಧರ್ಮರಾಜ ಚಡಚಣ ಮೇಲಿನ ಹುಚ್ಚು ಅಭಿಮಾನವೂ ಕಾರಣವಾಗಿದೆ ಎಂದರು.
ಜೊತೆಗೆ ಭೀಮಾ ತೀರದಲ್ಲಿ ಈಚೆಗೆ ಸಕ್ರೀಯವಾಗಿರುವ ದೊಡ್ಡ ಮಟ್ಟದ ರೌಡಿಗಳ ಗ್ಯಾಂಗ್ ಇಲ್ಲವಾಗಿದೆ. ಹೀಗಾಗಿ ಜಿಲ್ಲೆಯ ಮಟ್ಟಿಗೆ ಡಾನ್ ಎಂದೇ ಹೆಸರು ಪಡೆದಿರುವ ಮಹಾದೇವ ಭೈರಗೊಂಡ ಹತ್ಯೆ ಮಾಡಿದಲ್ಲಿ ಪಾತಕ ಲೋಕದಲ್ಲಿ ದಿಢೀರ ಹೆಸರು ಮಾಡುವ ಹುಚ್ಚುತನವೂ ಕಾರಣವಾಗಿದೆ ಎಂಬುದನ್ನು ಪೊಲೀಸರು ಬಾಯಿ ಬಿಡಿಸಿದ್ದಾರೆ.
ಇದಕ್ಕಾಗಿ ಮಡಿವಾಳ ಹಿರೇಮಠ ಉರ್ಫ ಸ್ವಾಮಿ ಹೈಸ್ಕೂಲ್ ಮೆಟ್ಟಿಲನ್ನೂ ಏರದ ಗೌಂಡಿ, ಗ್ಯಾರೇಜ್ ಕೆಲಸಗಳಂಥ ಶ್ರಮಿಕ ವ್ಯವಸ್ಥೆಯಲ್ಲಿ ಕೆಲಸ ಮಾಡುವ ೨೫-೩೫ ವರ್ಷ ವಯೋಮಾನದ ಹುಡುಗರನ್ನು ಆಯ್ಕೆ ಮಾಡಿಕೊಂಡು ತಂಡ ಕಟ್ಟಿದ್ದ. ಪ್ರಕರಣದಲ್ಲಿ ಸ್ವಾಮಿ ಇನ್ನೂ ತಲೆ ಮರೆಸಿಕೊಂಡಿದ್ದಾನೆ. ಸದರಿ ಪ್ರಕರಣದಲ್ಲಿ ಈ ವರೆಗೆ ಯಾರ ಮೇಲೂ ನಿಖರ ದೂರು ದಾಖಲಾಗಿಲ್ಲ. ಭೈರಗೊಂಡ ಮೇಲೆ ದಾಳಿ ಮಾಡಿದ ಗ್ಯಾಂಗ್ ಸುಮಾರು ೧೩ ಸುತ್ತು ಗುಂಡು ಹಾರಿಸಿದೆ. ಭೈರಗೊಂಡ ತಂಡದವರಿಂದಲೂ ನಡೆದ ಪ್ರತಿರೋಧದಲ್ಲಿ ದಾಳಿ ಗ್ಯಾಂಗ್‌ನ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಸುಹಾಸ ವಿವರಿಸಿದರು.
ಕಳೆದ ಜನೇವರಿ ತಿಂಗಳಿಂದಲೇ ಮಹಾದೇವ ಭೈರಗೊಂಡ ಹತ್ಯೆಗೆ ಸಂಚು ರೂಪಿಸಲಾಗುತ್ತಿತ್ತು. ಆ.೩೦ ರಂದು ಧರ್ಮರಾಜ ಚಡಚಣ ಪೊಲೀಸರ ನಕಲಿ ಎನ್ಕೌಂಟರ್ ಗೆ ಬಲಿಯಾಗಿ ಮೂರು ವರ್ಷವಾಗುತ್ತಿದೆ. ಅದೇ ದಿನ ಹತ್ಯೆ ಮಾಡಲು ಸಂಚು ರೂಪಿಸಲಾಗಿತ್ತು. ಇದಕ್ಕಾಗಿ ಕಾತ್ರಾಳ ಹಾಗೂ ದೇವರ ನಿಂಬರಗಿ ಬಳಿ ಮಹಾದೇವ ಭೈರಗೊಂಡ ಹತ್ಯೆಗೆ ಸಂಚು ರೂಪಿಸಿದ್ದರೂ ಯೋಜನೆ ಕೈಗೂಡಿರಲಿಲ್ಲ. ಅಂತಿಮವಾಗಿ ನ.೨ ರಂದು ವಿಜಯಪುರ ಹೊರ ವಲಯದ ಭೂತನಾಳ ಕ್ರಾಸ್ ಬಳಿ ಟಿಪ್ಪರ್ ಮೂಲಕ ಭೈರಗೊಂಡ ಸಂಚರಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆಸಿ, ಗುಂಡಿನ ದಾಳಿ ನಡೆಸಲಾಗಿತ್ತು ಎಂಬುದನ್ನು ಬಂಧಿತ ಆರೋಪಿಗಳು ಬಾಯಿ ಬಿಟ್ಟಿದ್ದಾಗಿ ವಿವರಿಸಿದರು.
ಸದರಿ ಪ್ರಕರಣದಲ್ಲಿ ಇದೀಗ ಮೊದಲ ಬಂಧಿತ ಆರೋಪಿ ವಿಜಯಪುರ ನಗರದ ಮಾಹಿತಿದಾರ ವಿಜಯ ತಾಳಿಕೋಟೆ ಮೂರನೇ ಪ್ರಯತ್ನದ ಯೋಜನೆ ರೂಪಿಸಿದ್ದ. ಈತನೊಂದಿಗೆ ಬಂಧಿತನಾಗಿರುವ ಭೈರಗೊಂಡ ಕಾರಿಗೆ ಟಿಪ್ಪರ್ ಡಿಕ್ಕಿ ಹೊಡೆಸಿದ ಚಾಲಕ ನಾಗಪ್ಪ ಪೀರಗೊಂಡ ಎಂಬ ಯುವಕ ಭೈರಗೊಂಡ ಸ್ವಗ್ರಾಮ ಕೆರೂರ ಪಕ್ಕದ ಉಮರಾಣಿ ಗ್ರಾಮದವ. ಮೂರನೇ ಪ್ರಯತ್ನದಲ್ಲಿ ದಾಳಿಯನ್ನು ನಡೆಸಿಯೇ ಬಿಟ್ಟಿದ್ದಾರೆ. ಕೃತ್ಯಕ್ಕೆ ಬಳಸಿದ ಟಿಪ್ಪರ್ ಮಹಾರಾಷ್ಟ್ರ ರಾಜ್ಯಕ್ಕೆ ಸೇರಿದ್ದು, ೪-೫ ಬೈಕ್ ಬಳಸಿದ್ದಾರೆ ಎಂಬುದು ತನಿಖೆಯಲ್ಲಿ ಬಯಲಾಗಿದೆ ಎಂದು ಐಜಿಪಿ ಸುಹಾಸ ವಿವರಿಸಿದರು.
ಎಸ್ಪಿ ಅನುಪಮ್ ಅಗರವಾಲ್, ಎಎಸ್ಪಿ ರಾಮ ಅರಸಿದ್ಧಿ, ಡಿಎಸ್ಪಿ ಲಕ್ಷ್ಮಿನಾರಾಯಣ ಸೇರಿದಂತೆ ತನಿಖಾ ತಂಡದಲ್ಲಿರುವ ವಿವಿಧ ಪೊಲೀಸರು ಉಪಸ್ಥಿತರಿದ್ದರು