ಭೀಕರ ಅಪಘಾತ: ಐವರು ಕೂಲಿ ಕಾರ್ಮಿಕರು ದುರ್ಮರಣ

ಚಿತ್ರದುರ್ಗ.ಡಿ.೨೭; ನಸುಕಿನ ಜಾವ ಜವರಾಯನ ಅಟ್ಟಹಾಸಕ್ಕೆ ಕೂಲಿಗಾಗಿ ಹೊರಟಿದ್ದ 5 ಜನ ಸಾವನ್ನಪ್ಪಿರುವ ಘಟನೆ ಮೊಳಕಾಲ್ಮೂರು ತಾಲೂಕಿನ ಬಿಜಿಕೆರೆ ಬಳಿ ರಾಷ್ಟ್ರೀಯ ಹೆದ್ದಾರಿ 150A ರಲ್ಲಿ ನಡೆದಿದೆ.ಮೃತಪಟ್ಟವರನ್ನು ರಾಯಚೂರು ಜಿಲ್ಲೆ ದೇವದುರ್ಗ ಮೂಲದ ತಿಮ್ಮಣ್ಣ(40), ಆತನ ಪತ್ನಿ ರತ್ನಮ್ಮ(38), ಮಹೇಶ್(19), ದುರ್ಗಪ್ಪ(16) ಹಾಗೂ 55 ವರ್ಷದ ವ್ಯಕ್ತಿ ಎಂದು ಗುರುತಿಸಲಾಗಿದ್ದು, ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಬಿಜಿಕೆರೆ ಬಳಿ ರಾಷ್ಟ್ರೀಯ ಹೆದ್ದಾರಿ 150A ನಲ್ಲಿ ಇಂದು ಬೆಳಗಿನ ಜಾವ 4 ಗಂಟೆ ಸುಮಾರಿನಲ್ಲಿ ರಾಯಚೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕ್ರೂಸರ್ ವಾಹನಕ್ಕೆ ಬೆಂಗಳೂರಿನಿಂದ ರಾಯಚೂರಿಗೆ ತೆರಳುತ್ತಿದ್ದ KSRTC ಬಸ್ ಡಿಕ್ಕಿ ಹೊಡೆದಿದೆ ಪರಿಣಾಮ ಎರಡೂ ವಾಹನಗಳ ಮುಂಭಾಗ ನಜ್ಜುಗುಜ್ಜಾಗಿದ್ದು, 5 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದು, 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಳ್ಳಕೆರೆ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ದೇಹಗಳನ್ನು ಮೊಳಕಾಲ್ಮೂರು ತಾಲೂಕು ಆಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ.ಕ್ರೂಸರ್ ನಲ್ಲಿದ್ದವರು ಕೂಲಿ ಕೆಲಸಕ್ಕಾಗಿ ಬೆಂಗಳೂರಿಗೆ ಹೊರಟಿದ್ದರು ಎಂದು ತಿಳಿದುಬಂದಿದೆ.ಸ್ಥಳಕ್ಕೆ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ರಾಧಿಕಾ ಜಿ., ಮೊಳಕಾಲ್ಮೂರು ಠಾಣೆ ಪೊಲೀಸರು ಭೇಟಿ ನೀಡಿದ್ದರು