ಭಾಷೆ, ಸಂಸ್ಕೃತಿ ಒಂದೇ ನಾಣ್ಯದ ಎರಡು ಮುಖಗಳು

ಕೋಲಾರ, ಏ.೯- ಒಂದು ಧರ್ಮ ಮನುಷ್ಯನನ್ನು ಶಿಸ್ತು ಮತ್ತು ಚೌಕಟ್ಟಿನೊಳಗೆ ತರುತ್ತದೆ. ಸಂವಹನ ನಡೆಸಲು ಭಾಷೆ ಅತ್ಯಗತ್ಯ ಬದುಕಿನ ಸಂಸ್ಕೃತಿಗೆ ಆಧಾರವಾಗಿರುತ್ತದೆ. ಮನುಷ್ಯ ಜೀವಂತವಾಗಿರಬೇಕಾದರೆ ಭಾಷೆ
ಜೀವಂತವಾಗಿರಬೇಕು. ಭಾಷೆ ಮತ್ತು ಸಂಸ್ಕೃತಿ ಒಂದೇ ನಾಣ್ಯದ ಎರಡು ಮುಖಗಳು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅವರು ತಿಳಿಸಿದರು.
ಕೆಜಿಎಫ್ ಬಿ.ಇ.ಎಂ.ಎಲ್ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕನ್ನಡ ಅನುಷ್ಟಾನ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಭಾಷೆಯ ಜೊತೆ ನಮ್ಮ ಬದುಕಿದೆ ಎಂದು ಎಲ್ಲರೂ ಅರಿತುಕೊಳ್ಳಬೇಕು. ಕಾರ್ಖಾನೆಯ ವತಿಯಿಂದ ಪ್ರತಿ ವರ್ಷ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದೆ. ಕನ್ನಡ ಭಾಷೆಯ ಹಾಗೂ ಸಂಸ್ಕೃತಿಯ ಬಗ್ಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇದರಿಂದ ನನಗೆ ತುಂಬಾ ಸಂತೋಷವಾಗಿದೆ ಎಂದು ತಿಳಿಸಿದರು. ಕಾರ್ಖಾನೆಯಲ್ಲಿ ಕನ್ನಡ ಅನುಷ್ಠಾನದ ಕೊರತೆಗಳು ಇರುವುದರ ಬಗ್ಗೆ ಅಧಿಕಾರಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು. ಕೇಂದ್ರ ಕಾರ್ಖಾನೆಗಳ ತ್ರಿಭಾಷಾ ಪದ್ಧತಿ ಅಳವಡಿಕೆಯಲ್ಲಿದೆ. ಕನ್ನಡಕ್ಕೆ ಮೊದಲ ಆದ್ಯತೆ ಕೊಡಬೇಕು. ಜಾಲತಾಣಗಳಲ್ಲಿ ಕನ್ನಡ ಭಾಷೆ ಅರ್ಜಿಗಳಲ್ಲಿಕನ್ನಡ ಭಾಷೆ ಇರಬೇಕು. ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಅವಕಾಶಗಳನ್ನು ಒದಗಿಸಬೇಕೆಂದು ತಿಳಿಸಿದರು.
ಮುಖ್ಯ ಪ್ರಧಾನ ವ್ಯವಸ್ಥಾಪಕರಾದ ವಿ.ಈಶ್ವರ್ ಭಟ್ ಮಾತನಾಡಿ, ಬಿಎಂಎಲ್ ಕಾರ್ಖಾನೆಯು ಕನ್ನಡ ಜಲನೆಲ ಗಾಳಿಯನ್ನು ಬಳಸಿಕೊಂಡು ಸಾವಿರಾರು ಜನಗಳಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸಿಕೊಟ್ಟಿದೆ. ೧೯೬೪ ರಲ್ಲಿ ಬಿಇಎಂಎಲ್ ಪ್ರಾರಂಭವಾಯಿತು, ೧೯೮೪ ರಲ್ಲಿ ಮೈಸೂರಿನಲ್ಲಿ ಪ್ರಾರಂಭವಾಯಿತು. ರಕ್ಷಣಾ ಉತ್ಪನ್ನಗಳು, ರೈಲು ಮತ್ತು ಮೆಟ್ರೋ ಪ್ರಮುಖ ಸಾರಿಗೆ ಉತ್ಪನ್ನಗಳು, ಗಣಿ ಮತ್ತು ನಿರ್ಮಾಣ ಉತ್ಪನ್ನಗಳು, ಗಣಿಗಾರಿಕೆಯಲ್ಲಿ ಬಳಸುವ ಉತ್ಪನ್ನಗಳು, ಆಳ ಗಣಿಗಾರಿಕೆಯಲ್ಲಿ ಬಳಸುವ ಉತ್ಪನ್ನಗಳು, ಹೈಡ್ರಾಲಿಕ್ಸ್ ಪವರ್ ಲೈನ್ ಉತ್ಪನ್ನಗಳು, ರೈಲು ಉತ್ಪಾದನೆ ಘಟಕ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗ ವಸ್ತುಗಳನ್ನು ಜಾಗತಿಕ ಮಟ್ಟಕ್ಕೆ ಮಾರುಕಟ್ಟೆ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಆಪ್ತಕಾರ್ಯದರ್ಶಿ ಡಾ.ವೀರಶೆಟ್ಟಿ ರವರು ಮಾತನಾಡಿ, ಭಾಷೆ ಆಧಾರದ ಮೇಲೆ ವಿಂಗಡಣೆ ಗೊಂಡಿರುವ ಸಿ ಕ್ಯಾಟಗಿರಿಯ ದಕ್ಷಿಣ ಭಾರತದ ರಾಜ್ಯಗಳಲ್ಲಿ ಹಿಂದಿ ಅನಿವಾರ್ಯವಲ್ಲ. ತ್ರಿಭಾಷಾ ಸೂತ್ರ ಅನುಸರಿಸಬೇಕು. ಬಿಇಎಂಎಲ್ ಜಾಲತಾಣದಲ್ಲಿ ಕನ್ನಡ ಬಳಕೆ, ಉದ್ಯೋಗ ಅಧಿಸೂಚನೆಗಳು ಕನ್ನಡದಲ್ಲಿ ಇರಬೇಕು. ಬಿಇಎಂಎಲ್ ಉತ್ಪಾದಿಸುವ ಉಪಕರಣಗಳ ಮಾಹಿತಿಯನ್ನು ಕಿರು ಹೊತ್ತಿಗೆಯ ರೂಪದಲ್ಲಿ ಪ್ರಕಟಿಸಬೇಕು ಎಂದರು,
ಈ ಸಂದರ್ಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಗವಿಸಿದ್ದಯ್ಯ, ಸದಸ್ಯರಾದ ಡಾ. ಕಿಶೋರ್ , ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರವಿಕುಮಾರ್, ಕೆಜಿಎಫ್ ತಾಲ್ಲೂಕು ದಂಡಾಧಿಕಾರಿಗಳಾದ ಸುಜಾತ ಹಾಗೂ ಬಿಇಎಂಎಲ್‌ನ ಅಧಿಕಾರಿಗಳು ಉಪಸ್ಥಿತರಿದ್ದರು.