ಭೀಡ್ ಚಿತ್ರದ ಟ್ರೇಲರ್ ಬಿಡುಗಡೆ

ಮುಂಬೈ, ಮಾ.೧೪- ಬಾಲಿವುಡ್ ಸೂಪರ್ ಸ್ಟಾರ್‌ಗಳಾದ ರಾಜ್‌ಕುಮಾರ್ ರಾವ್ ಮತ್ತು ಭೂಮಿ ಪೆಡ್ನೇಕರ್ ಅಭಿನಯದ ಭೀಡ್ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಪರ-ವಿರೋಧದ ಚರ್ಚೆ ಶುರುವಾಗಿದೆ.

ಅನುಭವ್ ಸಿನ್ಹಾ ನಿರ್ದೇಶನದಲ್ಲಿ ಚಿತ್ರ ಮೂಡಿ ಬಂದಿದ್ದು, ಕೋವಿಡ್ ಸಮಯದಲ್ಲಿನ ಲಾಕ್ಡೌನ್ ಕಥೆಯನ್ನು ಹೇಳುತ್ತದೆ.
೨೦೨೦ ರಲ್ಲಿ ದೇಶವನ್ನಷ್ಟೇ ಅಲ್ಲ, ಇಡೀ ವಿಶ್ವವನ್ನೇ ಕೋವಿಡ್ ಎಂಬ ಸಾಂಕ್ರಾಮಿಕ ರೋಗ ಅಲ್ಲೋಲ ಕಲ್ಲೋಲ ಮಾಡಿತ್ತು. ಚೀನಾದಿಂದ ಬಂದ ಕೊರೊನಾ ಪ್ರಪಂಚದಾದ್ಯಂತ ಹಬ್ಬಿತ್ತು. ಈ ಒಂದು ವೈರಸ್ ಅದೆಷ್ಟೋ ಮಂದಿಗೆ ಬಾಧಿಸಿದ್ದು ಮಾತ್ರವಲ್ಲದೇ, ಅನೇಕರನ್ನು ಬೀದಿಗೆ ತಳ್ಳಿತ್ತು. ತಮ್ಮ ಪ್ರಾಣವನ್ನು ಅಂಗೈಯಲ್ಲಿ ಇಟ್ಟುಕೊಂಡು ಒಂದು ಹೊತ್ತು ತಿನ್ನಲು ಪರದಾಡುವ ಸ್ಥಿತಿ ಜನರಲ್ಲಿ ನಿರ್ಮಾಣವಾಗಿತ್ತು. ಕೋವಿಡ್ ಹರಡುವಿಕೆಯನ್ನು ತಡೆಯಲು ಸರ್ಕಾರ ಲಾಕ್ಡೌನ್ ಜಾರಿಗೆ ತಂದಿತು. ತುರ್ತು ಸಂದರ್ಭಗಳನ್ನು ಹೊರತುಪಡಿಸಿ ಬೇರೆ ಯಾವುದೇ ಕಾರಣಕ್ಕೂ ಮನೆಯಿಂದ ಹೊರಗೆ ಬರಬಾರದು ಎಂಬ ಕಟ್ಟುನಿಟ್ಟಿನ ನಿಯಮಗಳನ್ನು ವಿಧಿಸಲಾಗಿತ್ತು.

ಅನೇಕರಿಂದ ’ರಾಷ್ಟ್ರ ವಿರೋಧಿ’ ಎಂದು ಕರೆಯಲ್ಪಟ್ಟಿದೆ. ಭೀಡ್ ಅನ್ನು ‘ಭಾರತ ವಿರೋಧಿ’ ಚಿತ್ರ ಎಂದು ಕರೆಯುವವರಿಗೆ ಪಂಕಜ್ ಕಪೂರ್ ಪ್ರತಿಕ್ರಿಯಿಸಿದ್ದಾರೆ. ಸಮಾಜದಲ್ಲಿ, ನಮ್ಮ ಚಿತ್ರದಲ್ಲಿ ನೀವು ನೋಡುತ್ತೀರಿ, ಒಂದು ಹನಿ ಮಳೆಯಾಗುವ ಮೊದಲು, ಜನರು ಮುಂಗಾರು ಮಳೆಯನ್ನು ಘೋಷಿಸುತ್ತಾರೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. ಇದು ನಮ್ಮ ಸಮಾಜದ ಮನಸ್ಥಿತಿ, ನಾವು ಹೇಗೆ ಯೋಚಿಸುತ್ತೇವೆ, ನಿರ್ದಿಷ್ಟ ಸನ್ನಿವೇಶವನ್ನು ನಾವು ಹೇಗೆ ಪ್ರತಿಬಿಂಬಿಸುತ್ತೇವೆ ಎಂಬುದರ ಕುರಿತು ಮಾತನಾಡುವ ವಿಶ್ಲೇಷಣಾತ್ಮಕ ಚಿತ್ರವಾಗಿದೆ ಎಂದು ವಿವರಿಸಿದ್ದಾರೆ.

ಬಾಲಿವುಡ್ ಖ್ಯಾತ ನಿರ್ದೇಶಕ ಅನುಭವ್ ಸಿನ್ಹಾ ಅವರ ಭೀಡ್ ಚಿತ್ರ ಇದೇ ಮಾರ್ಚ್ ೨೪ ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇಡೀ ಸಿನಿಮಾವನ್ನು ಕಪ್ಪು ಬಿಳುಪಿನಲ್ಲಿ ಚಿತ್ರೀಕರಿಸಲಾಗಿದೆ. ಬನಾರಸ್ ಮೀಡಿಯಾ ವರ್ಕ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಬಾಲಿವುಡ್ ಹೀರೋ ರಾಜ್‌ಕುಮಾರ್ ರಾವ್ ಜೊತೆಗೆ ಭೂಮಿ ಪೆಡ್ನೇಕರ್ ನಟಿಸುತ್ತಿದ್ದಾರೆ. ಇವರೊಂದಿಗೆ ಪಂಕಜ್ ಕಪೂರ್, ಅಶುತೋಷ್ ರಾಣಾ, ದಿಯಾ ಮಿರ್ಜಾ, ವೀರೇಂದ್ರ ಸಕ್ಸೇನಾ, ಆದಿತ್ಯ ಶ್ರೀವಾಸ್ತವ್, ಕೃತಿಕಾ ಕಾಮ್ರಾ, ಕರಣ್ ಪಂಡಿತ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ