
ಚಿತ್ರದುರ್ಗ,ಆ.೧೩- ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ಕು ಮಂದಿ ಸೇರಿ ಐದು ಜನರು ದುರ್ಮರಣ ಹೊಂದಿರುವ ಘಟನೆ ಭಾನುವಾರ ಮುಂಜಾನೆ ಚಿತ್ರದುರ್ಗ ಸಮೀಪದ ಮಲ್ಲಾಪುರ ಸೇತುವೆಯ ಕೆಳಭಾಗದಲ್ಲಿ ಸಂಭವಿಸಿದೆ.
ಬಿಜಾಪುರ ಮೂಲದ ಸಂಗನ ಬಸಪ್ಪ(೩೬), ಪತ್ನಿ ರೇಖಾ ಸಂಗನ ಬಸಪ್ಪ(೨೯), ಪುತ್ರ ಅಗಸ್ತ್ಯ ಸಂಗನ ಬಸಪ್ಪ(೮), ರೇಖಾ ಅವರ ಸಹೋದರ ಭೀಮಾಶಂಕರ(೨೬) ಹಾಗೂ ಭೀಮಾಶಂಕರ್ ಸ್ನೇಹಿತ ಕೆಜಿಎಫ್ ಮೂಲದ ಮಧುಸೂದನ್(೨೪) ಮೃತಪಟ್ಟ ದುರ್ಧೈವಿಗಳು.
ಬಿಜಾಪುರದ ಖಾಸಗಿ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ ಸಂಗನ ಬಸಪ್ಪ ತನ್ನ ಕುಟುಂಬ ಹಾಗೂ ಸಂಬಂಧಿ ಈರಣ್ಣ ಅವರ ಕುಟುಂಬದ ಜೊತೆ ಚಿಕ್ಕಮಗಳೂರು ಕಡೆಗೆ ಪ್ರವಾಸಕ್ಕಾಗಿ ತೆರಳಲು ತೀರ್ಮಾನಿಸಿ ಕಳೆದ ರಾತ್ರಿ ೯ ಗಂಟೆ ಸುಮಾರಿನಲ್ಲಿ ಈರಣ್ಣ ಅವರು ಒಂದು ಕಾರಿನಲ್ಲಿ ಮತ್ತು ಸಂಗನ ಬಸಪ್ಪ ಅವರು ಮತ್ತೊಂದು ಕಾರಿನಲ್ಲಿ ಹೊರಟಿದ್ದಾರೆ.
ಕೆ.ಎ.-೨೮, ಝಡ್-೮೫೭೨ ಟಾಟಾ ಕಾರನ್ನು ಸಂಗನ ಬಸಪ್ಪ ಅವರೆ ಚಾಲನೆ ಮಾಡಿಕೊಂಡು ಬರುತ್ತಿದ್ದು, ಕಾರು ಚಿತ್ರದುರ್ಗದ ಮಲ್ಲಾಪುರ ಸಮೀಪ ಬರುತ್ತಿರುವಾಗ ಸೇತುವೆ ಕೆಳಭಾಗದಲ್ಲಿ ಹೊಸಪೇಟೆಯಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಲಾರಿಗೆ ಕಾರು ಚಾಲಕನ ನಿಯಂತ್ರಣ ತಪ್ಪಿ ಹಿಂಬದಿಯಿಂದ ರಬಸವಾಗಿ ಡಿಕ್ಕಿಹೊಡೆದಿದೆ. ಪರಿಣಾಮ ಸಂಗನ ಬಸಪ್ಪ, ಪತ್ನಿ ರೇಖಾ, ಪುತ್ರ ಅಗಸ್ತ್ಯ, ರೇಖಾ ಅವರ ಸಹೋದರ ಭೀಮಾಶಂಕರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಭೀಮಾಶಂಕರ್ ಸ್ನೇಹಿತ ಮಧುಸೂದನ್ ಅವರನ್ನು ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಉಳಿದಂತೆ ಸಂಗನ ಬಸಪ್ಪ ಮತ್ತು ರೇಖಾ ಅವರ ಮಕ್ಕಳಾದ ಅನ್ವಿತಾ ಸಂಗನ ಬಸಪ್ಪ(೬), ಆದರ್ಶ ಸಂಗನ ಬಸಪ್ಪ(೪) ಇವರುಗಳು ಗಾಯಗೊಂಡಿದ್ದು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಂಗನ ಬಸಪ್ಪ ಅವರ ಕಾರು ಅಪಘಾತ ಆಗುತ್ತಿಂದ್ದತೇಯೆ ಇನ್ನೊಂದು ಕಾರಿನಲ್ಲಿದ್ದ ಈರಣ್ಣ ಅವರ ಕುಟುಂಬ ತಕ್ಷಣ ನೆರವಿಗೆ ಬಂದು ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅಪಘಾತ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.