ಭೀಕರ ಹೊಂಚುದಾಳಿ: ೬೪ ಮೃತ್ಯು

ಪಪುವಾ ನ್ಯೂಗಿನಿ, ಫೆ.೧೯- ಸುಮಾರು ೧೭ ಬುಡಕಟ್ಟು ಜನಾಂಗದ ನಡುವಿನ ಕಲಹಕ್ಕೆ ಸಂಬಂಧಿಸಿದಂತೆ ನಡೆದ ಹೊಂಚುದಾಳಿಯಲ್ಲಿ ಕನಿಷ್ಠ ೬೪ ಮಂದಿ ಮೃತಪಟ್ಟ ಘಟನೆ ಇಲ್ಲಿ ಹೊರವಲಯದ ಹೈಲ್ಯಾಂಡ್ಸ್ ಪ್ರದೇಶದಲ್ಲಿ ನಡೆದಿದೆ.
ಎಂಗಾ ಪ್ರಾಂತ್ಯದಲ್ಲಿ ಬುಡಕಟ್ಟು ವಿವಾದದ ಸಂದರ್ಭದಲ್ಲಿ ಹಲವರನ್ನು ಗುಂಡಿಕ್ಕಿ ಕೊಲ್ಲಲಾಯಿತು ಎಂದು ರಾಷ್ಟ್ರೀಯ ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ಹೈಲ್ಯಾಂಡ್ಸ್ ಪ್ರದೇಶದಲ್ಲಿ ಕಳದ ಹಲವು ವರ್ಷಗಳಿಂದ ಬುಡಕಟ್ಟು ಜನಾಂಗದ ನಡುವೆ ಹಿಂಸಾಚಾರ ನಡೆಯುತ್ತಲೇ ಇದ್ದು, ಸಾವಿನ ಪ್ರಕರಣ ಬೆಳಕಿಗೆ ಬಂದಿದೆ. ಆದರೆ ಅಕ್ರಮ ಶಸ್ತ್ರಾಸ್ತ್ರಗಳ ಪೂರೈಕೆಯಿಂದ ಇತ್ತೀಚಿಗೆ ನಡೆದ ದಾಳಿಯು ಅತ್ಯಂತ ಭೀಕರ ರೀತಿಯಿಂದ ಕೂಡಿತ್ತು ಎಂದು ಹೇಳಲಾಗಿದೆ. ರಾಜಧಾನಿ ಪೋರ್ಟ್ ಮೊರೆಸ್ಬಿಯ ವಾಯುವ್ಯಕ್ಕೆ ಸುಮಾರು ೬೦೦ ಕಿ.ಮೀ. ವಾಬಾಗ್ ಪಟ್ಟಣದ ಸಮೀಪದಲ್ಲಿ ಮೃತದೇಹಗಳ ಕುರಿತ ತನಿಖೆ ನಡೆಸುತ್ತಿದ್ದಾರೆ. ಎಂಗಾ ಪ್ರಾಂತ್ಯದಲ್ಲಿ ಬುಡಕಟ್ಟು ಸಮುದಾಯದ ನಡುವಿನ ಕಲಹ ನಡೆಯುತ್ತಲೇ ಇದ್ದು, ಕಳೆದ ಜುಲೈನಲ್ಲಿ ನಡೆದ ಹಿಂಸಾಚಾರದ ಪರಿಣಾಮ ಮೂರು ತಿಂಗಳ ಲಾಕ್‌ಡೌನ್ ವಿಧಿಸಲಾಗಿತ್ತು. ಈ ಸಮಯದಲ್ಲಿ ಪೊಲೀಸರು ಕರ್ಫ್ಯೂ ಹಾಗೂ ಪ್ರಯಾಣದ ನಿರ್ಬಂಧ ವಿಧಿಸಿದ್ದರು. ಅಲ್ಲದೆ ಕಳೆದ ವರ್ಷ ಆಗಸ್ಟ್‌ನಲ್ಲಿ ಮೂರು ಮೃತದೇಹಗಳ ಗ್ರಾಫಿಕ್ ತುಣುಕು ಆನ್‌ಲೈನ್‌ನಲ್ಲಿ ಪ್ರಸಾರ ಮಾಡಿದ ನಂತರ ಹಿಂಸಾಚಾರವು ಅಂತಾರಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿತ್ತು. ಅದೂ ಅಲ್ಲದೆ ಕಳೆದ ತಿಂಗಳು ನಡೆದ ಘರ್ಷಣೆಯಲ್ಲಿ ೧೫ ಮಂದಿ ಮೃತಪಟ್ಟ ಬಳಿಕ ಸರ್ಕಾರ ಇಲ್ಲಿ ತುರ್ತು ಪರಿಸ್ಥಿತಿ ಘೋಷಿಸಿತ್ತು.