ಭೀಮಳ್ಳಿ ಮಾದರಿ ಗ್ರಾಮ ಪಂಚಾಯತಿಯನ್ನಾಗಿ ಮಾಡಲು ಸಹಕರಿಸಿ: ಭಾರತಿ ಮಣ್ಣೂರ್

ಕಲಬುರಗಿ,ಜ.12-ತಾಲೂಕಿನ ಭೀಮಳ್ಳಿ ಗ್ರಾಮ ಪಂಚಾಯತಿ ಹಾಗೂ ಮಲ್ಲಾಬಾದನ ಸಾಮ್ರಾಟ್ ಅಶೋಕ ಚಾರಿಟೇಬಲ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಭೀಮಳ್ಳಿ ಗ್ರಾಮದಲ್ಲಿ 2022-23ನೇ ಸಾಲಿನ ಸ್ವಚ್ಛ ಭಾರತ ಮಿಷನ್ ಯೋಜನೆ ಅಡಿಯಲ್ಲಿ ಐಇಸಿ ಚಟುವಟಿಕೆಗಳ ಕುರಿತು ಉಪನ್ಯಾಸ ಹಾಗೂ ಪ್ರಮಾಣ ವಚನ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು.
ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ರಾಮಚಂದ್ರ ಅವರು ಮಾತನಾಡಿ, ಪಂಚಾಯಿತಿ ಅಭಿವೃದ್ಧಿಗಾಗಿ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು. ತದನಂತರ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಯಲ್ಲಪ್ಪ ದೊಡ್ಡಮನಿ ತಮ್ಮ ಉಪನ್ಯಾಸದಲ್ಲಿ ಮನೆಗೆ ಟಿ.ವಿ ಹಾಗೂ ಮನುಷ್ಯನಿಗೆ ಮೊಬೈಲ್ ಎಷ್ಟೂ ಅವಶ್ಯಕವೋ ಅಷ್ಟೇ ಅವಶ್ಯಕವಾದದ್ದು ಮನೆಗೊಂದು ಶೌಚಾಲಯ ಕಟ್ಟಿಸಿಕೊಳ್ಳುವುದು. ಏಕೆಂದರೆ ನಮ್ಮ ಶೌಚಾಲಯ, ನಮ್ಮ ಸ್ವಾಭಿಮಾನ. ಅದಕ್ಕಾಗಿ ಸಾರ್ವಜನಿಕರೆಲ್ಲರೂ ವ್ಯಯಕ್ತಿಕ ಶೌಚಾಲಯಗಳನ್ನು ಕಡ್ಡಾಯವಾಗಿ ಕಟ್ಟಿಸಿಕೊಳ್ಳಬೇಕೆಂದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾಂ.ಪಂ.ಅಭಿವೃದ್ಧಿ ಅಧಿಕಾರಿ ಭಾರತಿ ಮಣ್ಣೂರ ಅವರು ಭೀಮಳ್ಳಿ ಗ್ರಾಮ ಪಂಚಾಯತಿಯನ್ನು ಇಡೀ ರಾಜ್ಯದಲ್ಲಿಯೇ ಒಂದು ಮಾದರಿ ಗ್ರಾಮ ಪಂಚಾಯಿತಿಯನ್ನಾಗಿ ಮಾಡಲು ತಾವೇಲ್ಲರೂ ಸಹಕರಿಸಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.
ಕೊನೆಯದಾಗಿ ಸಭೆಯಲ್ಲಿ ಇದ್ದ ಎಲ್ಲಾ ಸಾರ್ವಜನಿಕರಿಗೂ ಪ್ರಮಾಣ ವಚನದ ಮುಖ್ಯಾಂಶಗಳನ್ನು ಬೋಧಿಸಿದರು. ಗ್ರಾಂ.ಪಂ. ಉಪಾಧ್ಯಕ್ಷ ಮಹೇಬೂಬ್ ಪಟೇಲ್, ಸದಸ್ಯರಾದ ಶರಣಪ್ಪ ಮಲಕಪ್ಪ ಸಿಂಗೆ, ಅಣವೀರಪ್ಪ ಮಲ್ಲೇಶಪ್ಪ, ಇಸ್ಮಾಯಿಲ್ ಸಾಬ್ ಮಹಮ್ಮದ್ ಹನೀಫ್, ಶ್ರೀಕಾಂತ ಅಣ್ಣಾರಾಯ ಮಾಲಿಪಾಟೀಲ್, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಅನೇಕರಿದ್ದರು.