ಭೀಕರ ಅಪಘಾತ ನಾಲ್ವರ ಸಾವು

ವಿಜಯಪುರ,ನ.೨೯- ಸರ್ಕಾರಿ ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ನಿನ್ನೆ ರಾತ್ರಿ ವಿಜಯಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ೫೨ರಲ್ಲಿ ನಡೆದಿದೆ.
ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ನಾಂದೇಡ ಮೂಲದ ಚಿದಾನಂದ ನಾಗೇಶ ಸೂರ್ಯವಂಶಿ (೪೫), ಸೋಮನಾಥ ಕಾಳೆ (೪೩), ಸಂದೀಪ ಪವಾರ (೪೦) ಹಾಗಯ ವಿಜಯಕುಮಾರ್ ಕಾಶಿನಾಥ್ ದೊಡಮನಿ (೩೨) ಮೃತ ದುರ್ದೈವಿಗಳು.
ವಿಜಯಪುರದಲ್ಲಿ ನಿಶ್ಚಿತಾರ್ಥ ಕಾರ್ಯಕ್ಕೆ ಆಗಮಿಸಿದ್ದ ಬಸ್ ನರಗುಂದಕ್ಕೆ ವಾಪಸ್ ತೆರಳುತ್ತಿದ್ದ ವೇಳೆ ವೇಗವಾಗಿ ಬಂದ ಫಾರ್ಚ್ಯೂನರ್ ಕಾರಿಗೆ ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಕಾರಿನ ಅತೀವೇಗ ಹಾಗೂ ಚಾಲಕನ ಆಜಾಗರೂಕತೆಯೆ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಪಘಾತದ ಪರಿಣಾಮ ಎನ್‌ಎಚ್ ೫೨ರಲ್ಲಿ ಕೆಲ ಕಾಲ ವಾಹನ ಸಂಚಾರಕ್ಕೆ ವ್ಯತ್ಯಯ ವಾಗಿದ್ದು ವಿಜಯಪುರ ಗ್ರಾಮೀಣ ಪೊಲೀಸರು ಸುದ್ದಿ ತಿಳಿದ ತಕ್ಷಣವೇ ಧಾವಿಸಿ ಅಪಘಾತಗೊಂಡ ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.