ಭಿನ್ನಾಭಿಪ್ರಾಯ ಬಿಡಿ ಪಕ್ಷ ಸಂಘಟಿಸಿ

J p Bhavana-- JDS Sabhe

ಬೆಂಗಳೂರು, ಜ. ೭- ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಬಲಗೊಳಿಸಿ ಸಂಘಟಿಸಲು ಎಲ್ಲ ನಾಯಕರುಗಳು ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಕೆಲಸ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.
ಪಕ್ಷವನ್ನು ಬಲಪಡಿಸುವ ಸಂಬಂಧ ಪಕ್ಷದ ಕಚೇರಿಯಲ್ಲಿಂದು ನಡೆದ ಜೆಡಿಎಸ್ ಎಲ್ಲ ಶಾಸಕರು, ಮಾಜಿ ಶಾಸಕರು, ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು ಹಾಗೂ ಪ್ರಮುಖ ಮುಖಂಡರ ಸಭೆಯಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಅವರು, ಪಕ್ಷವನ್ನು ಸಂಘಟಿಸುವ ದೃಷ್ಠಿಯಿಂದ ನಾಯಕರುಗಳ ಸಭೆ ಕರೆದಿದ್ದೇನೆ. ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಲಹೆ ಸೂಚನೆಗಳನ್ನು ನೀಡಿ ಎಂದರು.
ವೈಯಕ್ತಿಕ ಭಿನ್ನಾಭಿಪ್ರಾಯಗಳ ಬಗ್ಗೆ ಮಾತನಾಡುವುದು ಬೇಡ. ಎಲ್ಲರೂ ಭಿನ್ನಾಭಿಪ್ರಾಯಗಳನ್ನು ಮರೆತು ಪಕ್ಷ ಸಂಘಟನೆಗೆ ಕೆಲಸ ಮಾಡೋಣ. ಆ ನಿಟ್ಟಿನಲ್ಲಿ ಸಲಹೆ ನೀಡಿ. ನಾನು ಇದನ್ನೆಲ್ಲ ಗಂಭೀರವಾಗಿ ತೆಗೆದುಕೊಂಡು ಪಕ್ಷ ಕಟ್ಟುವ ಕೆಲಸ ಮಾಡುತ್ತೇನೆ ಎಂದರು.
ಹೆಚ್‌ಡಿಡಿ ಹೇಳಿಕೆ
ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡರು, ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಗೆಲ್ಲುವ ಮೂಲಕ ಪಕ್ಷದ ಶಕ್ತಿ ಸಾಬೀತಾಗಿದೆ. ಬೇರು ಮಟ್ಟದಲ್ಲಿ ಈಗಲೂ ಹೋರಾಟ ಮಾಡುವ ಕಾರ್ಯಕರ್ತರು ಇದ್ದಾರೆ ಎಂದರು.
ಮುಂಬರುವ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯ್ತಿ ಚುನಾವಣೆಗಳಿಗೆ ಈಗಿನಿಂದಲೇ ಪಕ್ಷ ಸಂಘಟಿಸಿ ಹೋರಾಟ ನಡೆಸೋಣ. ಎಲ್ಲರೂ ಒಗ್ಗೂಡಿ ಪಕ್ಷ ಕಟ್ಟೋಣ ಎಂದರು.
ರಾಜ್ಯದಲ್ಲಿ ಜೆಡಿಎಸ್‌ಗೆ ಹಿನ್ನಡೆಯಾಗಿದೆ ಎಂಬೆಲ್ಲಾ ಮಾತುಗಳು ಕೇಳಿ ಬರುತ್ತಿವೆ. ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳುವುದು ಬೇಡ. ಪಕ್ಷವನ್ನು ಸಂಘಟಿಸಿ ಮುಂದಿನ ದಿನಗಳಲ್ಲಿ ಪಕ್ಷದ ಶಕ್ತಿಯನ್ನು ತೋರಿಸುವ ಕೆಲಸವನ್ನು ಎಲ್ಲರೂ ಮಾಡೋಣ ಎಂದು ಅವರು ಹೇಳಿದರು.