ಭೀಮಲಿಂಗೇಶ್ವರಸ್ವಾಮಿಗೆ ವಿಶೇಷ ಪೂಜೆ

ಕೋಲಾರ,ಜು.೧೮- ಪ್ರಸಿದ್ದ ಯಾತ್ರಾsಸ್ಥಳ ಶ್ರೀಕ್ಷೇತ್ರ ಕೈವಾರದ ಶ್ರೀ ಭೀಮಲಿಂಗೇಶ್ವರಸ್ವಾಮಿ ದೇವಾಲಯದಲ್ಲಿ ಭೀಮನ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು.
ಭೀಮನ ಅಮಾವಾಸ್ಯೆಯ ಪ್ರಯುಕ್ತ ಮಹನ್ಯಾಸಪೂರ್ವಕ ರುದ್ರಾಭಿಷೇಕವನ್ನು ಮತ್ತು ಪಾರ್ವತೀ ಅಮ್ಮನವರಿಗೆ ವಿಶೇಷ ಅಭಿಷೇಕ, ಸಹಸ್ರನಾಮಾರ್ಚನೆಯನ್ನು ನೆರವೇರಿಸಲಾಯಿತು. ದೇವಾಲಯದಲ್ಲಿ ಭೀಮಲಿಂಗೇಶ್ವರಸ್ವಾಮಿ ಮತ್ತು ಪಾರ್ವತಿ ಅಮ್ಮನವರನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು.
ಇತಿಹಾಸ ಪ್ರಸಿದ್ದ ಭೀಮಲಿಂಗೇಶ್ವರಸ್ವಾಮಿಯನ್ನು ದ್ವಾಪರಯುಗದಲ್ಲಿ ರಾಕ್ಷಸನಾದ ಬಕಾಸುರನನ್ನು ಸಂಹರಿಸಿದ ದ್ವಿತೀಯ ಪಾಂಡವನಾದ ಭೀಮಸೇನನು ಸ್ಥಾಪಿಸಿದನು. ಹಾಗೆಯೇ ಪಂಚ ಪಾಂಡವರಿಂದ ಸ್ಥಾಪಿಸಲಾಗಿರುವ ಲಿಂಗಗಳನ್ನು ದೇವಾಲಯದ ಆವರಣದಲ್ಲಿ ಕಾಣಬಹುದು. ಇದರಿಂದಲೇ ಕೈವಾರವನ್ನು ಪಂಚಲಿಂಗಕ್ಷೇತ್ರವೆಂದು ಕರೆಯುತ್ತಾರೆ. ಈ ಹಿನ್ನೆಲೆಯನ್ನು ಭೀಮನ ಅಮಾವಾಸ್ಯೆಯ ದಿನದಂದು ದೇವಾಲಯಕ್ಕೆ ಭಕ್ತರು ಬಂದು ವಿಶೇಷ ಪೂಜೆಗಳನ್ನು ಸಲ್ಲಿಸಿದರು.
ಭೀಮನ ಅಮಾವಾಸ್ಯೆ ಪ್ರಯುಕ್ತ ಕೈವಾರ ಕ್ಷೇತ್ರದಲ್ಲಿ ಜನಸಂದಣಿ ಅಧಿಕವಾಗಿತ್ತು. ಅಮರನಾರೇಯಣಸ್ವಾಮಿ ದೇವಾಲಯ ಮತ್ತು ಶ್ರೀ ಯೋಗಿನಾರೇಯಣಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸಲಾಯಿತು. ಭಕ್ತರು ತಂಡೋಪತಂಡವಾಗಿ ದೇವಾಲಯಕ್ಕೆ ಆಗಮಿಸಿದರು. ನಾದಸುಧಾರಸ ವೇದಿಕೆಯಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಭಕ್ತರಿಗೆ ಶ್ರೀ ಯೋಗಿನಾರೇಯಣ ಮಠದ ವತಿಯಿಂದ ಭೋಜನವನ್ನು ಏರ್ಪಡಿಸಲಾಗಿತ್ತು.