ಭಾಷೆ ಉಳಿದರೆ ಸಂಸ್ಕೃತಿ ಪರಂಪರೆ ಉಳಿವು: ಸಿದ್ಧಲಿಂಗಯ್ಯ

ತುಮಕೂರು, ಜು. ೨೮- ಭಾಷೆ ಸಂವಹನ ಮಾಧ್ಯಮ. ಭಾಷೆಯಿಂದ ಜಗತ್ತಿನಲ್ಲಿ ಎಲ್ಲ ವ್ಯವಹಾರಗಳು ನಡೆಯತ್ತವೆ. ವಿಶ್ವದ ಎಲ್ಲ ಭಾಷೆಗಳಿಗೂ ತನ್ನದೇ ಆದ ಸಂಸ್ಕೃತಿ ಪರಂಪರೆ ಇರುತ್ತದೆ. ಆ ಭಾಷೆ ಉಳಿದರೆ ಮಾತ್ರ ನಮ್ಮ ನಮ್ಮ ಸಂಸ್ಕೃತಿಗಳು ಉಳಿಯುತ್ತವೆ ಎಂದು ಚಿಂತಕ ಸಾಹಿತಿ ಡಾ. ಹೊಲತಾಳ್ ಸಿದ್ಧಗಂಗಯ್ಯ ಅಭಿಪ್ರಾಯಪಟ್ಟರು.
ಜಿಲ್ಲಾ, ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನಿಂದ ಯಲ್ಲಾಪುರದ ಪ್ರೊ. ಮರಿದೇವರ ಕಲ್ಪವೃಕ್ಷದಲ್ಲಿ ನಡೆದ ಲಿಂ. ಹೆಂಜೇಗೌಡ ಮತ್ತು ಹೆಂಜಮ್ಮ ಮರಿದೇವರು ದತ್ತಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಒಂದೊಂದು ಭಾಷೆಯೂ ಶ್ರೇಷ್ಠವೇ. ಪ್ರೊ. ಸಿ.ಹೆಚ್.ಮರಿದೇವರು ಸಾಮಾಜಿಕವಾಗಿ ಬಹುಮುಖೀ ವ್ಯಕ್ತಿ. ಸಾಹಿತ್ಯಿಕ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕವಾಗಿ ಸುಮಾರು ೬-೭ ದಶಕಗಳ ಕಾಲ ಇಡೀ ಜಿಲ್ಲೆಯಲ್ಲಿ ಸಾಹಿತ್ಯ ಸಂಚಲನ ಉಂಟು ಮಾಡಿ ಗ್ರಾಮೀಣರಲ್ಲಿ ಒಲವು ಮೂಡಿಸಿದ ಧೀಮಂತ ವ್ಯಕ್ತಿ ಎಂದರು.
ನಂತರ ನಡೆದ ವಚನ ಚಿಂತನ ಗೋಷ್ಠಿಯಲ್ಲಿ ಯುವ ಸಮೂಹ ಹಾಗೂ ವಚನ ಓದು ಎಂಬ ಒಂದೇ ವಿಷಯದ ಮೇಲೆ ನಾಲ್ಕು ಜನ ವಿದ್ವಾಂಸರು ಭಿನ್ನ ಭಿನ್ನ ನೆಲೆಯಲ್ಲಿ ಚಿಂತನ ನಡೆಸಿದರು.
ವಿಷಯ ಮಂಡನೆ ಮಾಡಿದ ಚಿತ್ರದುರ್ಗದ ನಿ. ಪ್ರಾಧ್ಯಾಪಕ ಪ್ರೊ. ಜೆ.ವಿ.ಶ್ರೀರಾಮರೆಡ್ಡಿ ಮಾತನಾಡಿ, ಸಾಹಿತ್ಯ ನಿಂತ ನೀರಲ್ಲ ಹಾಗೆಯೇ ಜನರ ಭಾವನೆಗಳು ಕಾಲದಿಂದ ಕಾಲಕ್ಕೆ ಹೊಸ ಹೊಸ ಚಿಂತನೆಗಳಿಗೆ ವಿಸ್ತರಣೆಯಾಗುತ್ತದೆ ಎಂದರು.
ಬೆಂಗಳೂರಿನ ನಿವೃತ್ತ ಅಧಿಕಾರಿ ಕಂಚಿವರದಯ್ಯನವರು ಸ್ಪಂದನೆ ನೀಡಿ ವಚನಗಳಲ್ಲಿ ಆಸಕ್ತಿ ಮೂಡುವಂತೆ ಯುವ ಸಮೂಹ ಸಂಘ ಸಂಸ್ಥೆಗಳು ಪ್ರಯತ್ನ ಮಾಡಬೇಕು. ಧರ್ಮ ಮೊದಲು ಭಯದಿಂದ ಹುಟ್ಟಿತ್ತು, ಶರಣರು ಭಯವನ್ನು ದೂರ ಮಾಡಿ ದಯೆಯೇ ಧರ್ಮವೆಂದು ತಿಳಿಸಿದರು ಎಂದರು.
ಪ್ರತಿಸ್ಪಂದನ ಮಾಡುತ್ತಾ ಶರಣ ಕವಿ ಷಟ್ಪದಿ ಪದ್ಯ ಕಾವ್ಯ ರಚಿಸುವ ಮುದ್ದೇನಹಳ್ಳಿ ನಂಜಯ್ಯ ಶರಣರು ಅನುಭವ ಮಂಟಪದಲ್ಲಿ ಅನುಭವ ವಿನಿಮಯ ಮಾಡಿಕೊಂಡು ಮಥಿಸಿದ ಅಂಶಗಳೇ ವಚನಗಳಾಗಿ ಮೂಡಿಬಂದವು. ಶರಣರು ಸಂವಾದ ಮಾಡಿದ ಪರಿಯೇ ಶೂನ್ಯ ಸಂಪಾದನೆ ಗ್ರಂಥಕ್ಕೆ ಪ್ರೇರಣೆ ನೀಡಿತು ಎಂದರು.
ವಿದ್ವಾನ್ ಎಂ.ಜಿ.ಸಿದ್ಧರಾಮಯ್ಯ ಮಾತನಾಡಿ, ದತ್ತಿ ಸ್ಮರಣೆಯ ಮೂಲಕ ಶರಣ ಶರಣೆಯರ ಆದರ್ಶ ಬದುಕನ್ನು ಮುಂದಿನ ಪೀಳಿಗೆಗೆ ಮುಟ್ಟಿಸುವ ನಿಟ್ಟಿನಲ್ಲಿ ಪರಿಷತ್ತು ಶ್ರಮಿಸುತ್ತಿದೆ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಜಿಲ್ಲಾ ಶಸಾಪದ ಯುವ ಘಟಕದ ಅಧ್ಯಕ್ಷ ಎಂ.ಸುರೇಶ್, ಶರಣರು ಸಾವಿಗೆ ಅಂಜಲಿಲ್ಲ, ಸಾವನ್ನೆ ಆಹ್ವಾನಿಸಿ ಸಂಭ್ರಮಿಸಿದರು ಎಂದರು,
ಹಂ.ಸಿ.ಕುಮಾರಸ್ವಾಮಿ, ವರ್ಷಿಣಿ ನಾಗಣಿ ನಾಗಭೂಷಣ್, ವಿಜಯಕುಮಾರ್, ಚಿಕ್ಕಬೆಳ್ಳಾವಿ ಶಿವಕುಮಾರ್, ಅಂತರಗಂಗೆ ಶಂಕರಪ್ಪ, ಚೆನ್ನಬಸವಣ್ಣ ವಚನ ಗಾಯನ ಮಾಡಿದರು.
ಪಾವಗಡದ ರಾಮಾಂಜಿನರೆಡ್ಡಿ ಕಾರ್ಯಕ್ರಮ ನಿರೂಪಿಸಿದರು.