ಭೀಮದಾಸರ ಕೃತಿಗಳ ಸಿಡಿ ಬಿಡುಗಡೆ

ಕೆಂಭಾವಿ :ಡಿ.5: ಕೂಡಲಿ ಆರ್ಯ ಅಕ್ಷೋಭ್ಯತೀರ್ಥ ತೀರ್ಥ ಮಠದ ಶ್ರೀ ರಘುವಿಜಯ ತೀರ್ಥ ಶ್ರೀಗಳ ಪಾವನ ಸನ್ನಿಧಾನದಲ್ಲಿ ಶುಕ್ರವಾರ ಪಟ್ಟಣದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಭೀಮನೊಡೆಯ ಸೇವಾ ಪ್ರತಿಷ್ಠಾನದ ವತಿಯಿಂದ ಕೆಂಭಾವಿ ಭೀಮದಾಸರ ಕೃತಿಗಳ ಸಿಡಿ ಬಿಡುಗಡೆ ಸಮಾರಂಭ ನಡೆಯಿತು.

ಸಾನಿಧ್ಯ ವಹಿಸಿ ಆಶಿರ್ವಚನ ನೀಡಿದ ರಘುವಿಜಯ ಶ್ರೀಗಳು, ಭಗವಂತನ ಗುಣಗಾನಗಳನ್ನು ನಮ್ಮ ಅನೇಕ ದಾಸರು ತಮ್ಮ ಹಾಡಿನ ಮೂಲಕ ಹಾಡಿಹೊಗಳಿದ್ದಾರೆ. ತಾಮಸ, ರಾಜಸ, ಸಾತ್ವಿಕ ಸೇರಿದಂತೆ ಅನೇಕ ರೀತಿಯ ಹಾಡುಗಳನ್ನು ನಮಗೆ ನೀಡಿದ ದಾಸರ ವೈಭವವನ್ನು ಇಂದು ನಾವು ಹಾಡುವ ಮೂಲಕ ಅವರು ದಾಸ ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಬೇಕು ಎಂದರು. ಆಧ್ಯಾತ್ಮಿಕ ಸಾಹಿತ್ಯ ರಚನೆಯಲ್ಲಿ ಕೆಂಭಾವಿ ಭೀಮದಾಸ ಎಂಬ ಅಂಕಿತದಿಂದ ಪ್ರಸಿದ್ಧ ಪಡೆದ ಸುರೇಂದ್ರರಾವ ಅವರ ಕೃತಿಗಳು ಆಸ್ತಿಕ ಜನತೆಯ ಮನಮಿಡಿಯುವಲ್ಲಿ ಸಹಕಾರಿಯಾಗಿವೆ. ನಮ್ಮ ಆರಾಧ್ಯ ದೈವ ಶ್ರೀ ವೈಕುಂಠ ರಾಮಚಂದ್ರ ದೇವರ ಮೇಲೆ ಅವರು ಬರೆದ ಹಾಡು ಅತ್ಯಂತ ಭಕ್ತಿಯಿಂದ ಕೂಡಿದೆ ಎಂದು ಹೇಳಿದರು.

ಭೀಮನೊಡೆಯ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಹಳ್ಳೇರಾವ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿ, ಭೀಮದಾಸರ ಹಲವು ಕೃತಿಗಳಲ್ಲಿ ಈಗ ಮೊದಲಿಗೆ ನಾಡಿನ ಖ್ಯಾತ ಹರಿದಾಸ ಗಾಯಕ ಪುತ್ತೂರ ನರಸಿಂಹ ನಾಯಕ ಅವರ ಸಂಗೀತ ಸಂಯೋಜನೆಯಲ್ಲಿ ಐದು ಹಾಡುಗಳ ಸಿಡಿ ಬಿಡುಗಡೆ ಮಾಡಲಾಗಿದ್ದು ಹಂಹಂತವಾಗಿ ಇವುಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ಪರಿಚಯಿಸುವ ಕಾರ್ಯ ಮಾಡಲಾಗುವುದು ಎಂದು ಹೇಳಿದರು.

ನಂತರ ಬೆಂಗಳೂರಿನ ಕೆ. ಶ್ರೀಧರ ಮತ್ತು ಬಸವರಾಜ ಭಂಟನೂರ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಯಮುನೇಶ ಯಾಳಗಿ ತಬಲಾ ಸಾಥ್ ನೀಡಿದರು. ಇದೇ ಸಂದರ್ಭದಲ್ಲಿ ಖ್ಯಾತ ಚಿತ್ರ ಕಲಾವಿದ ಹಳ್ಳೇರಾವ ಕುಲಕರ್ಣಿ ಅವರಿಂದ ಕುಂಚಗಾಯನ ಕಾರ್ಯಕ್ರಮ ನೋಡುಗರನ್ನು ತನ್ನತ್ತ ಸೆಳೆಯಿತು. ವಾಮನರಾವ ದೇಶಪಾಂಡೆ, ತಿರುಮಲಾಚಾರ್ಯ ಜೋಷಿ, ಮೋಹನರಾವ ಕುಲಕರ್ಣಿ, ಹಣಮಂತರಾವ ಕುಲಕರ್ಣಿ, ನರಸಿಂಹರಾವ ಕುಲಕರ್ಣಿ, ಸಂಜೀವರಾವ ಕುಲಕರ್ಣಿ, ಗುರುರಾಜ ಕುಲಕರ್ಣಿ ನಗನೂರ ವೆಂಕಟೇಶ ನಾಡಿಗೇರ ಇದ್ದರು. ವಿಜಯಾಚಾರ್ಯ ಪುರೋಹಿತ ಸ್ವಾಗತಿಸಿದರು. ವಾದಿರಾಜ ಕುಲಕರ್ಣಿ ವಂದಿಸಿದರು.