ಭೀತ್ಯಾನತಾಂಡ ಕಗ್ಗಲ್ ಕೆರೆ ತುಂಬಿಸುವ ಯೋಜನೆ ಮಂಜೂರು


ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಫೆ.23: ತಾಲೂಕಿನ ಭೀತ್ಯಾನತಾಂಡ ಕಗ್ಗಲ್ ಕೆರೆಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ 1.30 ಕೋಟಿ ರೂ.ಗಳ ಯೋಜನೆ ಮಂಜೂರಾಗಿದೆ ಎಂದು ಶಾಸಕ ಪಿ.ಟಿ.ಪರಮೇಶ್ವರನಾಯ್ಕ ತಿಳಿಸಿದರು.
ತಾಲೂಕಿನ ತಳಕಲ್ಲು ಗ್ರಾಮದಲ್ಲಿ ಶಾಲಾ ಕೊಠಡಿ ಉದ್ಘಾಟಿಸಿ ಮಾತನಾಡಿದ ಅವರು, ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಿ.ಕೋಡಿಹಳ್ಳಿ ಕೆರೆ ಹಾಗೂ ಗ್ರಾಮ ವ್ಯಾಪ್ತಿಯ ಸರಣಿ ಚೆಕ್‍ಡ್ಯಾಂಗಳಿಗೆ ನೀರು ಹರಿಸಲು 2 ಕೋಟಿ ರೂ. ಮಂಜೂರಾಗಿದ್ದು, ಈಚೆಗೆ ಕಾಮಗಾರಿಗೆ ಚಾಲನೆ ನೀಡಿದ್ದೇವೆ. ನಾಗಲಾಪುರ ತಾಂಡ, ಹಂಪಸಾಗರ, ಬನ್ನಿಕಲ್ಲು ಸುತ್ತಮುತ್ತಲ ಗ್ರಾಮಗಳ ಸರಣಿ ಚೆಕ್ ಡ್ಯಾಂಗಳಿಗೆ ನೀರು ಹರಿಸುವ 3.75 ಕೋಟಿ ರೂ. ಯೋಜನೆ ಮಂಜೂರಾಗಿದೆ ಎಂದು ಹೇಳಿದರು.
ಇಟ್ಟಿಗಿ ಗ್ರಾಮದ ಸುತ್ತಮುತ್ತಲ ಸರಣಿ ಚೆಕ್ ಡ್ಯಾಂಗಳಿಗೆ ತುಂಗಭದ್ರಾ ನದಿಯಿಂದ ನೀರು ಹರಿಸಲು 5.50 ಕೋಟಿ ರೂ. ಮಂಜೂರಾಗಿದ್ದು, ಸದ್ಯದಲ್ಲೇ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಇಟ್ಟಿಗಿ ಸರ್ಕಾರಿ ಆಸ್ಪತ್ರೆಯ ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ 1 ಕೋಟಿ ಬಿಡುಗಡೆಯಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಶಾಸಕರು ತಾಲೂಕಿನ ಮಹಾಜನದಹಳ್ಳಿ, ಮುಸುವಿನ ಕಲ್ಲಹಳ್ಳಿ, ಕೆಂಚಮ್ಮನಹಳ್ಳಿ, ಇಟ್ಟಿಗಿ, ತಳಕಲ್ಲು, ಉತ್ತಂಗಿ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಅಟವಾಳಗಿ ಕೊಟ್ರೇಶ, ಬಸವನಗೌಡ ಪಾಟೀಲ, ಜಿ.ವಸಂತ ಇತರರು ಇದ್ದರು.