ಭಾಷೆಯ ಜೊತೆಜೊತೆಗೆ ನಮ್ಮ ಜೀವನ ಸಾಗಬೇಕಿದೆ


ಚಿತ್ರದುರ್ಗ.ನ.೬; ಮಾತೃಭಾಷೆ ಕನ್ನಡ ಅನ್ನ ಕೊಟ್ಟಂತಹ ಭಾಷೆ, ಹಾಗಾಗಿ ಕನ್ನಡಿಗರಾದ ನಾವೆಲ್ಲ ಕನ್ನಡವನ್ನು ಪ್ರೀತಿಸಬೇಕು. ಭಾಷೆಯ ಜೊತೆಜೊತೆಗೆ ನಮ್ಮ ಜೀವನ ಸಾಗಬೇಕಿದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಮತ್ತು ಎಸ್.ಜೆ.ಎಂ. ಶಾಂತಿ ಮತ್ತು ಪ್ರಗತಿ ಫೌಂಡೇಶನ್ ಸಹಯೋಗದಲ್ಲಿ ನಡೆದ ಮೂವತ್ತನೇ ವರ್ಷದ ಹನ್ನೊಂದನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಅಧ್ಯಕ್ಷತೆ ವಹಿಸಿ, ಕನ್ನಡ ರಾಜ್ಯೋತ್ಸವ ನಿಮಿತ್ತ ಕನ್ನಡಾಂಬೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಶ್ರೀಗಳು, ದೇವ ಭಾಷೆ ಜನಭಾಷೆ ಆಗದೆ ಇದ್ದ ಕಾಲದಲ್ಲಿ ದೇವಭಾಷೆಯನ್ನು ಜನಭಾಷೆಯನ್ನಾಗಿಸಿದ್ದು ೧೨ನೇ ಶತಮಾನದ ಬಸವಾದಿ ಶರಣರು. ಬಸವಣ್ಣ, ಅಲ್ಲಮಾದಿ ಶರಣರು ಜಾಗತಿಕ ಮಟ್ಟದಲ್ಲಿ ಕನ್ನಡದ ಕಂಪನ್ನು ಹರಡಲು ಕನ್ನಡದಲ್ಲಿ ವಚನ ರಚಿಸಿದರು. ಪ್ರಪಂಚದಾದ್ಯಂತ ಕನ್ನಡಗರಿದ್ದಾರೆ. ಅವರಿಗೆಲ್ಲ ಕನ್ನಡದ ಮೇಲೆ ಅಪಾರ ಪ್ರೀತಿ ಗೌರವ ಇದೆ ಎಂದರು.
ಸಿದ್ಧಯ್ಯನಕೋಟೆಯ ಶ್ರೀ ಬಸವಲಿಂಗ ಸ್ವಾಮಿಗಳು ಮಾತನಾಡಿ, ಬಸವಾದಿ ಶರಣರು ಕನ್ನಡದಲ್ಲಿ ವಚನಗಳನ್ನು ಕೊಟ್ಟಿದ್ದಾರೆ. ನಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕು. ದುಂದುವೆಚ್ಚಕ್ಕೆ ಕಡಿವಾಣ ಹಾಕುವುದರಿಂದ ಒಳ್ಳೆಯ ಬದುಕನ್ನು ಕಟ್ಟಿಕೊಳ್ಳಬೇಕು. ೧೨ನೇ ಶತಮಾನದಲ್ಲಿ ಸರಳವಾಗಿ ವಿವಾಹ ಮಾಡುತ್ತಿದ್ದರು. ಅದನ್ನೇ ಮುರುಘಾ ಶ್ರೀಗಳು ಮುಂದುವರಿಸಿದ್ದಾರೆ ಎಂದು ಸ್ಮರಿಸಿದರು.
ಮುಖ್ಯಮಂತ್ರಿಗಳ ಸಲಹೆಗಾರ ಎಂ.ಲಕ್ಷ್ಮೀನಾರಾಯಣ ಮಾತನಾಡಿ, ಶ್ರೀಗಳು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಸಾಮೂಹಿಕ ವಿವಾಹ ಕಾರ್ಯಕ್ರಮ ಮೂವತ್ತು ವರ್ಷ ನಿರಂತರವಾಗಿ ನಡೆಯುತ್ತಿರುವುದು ಸಂತಸದ ವಿಚಾರ. ಇಂತಹ ಬೃಹತ್ತಾದ ಅನುಭವ ಮಂಟಪದಲ್ಲಿ ವಿವಾಹ ನಡೆಯುತ್ತಿರುವುದು ನಿಮ್ಮೆಲ್ಲರ ಸೌಭಾಗ್ಯವಾಗಿದೆ. ಶ್ರೀಗಳು ಲೋಕಕಲ್ಯಾಣಕ್ಕಾಗಿ ಜ್ಞಾನ ದಾಸೋಹ, ಅನ್ನದಾಸೋಹದ ಮೂಲಕ ಬಡಕುಟುಂಬಗಳಿಗೆ ಆಧಾರವಾಗಿದ್ದಾರೆ. ಬಸವಣ್ಣನವರ ಆಶಯಗಳನ್ನು ತತ್ವಗಳನ್ನು ಪ್ರಚಾರ ಮಾಡುತ್ತಿದ್ದಾರೆ. ಬಸವ ಪುತ್ಥಳಿ ನಿರ್ಮಾಣ ಆಗುವುದರ ಮೂಲಕ ಚಿತ್ರದುರ್ಗ ಪ್ರವಾಸಿ ತಾಣವಾಗಬೇಕು ಎಂದು ತಿಳಿಸಿದರು.
ಮತ್ತೋರ್ವ ಅತಿಥಿ ದಾವಣಗೆರೆ ಪೂರ್ವವಲಯ ಪೊಲೀಸ್ ಮಹಾನಿರ್ದೇಶಕ ಎಸ್.ರವಿ ಮಾತನಾಡಿದರು. ಇದೇ ಸಂದರ್ಭದಲ್ಲಿ ೩ ಅಂತರ್ಜಾತಿ ವಿವಾಹ ಸೇರಿದಂತೆ ೧೦ ಜೋಡಿಗಳ ವಿವಾಹ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್‌ಜೆಎಂ ವಿದ್ಯಾಪೀಠದ ಕಾರ್‍ಯದರ್ಶಿ ಎ.ಜೆ.ಪರಮಶಿವಯ್ಯ, ಕೆಇಬಿ ಷಣ್ಮುಖಪ್ಪ, ರೆ. ಫಾದರ್ ಎಂ.ಎಸ್. ರಾಜು, ಪೈಲ್ವಾನ್ ತಿಪ್ಪೇಸ್ವಾಮಿ ಮೊದಲಾದವರಿದ್ದರು.