ಭಾಷೆಯ ಬೆಳವಣಿಗೆ ಎಲ್ಲಾ ಕನ್ನಡಿಗರಿಂದ ಆಗಬೇಕು

ಹೊನ್ನಾಳಿ.ಜ.೬; ಕನ್ನಡ ಭಾಷೆಯ ಬೆಳವಣಿಗೆ ಎಲ್ಲಾ ಕನ್ನಡಿಗರಿಂದ ಆಗಬೇಕು. ಕನ್ನಡದ ಪರಿಸ್ಥಿತಿ ಹೇಗಾಗಿದೆ ಎಂದರೆ ಊಟ ಮಾಡುವುದು ಕನ್ನಡ, ಮಾತನಾಡುವುದು ಇಂಗ್ಲಿಷ್ ಎನ್ನುವಂತಾಗಿದೆ ಎಂದು ನಿವೃತ್ತ ಇಂಜಿನಿಯರ್ ದತ್ತಿ ದಾನಿ ಎಲ್.ಎಸ್. ವೈಶ್ಯರ್ ಹೇಳಿದರು.
ಇಲ್ಲಿನ ಹಿರೇಕಲ್ಮಠದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಎಸ್‌ಜೆವಿಪಿ ಶಿಕ್ಷಣ ಮಹಾವಿದ್ಯಾಲಯ ಸಂಯುಕ್ತಾಶ್ರಯದಲ್ಲಿ  ಹಮ್ಮಿಕೊಂಡಿದ್ದ 2020-21ನೇ ಸಾಲಿನ ದತ್ತಿ ಉಪನ್ಯಾಸ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ “ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ವಚನ ಸಾಹಿತ್ಯದ ಪಾತ್ರ” ಎಂಬ ವಿಷಯದ ಬಗ್ಗೆ ಅವರು ಉಪನ್ಯಾಸ ನೀಡಿದರು.ಸ್ವಾತಂತ್ರö್ಯ ಪೂರ್ವದಲ್ಲಿ ನಾವು ಚನ್ನಾಗಿದ್ದೆವು ಹಾಗೂ ನಮ್ಮ ಕನ್ನಡ ಭಾಷೆ ಚನ್ನಾಗಿತ್ತು. ಆದರೆ, ಪ್ರಸ್ತುತ ದಿನದಲ್ಲಿ ಭಾಷೆಗೆ ಬಹು ದೊಡ್ಡ ಆತಂಕ ಎದುರಾಗಿದೆ. ವಿದ್ಯಾರ್ಥಿಗಳು ಭಾಷಾಭಿಮಾನ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.ವಚನ ಸಾಹಿತ್ಯದಲ್ಲಿ ಆಸಕ್ತಿ ಬೆಳೆಯಲು ಮೊದಲು ಪುಸ್ತಕಗಳನ್ನು ಓದುವುದನ್ನು ರೂಢಿಸಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಪುಸ್ತಕಗಳನ್ನು ಓದುವುದೇ ಕಡಿಮೆಯಾಗಿದೆ ಎಂದು ವಿಷಾದಿಸಿದರು. ವಿದ್ಯಾರ್ಥಿಗಳು ಮೊಬೈಲ್ ಫೋನ್‌ಗಳಿಗೆ ದಾಸರಾಗದೆ ಓದಿನ ಕಡೆ ಗಮನಹರಿಸಬೇಕು. ಮನೆಗಳಲ್ಲಿ ಹೆಣ್ಣುಮಕ್ಕಳು ಟಿವಿಗೆ ಅಂಟಿಕೊAಡು ಕುಳಿತು ತಮ್ಮ ಮಕ್ಕಳಿಗೆ ಸಂಸ್ಕಾರ ಕೊಡುವುದನ್ನೇ ಮರೆತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಚ್.ಎಸ್. ಮಂಜುನಾಥ ಕುರ್ಕಿ ಮಾತನಾಡಿ, ವಚನ ಸಾಹಿತ್ಯ ಎಂದೆಂದಿಗೂ ಪ್ರಸ್ತುತವಾಗಿದೆ. ಶರಣರು ನುಡಿದಂತೆ ನಡೆದರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಸಾಗಬೇಕಿದೆ ಎಂದು ಹೇಳಿದರು.ವಚನಗಳಲ್ಲಿ ನೊಂದವರಿಗೆ ಶಕ್ತಿ ತುಂಬುವ ಹಾಗೂ ಮೌಲ್ಯಯುತ ಅಂಶಗಳು ಹೇರಳವಾಗಿವೆ. ಆತ್ಮ ಸಾಕ್ಷಾತ್ಕಾರದ ಪ್ರತಿರೂಪ ಅಭಿವ್ಯಕ್ತವಾಗುತ್ತದೆ. ಇಂದು ಅಧಿಕಾರ ಹಾಗೂ ದುಡ್ಡಿನ ಹಿಂದೆ ಹೋಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಮನುಷ್ಯ ನಾಗರೀಕ ಸಮಾಜದಲ್ಲಿ ಮೃಗದಂತಾಗಿದ್ದಾನೆ. ಇದು ಶುದ್ಧ ತಪ್ಪು ಎಂದು ತಿಳಿಸಿದರು.ಒಡೆಯರ್ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಎಸ್‌ಜೆವಿಪಿ ಕಾಲೇಜು ಪ್ರಾಂಶುಪಾಲ ಡಾ.ಎಚ್.ಎಸ್. ಜಯಪ್ಪ ಉದ್ಘಾಟಿಸಿದರು.ತಾಲೂಕು ಕಸಾಪ ಅಧ್ಯಕ್ಷ ಕತ್ತಿಗೆ ಗಂಗಾಧರಪ್ಪ, ಕಾರ್ಯದರ್ಶಿ ಕೆ. ಶೇಖರಪ್ಪ ಮಾತನಾಡಿದರು. ಎಸ್‌ಜೆವಿಪಿ ಕಾಲೇಜಿನ ಪ್ರಶಿಕ್ಷಣಾರ್ಥಿಗಳು ಸ್ವಾಗತಿಸಿ-ನಿರೂಪಿಸಿದರು.