ಭೀಮಳ್ಳಿ ಗ್ರಾಮ ಪಂಚಾಯಿತಿ ಬಿಜೆಪಿಯಿಂದ ಕೈವಶ: ಶಾಸಕ ಅಲ್ಲಮಪ್ರಭು ಪಾಟೀಲ್ ಸಂತಸ

ಕಲಬುರಗಿ,ಆ.03:ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯಲ್ಲಿರುವ ಭೀಮಳ್ಳಿ ಗ್ರಾಮ ಪಂಚಾಯಿತಿ ತನ್ನ ಎರಡನೇ ಅವಧಿಗೆ ಕೈ ವಶವಾಗಿದೆ. ಬುಧವಾರ ಜರುಗಿದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಶ್ರೀಮತಿ ಸಿದ್ದಮ್ಮ ಮಲ್ಲಿಕಾರ್ಜುನ್ ಡಬರಾಬಾದಿ ಅವರು ಅಧ್ಯಕ್ಷರಾಗಿ ಹಾಗೂ ಜಯಶ್ರೀ ಶಿವಪುತ್ರ ಭಂಡಾರಿ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಒಟ್ಟು 29 ಸದಸ್ಯ ಬಲದಲ್ಲಿ 24 ಸದಸ್ಯರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಬೆಂಬಲಿಸಿದರು. ಕೇವಲ ನಾಲ್ವರು ಸದಸ್ಯರು ಬಿಜೆಪಿ ಪರ ಮತ ಹಾಕಿದರು.
ಭೀಮಳ್ಳಿ ಗ್ರಾಮ ಪಂಚಾಯಿತಿ ಈ ಮುನ್ನ ಬಿಜೆಪಿ ವಶವಾಗಿತ್ತು. ಎರಡನೇ ಅವಧಿಗೆ ಕಾಂಗ್ರೆಸ್ ಪರವಾಗಿದೆ. ಇದು ಸಂತಸದ ವಿಷಯವಾಗಿದೆ. ಪಂಚಾಯಿತಿ ಬೇರು ಮಟ್ಟದಲ್ಲಿ ರಾಜಕೀಯ ಬೆಳವಣಿಗೆ ಗಮನಾರ್ಹವಾಗಿದೆ. ಕಾಂಗ್ರೆಸ್ ತತ್ವ- ಸಿದ್ದಾಂತಗಳನ್ನು ನಂಬಿ ಭೀಮಳ್ಳಿ ಪಂಚಾಯಿತಿ ಸದಸ್ಯರು ಕಾಂಗ್ರೆಸ್ ಪರ ನಿಂತಿದ್ದಾರೆ ಎಂದು ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಸಂತೋಷ ವ್ಯಕ್ತಪಡಿಸಿದ್ದಾರೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ್ ಕಣ್ಣಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು, ಗ್ರಾಮದ ಹಿರಿಯರು, ಮುಖಂಡರೆಲ್ಲರೂ ಸೇರಿಕೊಂಡು ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ನಿಂತಿದ್ದಾರೆ. ಇದು ಬೇರು ಮಟ್ಟದಲ್ಲಿ ಜನ ಕಾಂಗ್ರೆಸ್ ಪರ ಘಟ್ಟಿಯಾಗಿ ನಿಂತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.