ಭೀಮಳ್ಳಿ- ಭೋಸ್ಗಾ ಸೇತುವೆ ಕಾಮಗಾರಿ ಸ್ಥಳಕ್ಕೆ ಅಲ್ಲಮಪ್ರಭು ಪಾಟೀಲ್ ಭೇಟಿ: ಯೋಜನೆ ಮರುಪರಿಷ್ಕರಣೆಗೆ ಆಗ್ರಹ

ಕಲಬುರಗಿ,ಆ.5: ತಾಲ್ಲೂಕಿನ ಭೀಮಳ್ಳಿ- ಭೋಸ್ಗಾ ಹಳ್ಳಕ್ಕೆ ಅಡ್ಡಲಾಗಿ ರೂಪಿಸಲಾಗಿರುವ ಬಾಂದಾರು ಯೋಜನೆ ತುಂಬಾ ಅಶಕ್ತವಾಗಿದೆ. ಇದರಿಂದ ಹಳ್ಳದ ರಭಸದ ನೀರನ್ನು ತಡೆಯಲಾಗದು. ಸೇತುವೆ ಮತ್ತೆ ಕುಸಿಯುವ, ಕೊಚ್ಚಿ ಹೋಗುವ ಅಪಾಯವಿದ್ದು, ಈ ಕುರಿತು ತಕ್ಷಣ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸದರಿ ಗ್ರಾಮಗಳ ಸಮಸ್ಯೆ ಕುರಿತು ಗಮನಹರಿಸಿ ಬಾಂದಾರು ಕಾಮಗಾರಿ ಯೋಜನೆ ಪರಿಷ್ಕರಿಸುವಂತೆ ಹಾಗೂ ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ರಾಜ್ಯ ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಅಲ್ಲಮಪ್ರಭು ಪಾಟೀಲ್ ಅವರು ಒತ್ತಾಯಿಸಿದರು.
ಶುಕ್ರವಾರ ಮಳೆ ನೀರಿಗೆ ಕೊಚ್ಚಿ ಹೋದ ಸೇತುವೆ, ಅರೆಬರೆ ಸೇತುವೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಜನರ ಅಹವಾಲು ಆಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಸಮಸ್ಯೆ ತುಂಬಾ ಗಂಭೀರವಾಗಿದೆ. ಕಳೆದ ಮೂರು ವರ್ಷಗಳಿಂದ ಸಮಸ್ಯೆ ಕಾಡುತ್ತಿದೆ. ಕಳೆದ ಬಾರಿಯೂ ಇದೇ ಹಳ್ಳದ ನೀರಿಗೆ ಇಬ್ಬರು ಸಾವನ್ನಪ್ಪಿದ್ದಾರೆ. ಸೇತುವೆ ನಿರ್ಮಿಸುವಂತೆ ಜನ ಕೋರಿದ್ದರೂ ಮಳೆಗಾಲದಲ್ಲಿ ಕಾಮಗಾರಿ ಆರಂಭಿಸಿದ್ದಾರೆ. ಅದೂ 12 ಎಂಎಂ ಸರಳು ಹಾಕಿ ಹಳ್ಳಕ್ಕೆ ಸೇತುವೆ ಕಟ್ಟುತ್ತಿದ್ದಾರೆ. ಕಾಮಗಾರಿ ಗಟ್ಟಿಮುಟ್ಟಾಗಿಲ್ಲ. ಯೋಜನೆ ಪರಿಷ್ಕರಣೆಯಾಗಲಿ. ಕನಿಷ್ಠ 10 ಬಾಕ್ಸ್ ಇರುವಂತಹ ಕಲ್ವರ್ಟ್ ನಿರ್ಮಾಣವಾದಲ್ಲಿ ಸಮಸ್ಯೆಗೆ ಖಾಯಂ ಪರಿಹಾರ ಸಿಗುತ್ತದೆ ಎಂದು ತಿಳಿಸಿದರು.
ಸುತ್ತಲಿನ ಹತ್ತಕ್ಕೂ ಹೆಚ್ಚು ಗ್ರಾಮಗಳಿಂದ ಭಾರೀ ಪ್ರಮಾಣದಲ್ಲಿ ಹರಿದು ಬಂದು ಹಳ್ಳ ಸೇರುತ್ತದೆ. ಇಲ್ಲಿನ ನೀರಿನ ರಭಸದ, ಸಂಗ್ರಹಿತ ನೀರಿನ ಪ್ರಮಾಣ ಅಧ್ಯಯನ ಮಾಡದೇ ತರಾತುರಿಯಲ್ಲಿ ಈ ಕಾಮಗಾರಿ ಮಾಡಿದರೆ ಜನರ ಸಮಸ್ಯೆಗೆ ಪರಿಹಾರ ದೊರಕುವುದಿಲ್ಲ. 40ರಿಂದ 50 ಟನ್ ಭಾರದ ವಾಹನಗಳು ಇಲ್ಲಿಂದ ಸಾಗುತ್ತವೆ. ಕಳೆದ ವರ್ಷವೇ ಸಮಸ್ಯೆ ಗಮನಕ್ಕೆ ತಂದರೂ ಜಿಲ್ಲಾಡಳಿತ ಕಾಮಗಾರಿ ಆರಂಭಿಸುವಲ್ಲಿ ಅಲಕ್ಷತನ ತೋರಿದೆ. ಇನ್ನಾದರೂ ಸದರಿ ಯೋಜನೆ ಸಂಪೂರ್ಣ ಪರಿಷ್ಕರಣೆ ಮಾಡಿ ಜಾರಿಗೆ ತರಬೇಕು ಎಂದು ಅವರು ಒತ್ತಾಯಿಸಿದರು.
ಗ್ರಾಮಸ್ಥರಾದ ವಿಶ್ವನಾಥ್ ಜಮಾದಾರ್, ಇಸ್ಮಾಯಿಲ್ ಸಾಬ್, ಸೀತಾಬಾಯಿ ಸೇರಿದಂತೆ ಅನೇಕರು ಅಲ್ಲಮಪ್ರಭು ಪಾಟೀಲ್ ಅವರನ್ನು ಕಂಡು ಕಳೆದ ಮೂರು ದಿನಗಳಿಂದ ಹಳ್ಳ ದಾಟಲಾಗುತ್ತಿಲ್ಲ. ಅಪಾಯದಲ್ಲೇ ದಾಟುತ್ತಿದ್ದೇವೆ. ತಕ್ಷಣ ಸಮಸ್ಯೆ ಪರಿಹಾರಕ್ಕೆ ಕ್ರಮ ಜರುಗಿಸಲು ಕೋರಿದರು. ಕೆಲವರಂತೂ ಕಾಮಗಾರಿಗೆ ಮೂರು ಕೋಟಿ ರೂ.ಗಳಿಗೂ ಹೆಚ್ಚಿನ ಹಣ ಮೀಸಲಿಟ್ಟು, ಹತ್ತು ಬಾಕ್ಸ್‍ನ ಕಾಮಗಾರಿ ರೂಪಿಸಿ ಜಾರಿಗೆ ತರುವಂತೆ ಆಗ್ರಹಿಸಿದರು. ಜನರ ಅಹವಾಲು ಆಲಿಸಿದ ನಂತರ ಅಲ್ಲಮಪ್ರಭು ಪಾಟೀಲ್ ಅವರು ತಕ್ಷಣವೇ ನಿಯೋಗದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರನ್ನು ಕಂಡು ಸಮಸ್ಯೆ ವಿವರಿಸಿ ಯೋಜನೆ ಪರಿಷ್ಕರಿಸಿ ಜಾರಿಗೆ ತರುವಂತೆ ಒತ್ತಾಯಿಸಲಾಗುವುದು ಎಂದು ಭರವಸೆ ನೀಡಿದರು.
ಕಾಂಗ್ರೆಸ್ ಮುಖಂಡರಾದ ನೀಲಕಂಠರಾವ್ ಮೂಲಗೆ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಂತೋಷ್ ಪಾಟೀಲ್ ದಣ್ಣೂರ್, ಗ್ರಾಮ ಪಂಚಾಯಿತಿ ಸದಸ್ಯ ಶರಣಪ್ಪ ಸಿಂಗೆ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅನೇಕರು ಮಾತನಾಡಿ, ಕಲಂ 371(ಜೆ) ಅಡಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಇದೆ. ಸಾಕಷ್ಟು ಹಣವಿದೆ. ಗ್ರಾಮೀಣ ಜನರ ಇಂತಹ ಸಮಸ್ಯೆಗೆ ತಕ್ಷಣ ಯೋಜನೆ ರೂಪಿಸಬೇಕು ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರೂ ಆದ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ್ ಪಾಟೀಲ್ ರೇವೂರ್ ಅವರಿಗೆ ಒತ್ತಾಯಿಸಿದರು.