ಭಿಕ್ಷಾಟನೆಯಲ್ಲಿ ತೊಡಗಿದ್ದ 21 ಮಕ್ಕಳ ರಕ್ಷಣೆ

ಕಲಬುರಗಿ,ಜು.16: ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪೊಲೀಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಕ್ಕಳ ಸಹಾಯವಾಣಿ, ಮಕ್ಕಳ ಪಾಲನಾ ಸಂಸ್ಥೆಗಳು ಕಳೆದ‌ ಎರಡು‌ ದಿನದಿಂದ ಜಂಟಿಯಾಗಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕಲಬುರಗಿ ನಗರದಲ್ಲಿ ಭಿಕ್ಷಾಟನೆಯಲ್ಲಿ ತೊಡಗಿದ್ದ 21 ಮಕ್ಕಳನ್ನು ಹಾಗೂ 6 ಜನ ಪೋಷಕರನ್ನು ರಕ್ಷಿಸಲಾಗಿದೆ.

ಕಾರ್ಯಾಚರಣೆದಿಂದ ರಕ್ಷಿಸಲಾದ ಪೈಕಿ 21 ಮಕ್ಕಳನ್ನು ಪುನರ್ವಸತಿ ಮತ್ತು ಮುಂದಿನ ಸೂಕ್ತ ಕ್ರಮಕ್ಕಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಎದುರು ಹಾಜರುಪಡಿಸಿ, ಮಕ್ಕಳನ್ನು ಬಾಲ ನ್ಯಾಯ ಕಾಯ್ದೆಯಂತೆ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ದಾಖಲಿಸಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಲ್ಲಣ್ಣ ದೇಸಾಯಿ ಅವರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್, ಪೊಲೀಸ್ ಆಯುಕ್ತ ಡಾ. ವೈ.ಎಸ್.ರವಿಕುಮಾರ್, ಡಿ.ಸಿ.ಪಿ ಅಡ್ಡೂರು ಶ್ರೀನಿವಾಸಲು, ಎ.ಸಿ.ಪಿ. ದೀಪನ್ ಎಂ.ಎನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನವೀನ್ ಕುಮಾರ್ ಯು. ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶಿವಶರಣಪ್ಪ ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಲ್ಲಣ್ಣ ದೇಸಾಯಿ, ಕಾನೂನು ಅಧಿಕಾರಿ ಭಾರತೇಶ್ ಶೀಲವಂತರ್ , ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಡಾ.ಯಲ್ಲಾಲಿಂಗ ಮತ್ತು ಸದಸ್ಯ ಚಂದ್ರಕಾಂತ್ ರವರ ನೇತೃತ್ವದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದರು.

ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಭಿಕ್ಷಾಟನೆ ಹೆಚ್ಚಿದ್ದರ ಬಗ್ಗೆ ಅದರಲ್ಲಿಯೂ ಮಕ್ಕಳು ಭಿಕ್ಷಾಟನೆಯಲ್ಲಿ ತೊಡಗಿದ್ದರ ಬಗ್ಗೆ ಸಾರ್ವಜನಿಕವಾಗಿ ಕಳವಳ ವ್ಯಕ್ತವಾಗಿತ್ತು. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ‌ ಸಭೆಯೊಂದರಲ್ಲಿ ಭಿಕ್ಷಾಟನೆಯು ಹೆಚ್ಚಿದ್ದರ ಬಗ್ಗೆ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಸಹ ತೀವ್ರ ಕಳವಳ ವ್ಯಕ್ತಪಡಿಸಿದರು.

ಈ ಹಿನ್ನೆಲೆಯಲ್ಲಿ ಜುಲೈ‌ 15 ಮತ್ತು 16 ರಂದು ಮಕ್ಕಳ ಸಹಾಯವಾಣಿ ಕೇಂದ್ರಗಳಾದ ಡಾನ್ ಬಾಸ್ಕೊ, ಮಾರ್ಗದರ್ಶಿ, ಎಸ್.ಎಸ್.ಎಲ್ ಕಾನೂನು ಮಹಾವಿದ್ಯಾಲಯ ಸೇರಿದಂತೆ ಮಕ್ಕಳ ಪಾಲನಾ ಸಂಸ್ಥೆಗಳ ನೆರವು ಮತ್ತು ಪೊಲೀಸ್ ಇಲಾಖೆಯ ರಕ್ಷಣೆಯೊಂದಿಗೆ ಭಿಕ್ಷಾಟನೆಯನ್ನು ತಡೆಗಟ್ಟುವ ಜೊತೆಗೆ ಮಕ್ಕಳನ್ನು ರಕ್ಷಿಸುವ ಕಾರ್ಯಕ್ಕೆ ಜಿಲ್ಲಾ‌ ಮಕ್ಕಳ ರಕ್ಷಣಾ ಘಟಕ ಮುಂದಾಗಿದೆ.

ಒಟ್ಟು 5 ತಂಡಗಳು ನಗರದ ಪ್ರಮುಖ ಸ್ಥಳಗಳಲ್ಲಿ ಮಕ್ಕಳೊಂದಿಗೆ ಭಿಕ್ಷೆ ಬೇಡುತ್ತಿದ್ದ ಹಲವರಿಗೆ ಕ್ರಿಪ್ರಗತಿಯ ಕಾರ್ಯಾಚರಣೆ ಮೂಲಕ ಭಿಕ್ಷಾಟನೆ ಕಾನೂನು ಬಾಹಿರ ಎಂಬ ಎಚ್ಚರಿಕೆಯ ಅರಿವಿನ‌ ಸಂದೇಶ ಸಹ ನೀಡಲಾಗಿದೆ.

ಭಿಕ್ಷಾಟನೆ ಕಾನೂನು ಬಾಹಿರವಾಗಿದ್ದು, ಒಂದು ವೇಳೆ ಭಿಕ್ಷಾಟನೆಯಲ್ಲಿ ಮಕ್ಕಳು ಕಂಡುಬಂದಲ್ಲಿ ಮಕ್ಕಳ ಉಚಿತ ಸಹಾಯವಾಣಿ 1098ಗೆ ಅಥವಾ 112ಗೆ ಸಾರ್ವಜನಿಕರು ಕರೆ ಮಾಡಬಹುದಾಗಿದೆ.

ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಬಸವರಾಜ್, ಗೌರಿಶಂಕರ್, ಸತೀಶ್, ಸುಮಂಗಲಾ ನಡಗೇರಿ, ಶರಣಮ್ಮ, ಅರುಣಾ,
ಮಕ್ಕಳ ಸಹಾಯವಾಣಿ ಸಂಯೋಜಕರಾದ ಬಸವರಾಜ್ ತೆಂಗಳಿ, ಶ್ರೀ ಸುಂದರ್ ರಾಜ್, ಮಕ್ಕಳ ಸಹಾಯವಾಣಿ ತಂಡದ ಕು.ಪ್ರಿಯಾಂಕ , ಕು.ಸೌಮ್ಯ, ಸಮಾಜ ಕಲ್ಯಾಣ ಇಲಾಖೆಯ ದೇವಲಾ ನಾಯಕ್ ಮತ್ತು ರಾಕೇಶ್, ಮಕ್ಕಳ ಪಾಲನಾ ಸಂಸ್ಥೆಯ ಆಪ್ತ ಸಮಾಲೋಚಕ ವಿಠಲ್ ಭಕ್ರೆ, ಸವಿತಾ ಪಾಟೀಲ್, ಕು.ಶ್ರೀದೇವಿ ಸೇರಿದಂತೆ, ವಿಶ್ವ ಸೇವಾ‌ ಮಿಷನ್ ಮುಖ್ಯಸ್ಥ ವಿಶ್ವನಾಥ್ ಸ್ವಾಮಿ, ಶಾರದ ಯಾಕಾಪುರ್, ಭಾಗ್ಯಲಕ್ಷ್ಮಿ ರವರು ಹಾಗೂ ಪೊಲೀಸ್ ಸಿಬ್ಬಂದಿಗಳು ಭಾಗವಹಿಸಿದ್ದರು.