ಭಿಕ್ಷುಕರಿಗೆ ಸೂಕ್ತ ಪುನರ್ವಸತಿಗೆ ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷರ ಆಗ್ರಹ


ಶಿವಮೊಗ್ಗ, ಸೆ. ೨: ಇತ್ತೀಚೆಗೆ ಶಿವಮೊಗ್ಗ ನಗರದ ವಿವಿಧೆಡೆ ಭಿಕ್ಷುಕರು ಹಾಗೂ ನಿರ್ಗತಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿದ್ದು, ಇವರಿಗೆ ಸೂಕ್ತ ಪುನರ್ವಸತಿ ಕಲ್ಪಿಸಬೇಕು. ಅವರು ನೆಮ್ಮದಿಯುತ ಜೀವನ ಸಾಗಿಸಲು ಅವಕಾಶ ಕಲ್ಪಿಸಬೇಕು ಎಂದು ಜಿಲ್ಲಾ ಪಂಚಾಯ್ತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ವೀರಭದ್ರಪ್ಪ ಪೂಜಾರ್ ಆಗ್ರಹಿಸಿದ್ದಾರೆ.
ಈ ಸಂಬಂಧ ಅವರು ಜಿಲ್ಲಾಧಿಕಾರಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ ಪತ್ರ ಬರೆದಿದ್ದಾರೆ.
ನಗರದ ಪ್ರಮುಖ ರಸ್ತೆ, ವೃತ್ತ ಹಾಗೂ ಧಾರ್ಮಿಕ ಕೇಂದ್ರಗಳ ಬಳಿ ಭಿಕ್ಷುಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿದ್ದಾರೆ. ಸಾಕಷ್ಟು ಜನರು ರೋಗರುಜುನ, ಅಂಗವೈಕಲ್ಯದಿಂದ ಬಳಲುತ್ತಿದ್ದಾರೆ. ಕೆಲವರು ಅನ್ನಾಹಾರಕ್ಕೆ ಪರಿತಪಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಇವರಿಗಾಗಿಯೇ ಸಮಾಜ ಕಲ್ಯಾಣ ಇಲಾಖೆಯಡಿ, ಪುನರ್ವಸತಿ ಕೇಂದ್ರವಿದೆ. ಇಲ್ಲಿ ವಸತಿ ಜೊತೆಗೆ ಊಟೋಪಚಾರದ ವ್ಯವಸ್ಥೆಯಿದೆ. ಇಂತಹವರನ್ನು ಈ ಕೇಂದ್ರಕ್ಕೆ ಸೇರ್ಪಡೆ ಮಾಡಿ, ಅಗತ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಭಿಕ್ಷುಕರು, ನಿರ್ಗತಿಕರನ್ನು ಪತ್ತೆ ಹಚ್ಚಿ ಕರೆದೊಯ್ಯಲು ವಾಹನ ಹಾಗೂ ಸಿಬ್ಬಂದಿಗಳಿದ್ದಾರೆ. ಆದಾಗ್ಯೂ ಇಂತಹವರನ್ನು ಪತ್ತೆ ಹಚ್ಚಿ ಕರೆದೊಯ್ಯುವ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ವೀರಭದ್ರಪ್ಪ ಪೂಜಾರ್‌ರವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.