ಭಿಕ್ಷಾಟನೆ ತಡೆಗೆ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ; ನೂತನ‌ ಅಧ್ಯಕ್ಷ ಬಸವರಾಜ್ ನಾಯ್ಕ್


ದಾವಣಗೆರೆ. ಜು.೩೦; ಭಿಕ್ಷಾಟನೆಯಲ್ಲಿ ತೊಡಗಿರುವವರನ್ನು ಬಂಧಿಸಿ,ಭಿಕ್ಷಾಟನಾ ನಿರ್ಮೂಲನೆ ಹಾಗೂ ಪುನರ್ವಸತಿಕೇಂದ್ರದಿಂದ ಪ್ರಾಥಮಿಕ ವಿಚಾರಣಿ ನಡೆಸಿ, ಭಿಕ್ಷುಕರು ಎಂದು ಕಂಡು ಬಂದಲ್ಲಿ ಅವರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ, ಅವರಿಂದ ಬಂಧನ ಆದೇಶ ಹೊರಡಿಸಿದ ನಂತರ ಕೇಂದ್ರದ ರಕ್ಷಣೆಯಲ್ಲಿ ಇರಿಸಿಕೊಳ್ಳಲಾಗುವುದು ಎಂದು‌
ಕೇಂದ್ರ ಪರಿಹಾರ ಸಮಿತಿಯ ನೂತನ ಅಧ್ಯಕ್ಷರಾದ ಎಂ.ಬಸವರಾಜ್ ನಾಯ್ಕ್ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ೧೪ ಭಿಕ್ಷಾಟನಾ ನಿರ್ಮೂಲನೆ ಹಾಗೂ ಪುನರ್ವಸತಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.ಉಳಿದಂತೆ ಹಾಸನ,ಕೊಪ್ಪಳ,ಹಾವೇರಿ,ಯಾದಗಿರಿ,ಬೀದರ್,ಬಾಗಲಕೋಟೆಯಲ್ಲಿ ಸ್ಥಳ ಗುರುತಿಸಿ ಕೇಂದ್ರ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು ರಾಜ್ಯದಲ್ಲಿ ೨೫ ಕೇಂದ್ರ ನಿರ್ಮಾಣ ಮಾಡಲಾಗುವುದು ಈ ಮೂಲಕ ಭಿಕ್ಷಾಟನೆ ನಿಷೇಧ ಮಾಡಲಾಗುವುದು.ಭಿಕ್ಷಾಟನೆ ನಡೆಸುತ್ತಿರುವವರನ್ನು ಕೇಂದ್ರಕ್ಕೆ ಕರೆತರಲಾಗಿದೆ.ಸೆಸ್ ಮೂಲಕ ಸಾಕಷ್ಟು ಹಣ ಬರುತ್ತದೆ.ಈ ಹಣದಿಂದ ಪುನರ್ವಸತಿ ಕೇಂದ್ರ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದರು.
ಬೆಂಗಳೂರಿನಲ್ಲಿರುವ ಕೇಂದ್ರ ಪರಿಹಾರ ಸಮಿತಿಗೆ ನಾಳೆ ಬೆಳಗ್ಗೆ ೯ ಕ್ಕೆ ಮೈಸೂರು ಮಹಾರಾಜರಾದ ಯದುವೀರ್ ಒಡೆಯರ್ ಆಗಮಿಸಲಿದ್ದು ಕೇಂದ್ರದ ವೀಕ್ಷಣೆ ಮಾಡಲಿದ್ದಾರೆ.ಪ್ರಥಮವಾಗಿ ಭಿಕ್ಷಾಟನೆಯನ್ನು ತಡೆಗಟ್ಟುವ ಉದ್ದೇಶದಿಂದ ಅಂದಿನ  ಮೈಸೂರು ಮಹಾರಾಜರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಬಹದ್ದೂರ್ ರವರು 1944 ರಲ್ಲಿ ಬೆಂಗಳೂರು – ಮಾಗಡಿ ಮುಖ್ಯರಸ್ತೆಯಲ್ಲಿ 300 ಎಕರೆ 03 ಗುಂಟೆ ಜಮೀನನ್ನು  ಮಂಜೂರು ಮಾಡಿತ್ತು. ಕಟ್ಟಡಗಳೊಂದಿಗೆ 1948 ರಲ್ಲಿ ಕಾರ್ಯ ಪ್ರಾರಂಭಿಸಲಾಗಿದೆ.ತದನಂತರಲ್ಲಿ ಸರ್ಕಾರವು  ರಾಜ್ಯದಲ್ಲಿ ಭಿಕ್ಷಾಟನೆಯನ್ನು ನಿಷೇಧಿಸಿ, ಕರ್ನಾಟಕ ಭಿಕ್ಷಾಟನಾ ನಿಷೇಧ ಅಧಿನಿಯಮ ಮತ್ತು ನಿಯಮಗಳು 1975 ನ್ನು ಜಾರಿಗೆ ತಂದಿದೆ.
ಈ ಅಧಿನಿಯಮದನ್ವಯ ಭಿಕ್ಷಾಟನೆಯಲ್ಲಿ ತೊಡಗಿರುವವರನ್ನು ಬಂಧಿಸಿ, ಕೇಂದ್ರದಿಂದ ಪ್ರಾಥಮಿಕ ವಿಚಾರಣೆ ನಡೆಸಿ, ಭಿಕ್ಷುಕರು ಎಂದು ಕಂಡು ಬಂದಲ್ಲಿ ಅವರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ, ಅವರಿಂದ ಬಂಧನ ಆದೇಶ ಹೊರಡಿಸಿದ ನಂತರ ಕೇಂದ್ರದ ರಕ್ಷಣೆಯಲ್ಲಿ ಇರಿಸಿಕೊಳ್ಳಲಾಗುತ್ತದೆ.ಕೇಂದ್ರದ ಆಶ್ರಯದಲ್ಲಿರಿಸಿದ ನಂತರದಲ್ಲಿ ಅವರುಗಳಿಗೆ ವಸತಿ, ಊಟ-ಉಪಹಾರ, ಸಮವಸ್ತ್ರ, ಹಾಸಿಗೆ ಹೊದಿಕೆ, ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ.ಅವರುಗಳು ಭಿಕ್ಷಾಟನೆಗೆ ಮರಳದಂತೆ, ದೈಹಿಕ ಸಾಮರ್ಥ್ಯ ಹೊಂದಿದ ನಿರಾಶ್ರಿತರಿಗೆ ವಿವಿಧ ವೃತ್ತಿಪರ ತರಬೇತಿಗಳನ್ನು ನೀಡಲಾಗುತ್ತಿದೆ.ತರಬೇತಿ ನಿರತ ನಿರಾಶ್ರಿತರಿಗೆ ತರಬೇತಿ ಭತ್ಯೆಯನ್ನು ನೀಡಲಾಗುತ್ತದೆ. 8 ಗಂಟೆ ತರಬೇತಿ ಪಡೆದವರಿಗೆ ರೂ.75 ಗಳಂತೆ, 8 ಗಂಟೆಗಳಿಗಿಂತ ಕಡಿಮೆ ಅವಧಿ ತರಬೇತಿ ಪಡೆದವರಿಗೆ ರೂ.38/-ಗಳಂತೆ ಅವರ ಉಳಿತಾಯ ಖಾತೆಗೆ ಜಮೆ ಮಾಡಲಾಗುತ್ತದೆ.ಭಿಕ್ಷಾಟನೆ ನಿಯಂತ್ರಿಸಲು ತಡೆಗಟ್ಟಲು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಮೂಲಕ ಕಟ್ಟು ನಿಟ್ಟಿನ ಕ್ರಮವಹಿಸಲು ಶ್ರಮಿಸಲಾಗುವುದು ಎಂದರು.ಬೆಂಗಳೂರು ಗ್ರಾಮಾಂತರ ಹಾಗೂ ನಗರ ವ್ಯಾಪ್ತಿಯಲ್ಲಿ ೭೨೪ ಜನ ಭಿಕ್ಷುಕರನ್ನು ಕೇಂದ್ರಕ್ಕೆ ರವಾನಿಸಲಾಗಿದೆ ಉಳಿದಂತೆ ಹುಬ್ಬಳ್ಳಿ ಧಾರವಾಡ ದಲ್ಲಿ ೩೨೪,ದಕ್ಷಿಣ ಕನ್ನಡ ೧೩೨, ಕಲ್ಬುರ್ಗಿ ೧೫೫,ಬಳ್ಳಾರಿ ೧೭೧, ದಾವಣಗೆರೆಯಲ್ಲಿ ೧೭೧ ಸೇರಿದಂತೆ ಎಲ್ಲಾ ಜಿಲ್ಲೆಯಲ್ಲಿ ಭಿಕ್ಷಾಟನೆಯಲ್ಲಿ ತೊಡಗಿರುವವರನ್ನು ಕೇಂದ್ರಕ್ಕೆ ರವಾನಿಸಲಾಗಿದೆ ಎಂದರು. ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಭಿಕ್ಷಾಟನೆಯಲ್ಲಿ ತೊಡಗಿರುವವರು ಕಂಡುಬಂದರೆ ಮೊ ; ೯೪೪೮೮೧೭೭೭೭ ಇಲ್ಲಿಗೆ ಕರೆ ಮಾಡಿ ಕೇಂದ್ರಕ್ಕೆ ಕಳುಹಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಅಕ್ಕಿಪ್ರಭು,ಪಾಲಾಕ್ಷಪ್ಪ,ದೇವೇಂಪ್ಪ,ನಾಗರಾಜ್ ಕೆ,ಕೆ.ಎಸ್ ಮಂಜುನಾಥ್ ‌ಬಾಬರ್,ಲೋಕೇಶ್,ಹನುಮಂತಪ್ಪ, ಮೂರ್ತಿ ಇದ್ದರು.