ಭೀಮಾನದಿ ಪಾತ್ರದಲ್ಲಿ ಅನಧಿಕೃತ ಮರಳು ವಶಕ್ಕೆ

ವಿಜಯಪುರ ಡಿ.20 : ಇಂಡಿ ಉಪವಿಭಾಗಾಧಿಕಾರಿ ಶ್ರೀ ರಾಹುಲ್ ಸಿಂಧೆ ಅವರ ನೇತೃತ್ವದಲ್ಲಿ ವಿಜಯಪುರ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಸಿಂದಗಿ ತಹಶೀಲ್ದಾರರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ತಂಡವು ನಿನ್ನೆ ಸಿಂದಗಿ ತಾಲೂಕಿನ ದೇವಣಗಾಂವ ಮತ್ತು ಶಂಭೇವಾಡ ಗ್ರಾಮ ವ್ಯಾಪ್ತಿಯ ಭೀಮಾನದಿ ಪಾತ್ರದಲ್ಲಿ ಅನಿರೀಕ್ಷಿತವಾಗಿ ದಾಳಿ ನಡೆಸಿ 180 ಮೆಟ್ರಿಕ್ ಟನ್ ಅನಧಿಕೃತ ಮರಳನ್ನು ವಶಕ್ಕೆ ಪಡೆದಿದೆ.
ಒಟ್ಟು ಮೂರು ಕಡೆ ಈ ದಾಳಿ ನಡೆಸಲಾಗಿದ್ದು, ಕ್ರಮವಾಗಿ 100, 60 ಹಾಗೂ 20 ಮೆಟ್ರಿಕ್ ಟನ್‍ಗಳಂತೆ ಒಟ್ಟು 180 ಮೆಟ್ರಿಕ್ ಟನ್ ಮರಳನ್ನು ವಶಕ್ಕೆ ಪಡೆಯಲಾಗಿದ್ದು, ಆಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಐಪಿಸಿ ಸೆಕ್ಷನ್ -379 ರನ್ವಯ ಎಫ್‍ಐಆರ್ ದಾಖಲಿಸಲಾಗಿದೆ.
ತಾಲೂಕಾ ಮಟ್ಟದ ಟಾಸ್ಕ್ ಫೋರ್ಸ್‍ಗಳಿಗೆ ಕಳೆದ ಎರಡು ತಿಂಗಳ ಹಿಂದೆ ನೀಡಲಾಗಿದ್ದ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಈ ದಾಳಿ ನಡೆಸಲಾಗಿದ್ದು, ಅನಧಿಕೃತ ಮರಳು ಸಾಗಾಣಿಕೆ ಅಥವಾ ಗಣಿಗಾರಿಕೆಗೆ ಸಂಬಂಧಪಟ್ಟಂತೆ ಯಾವುದೇ ದೂರುಗಳಿದ್ದಲ್ಲಿ ಸಾರ್ವಜನಿಕರು ನೇರವಾಗಿ ಜಿಲ್ಲಾಧಿಕಾರಿಗಳು ಅಥವಾ ಸಂಬಂಧಪಟ್ಟ ಉಪವಿಭಾಗಾಧಿಕಾರಿಗಳಿಗೆ ದೂರು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್ ಅವರು ತಿಳಿಸಿದ್ದಾರೆ.