ಭೀಕರ ಅಪಘಾತ 8 ಮಂದಿ ಸಾವು

ಬೆಂಗಳೂರು, ಜು.೨೪- ಗಾಂಜಾ ಗ್ಯಾಂಗ್ ಹಿಡಿಯಲು ಆಂಧ್ರ ಪ್ರದೇಶಕ್ಕೆ ತೆರಳಿದ್ದ ವೇಳೆ ನಗರ ಪೊಲೀಸರ ಕಾರು ಚಿತ್ತೂರಿನ ಬಳಿ ಭೀಕರ ಅಪಘಾತಕ್ಕೀಡಾಗಿ ಪಿಎಸ್‌ಐ, ಕಾನ್ಸ್‌ಟೇಬಲ್ ಸೇರಿ ಮೂವರು ಮೃತಪಟ್ಟರೆ,ಕೊಪ್ಪಳ ಜಿಲ್ಲೆಯ ಕುಕನೂರಿನ ಭಾನಾಪೂರದ ಬಳಿ ಲಾರಿ ಸ್ಕಾರ್ಪಿಯೋ ಕಾರಿಗೆ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಐವರು ಸೇರಿದಂತೆ ೮ ಮಂದಿ ಮೃತಪಟ್ಟಿದ್ದಾರೆ.
ಶಿವಾಜಿನಗರ ಪೊಲೀಸರ ಕಾರು ಚಿತ್ತೂರಿನ ಪೂತಲಪಟ್ಟು ಮಂಡಲದ ಪಿ. ಕೊಟ್ಟಕೋಟ ರೈಲ್ವೆ ಕೆಳ ಸೇತುವೆ ಬಳಿ ಭೀಕರ ಅಪಘಾತಗೊಂಡು ಶಿವಾಜಿನಗರ ಠಾಣೆಯ ಪಿಎಸ್‌ಐ ಅವಿನಾಶ್ (೨೯) ಕಾನ್ಸ್‌ಟೆಬಲ್ ಅನಿಲ್ ಮುಲಿಕ್ (೨೬) ಹಾಗೂ ಖಾಸಗಿ ಕ್ಯಾಬ್ ಚಾಲಕ ಜೋಸೆಫ್ ಮೃತಪಟ್ಟಿದ್ದಾರೆ.
ಪಿಎಸ್‌ಐ ಅವಿನಾಶ್ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಚಿಕ್ಕಳಕೆರೆ ಗ್ರಾಮದವರು. ಕಾನ್ಸ್?ಟೆಬಲ್ ಅನಿಲ್ ಮುಲಿಕ್ ಬೀದರ್ ಜಿಲ್ಲೆ ಬಸವಕಲ್ಯಾಣ ತಾಲ್ಲೂಕಿನ ರೋಲವಾಡಿ ಗ್ರಾಮದವರಾಗಿದ್ದಾರೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಪ್ರೊಬೆಷನರಿ ಪಿಎಸ್‌ಐ ದೀಕ್ಷಿತ್ ಕಾನ್ಸ್?ಟೆಬಲ್ ಶರಣಬಸವ ಅವರನ್ನು ವೆಲ್ಲೂರಿನ ಸಿಎಂಸಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದ್ದು ಇಬ್ಬರು ಸ್ಥಿತಿ ಗಂಭೀರವಾಗಿದೆ.
ಚಿತ್ತೂರಿನ ಪೂತಲಪಟ್ಟು ಮಂಡಲದ ಪಿ. ಕೊಟ್ಟಕೋಟ ರೈಲ್ವೆ ಕೆಳ ಸೇತುವೆ ಬಳಿ ಅಪಘಾತ ನಡೆದಿದೆ. ಚಿತ್ತೂರಿನಿಂದ ತಿರುಮಲಕ್ಕೆ ಹೋಗುವ ರಸ್ತೆಯ ನಡುವೆ ಈ ಸೇತುವೆ ಬರುತ್ತದೆ. ಪೊಲೀಸ್ ಸಿಬ್ಬಂದಿ ಇದ್ದ ಇನ್ನೋವಾ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಸುಮಾರು ೩೦ ಅಡಿ ದೂರದ ಮತ್ತೊಂದು ರಸ್ತೆಗೆ ಹಾರಿಹೋಗಿ ಬಿದ್ದು ಸ್ಥಳದಲ್ಲೇ ಮೂವರು ಸಾವನ್ನಪ್ಪಿ ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ.
ಸಬ್ ಇನ್ಸ್‌ಪೆಕ್ಟರ್ ಅವಿನಾಶ್, ಪ್ರೊಬೆಷನರಿ ಪಿಎಸ್‌ಐ ದೀಕ್ಷಿತ್, ಪೊಲೀಸ್ ಕಾನ್ಸ್‌ಟೆಬಲ್ ಅನಿಲ್ ಸೇರಿ ಆರು ಮಂದಿಯ ತಂಡವು ಖಾಸಗಿ ಟ್ರಾವೆಲ್ಸ್‌ನಿಂದ ಇನೊವಾ ಕಾರನ್ನು ಬಾಡಿಗೆ ಪಡೆದು ಗಾಂಜಾ ಗ್ಯಾಂಗ್ ಹಿಡಿಯಲು ಆಂಧ್ರಕ್ಕೆ ತೆರಳಿದ್ದಾಗ ಮುಂಜಾನೆ ೩ ಗಂಟೆ ಸುಮಾರಿಗೆ ಘಟನೆ ನಡೆದಿದೆ.
ಚಿತ್ತೂರಿನ ಬಳಿ ಆರೋಪಿಗಳು ಇರುವ ಬಗ್ಗೆ ತಂಡ ಮಾಹಿತಿ ಹೊಂದಿತ್ತು. ಹೀಗಾಗಿ ಅವರನ್ನು ಹಿಡಿಯಲು ಖಾಸಗಿ ಇನೋವಾ ಕಾರಲ್ಲಿ ತೆರಳಿದ್ದರು. ಆರೋಪಿ ಚಿತ್ತೂರಿನಲ್ಲಿ ಸಿಗದ ಹಿನ್ನೆಲೆಯಲ್ಲಿ ಹುಡುಕಾಟಕ್ಕಾಗಿ ಇನ್ನೊಂದು ಕಡೆಗೆ ಹೊರಟಿತ್ತು. ಈ ವೇಳೆ ಅಪಘಾತ ಸಂಭವಿಸಿದೆ. ಅಪಘಾತದ ಬಗ್ಗೆ ಮಾಹಿತಿ ಪಡೆದಿರುವ ಶಿವಾಜಿನಗರ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಪುಲಿಕೇಶಿನಗರದ ಎಸಿಪಿ ಅಬ್ದುಲ್ ಕೂಡ ಘಟನಾ ಸ್ಥಳಕ್ಕೆ ತೆರಳಿದ್ದಾರೆ.
ಇತ್ತ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಮೌನ ಮಡುಗಟ್ಟಿದೆ. ತಮ್ಮ ಸಹೋದ್ಯೋಗಿಗಳ ದಾರುಣ ಸಾವು ಹಿನ್ನಲೆಯಲ್ಲಿ ಶಿವಾಜಿನಗರ ಠಾಣೆ ಬಳಿ ನೀರವ ಮೌನ ಆವರಿಸಿದೆ. ಸಹೋದ್ಯೋಗಿಗಳನ್ನು ನೆನೆದು ಪೊಲೀಸ್? ಸಿಬ್ಬಂದಿ ಕಣ್ಣೀರಿಡುತ್ತಿದ್ದಾರೆ.
ಐವರು ಸಾವು:
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪೂರದ ಬಳಿ ಹುಟ್ಟುಹಬ್ಬ ಮುಗಿಸಿಕೊಂಡು ಬರುತ್ತಿದ್ದ ವೇಳೆ ನಿನ್ನೆ ರಾತ್ರಿ ಲಾರಿ ಸ್ಕಾರ್ಪಿಯೋ ಕಾರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸಂಭವಿಸಿದ
ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಭಾನಾಪೂರದ ಬಳಿ ರಾತ್ರಿ ೧೦:೩೦ರ ವೇಳೆ ಈ ಅಪಘಾತ ಸಂಭವಿಸಿ,ಕೊಪ್ಪದ(೬೨), ಮೃತರ ಸೊಸೆ ಗಿರಿಜಮ್ಮ(೪೫), ಅಣ್ಣನ ಮಕ್ಕಳಾದ ಶಾಂತಮ್ಮ(೩೫), ಪಾರ್ವತಮ್ಮ (೩೨), ಸಂಬಂಧಿ ಕಸ್ತೂರಮ್ಮ(೨೦) ಮೃತಪಟ್ಟಿದ್ದು, ಚಾಲಕ ಹರ್ಷವರ್ಧನ, ಬಸವರಾಜ, ಪುಟ್ಟರಾಜ, ಭೂಮಿಕಾ ಗಂಭೀರವಾಗಿ ಗಾಯಗೊಂಡಿದ್ದಾರೆ.
ಡಿಕ್ಕಿ ಹೊಡೆದ ರಭಸಕ್ಕೆ ಸ್ಕಾರ್ಪಿಯೋ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಶವಗಳನ್ನು ಹೊರತೆಗೆಯಲು ಹರಸಾಹಸ ಪಟ್ಟು ಹೊರ ತೆಗೆಯಲಾಯಿತು.
ನಾಲ್ವರಿಗೆ ಗಾಯ:
ಗಾಯಗೊಂಡ ನಾಲ್ವರನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳು ಬಾಲಕ ಹರ್ಷವರ್ಧನ ಸ್ಥಿತಿ ಗಂಭೀರವಾಗಿದೆ. ಕುಕನೂರು ತಾಲೂಕಿನ ಬಿನ್ನಾಳ ಗ್ರಾಮದ ದೇವಪ್ಪ ಕೊಪ್ಪದ್ ಕುಟುಂಬದ ಜೊತೆ ಸಂಬಂಧಿಯ ಮಗನ ಹುಟ್ಟುಹಬ್ಬ ಆಚರಿಸಲು ಕೊಪ್ಪಳಕ್ಕೆ ಬಂದಿದ್ದರು. ರಾತ್ರಿ ಹುಟ್ಟುಹಬ್ಬ ಮುಗಿಸಿಕೊಂಡು ಮರಳಿ ಬಿನ್ನಾಳ ಗ್ರಾಮಕ್ಕೆ ಬರುತ್ತಿದ್ದ ವೇಳೆ ಅಪಘಾತವಾಗಿದೆ.
ಘಟನೆಯಲ್ಲಿ ಸದ್ಯ ಸ್ಥಳಕ್ಕೆ ಕೊಪ್ಪಳ ಎಸ್‌ಪಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

5 ಲಕ್ಷ ಪರಿಹಾರ
ಕೊಪ್ಪಳ ಜಿಲ್ಲೆಯ ಕುಕನೂರು ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಮೃತರ ಕುಟುಂಬಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಲಾ ೫ ಲಕ್ಷ ರೂ. ಪರಿಹಾರ ಪ್ರಕಟಿಸಿದ್ದಾರೆ.

ಅರಗ ಸಂತಾಪ
ಚಿತ್ತೂರಿನ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಮೂವರು ಪೊಲೀಸ್ ಸಿಬ್ಬಂದಿ ಮೃತ ಪಟ್ಟಿರುವ ಘಟನೆಯ ಬಗ್ಗೆ ಗೃಹ ಸಚಿವ ಅರಗ ಜ್ಞಾನೇಂದ್ರ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಗಾಯಗೊಂಡಿರುವ ಇತರ ಸಿಬ್ಬಂದಿಗೆ ಸೂಕ್ತ ಚಿಕಿತ್ಸೆ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ.