
ಕಲಬುರಗಿ: ಸೆ.14: ಯಾವುದೇ ಭಾಷೆ ಮೇಲು-ಕೀಳಲ್ಲ. ಪ್ರತಿಯೊಂದು ಭಾಷೆಗೆ ತನ್ನದೇ ಆದ ಮಹತ್ವವಿದೆ. ಮಾತೃಭಾಷೆಯನ್ನು ಹೃದಯಾಂತರಾಳದಿಂದ ಪ್ರೀತಿಸಿ, ಅನ್ಯ ಭಾಷೆಗಳನ್ನು ಗೌರವಿಸಬೇಕು. ಇದರಿಂದ ಭಾಷಾ ತಾರತಮ್ಯ ನಿವಾರಣೆಯಾಗಲು ಸಾಧ್ಯವಿದೆ. ಎಲ್ಲಾ ಭಾಷೆಗಳನ್ನು ಗೌರವಿಸುವ ಭಾಷಾ ಸಾಮರಸ್ಯ ಮೈಗೂಡಿಸಿಕೊಳ್ಳುವುದು ಪ್ರಸ್ತುತ ಸಂದರ್ಭದಲ್ಲಿ ಅಗತ್ಯವಾಗಿದೆ ಎಂದು ಹಿಂದಿ ಸಾಹಿತಿ ಸುನಿಲ್ ಚೌಧರಿ ಹೇಳಿದರು.
ನಗರದ ಎಸ್.ಬಿ.ಕಾಲೇಜು ಎದುರುಗಡೆಯಿರುವ ‘ಕೊಹಿನೂರ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಗುರುವಾರ ಜರುಗಿದ ‘ರಾಷ್ಟ್ರೀಯ ಹಿಂದಿ ದಿನಾಚರಣೆ’ಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಚಿಂತಕ ರವಿ ಬಿರಾಜಾದಾರ ಮಾತನಾಡಿ, ಹಿಂದಿ ಭಾಷೆಯು ರಾಷ್ಟಭಾಷೆಯಾಗಿದ್ದು, ಸರಳ ಹಾಗೂ ಸುಂದರವಾಗಿದೆ. ಇದು ಗ್ರಾಮೀಣ ಪ್ರದೇಶದ ಜನಸಾಮಾನ್ಯರು ಒಳಗೊಂಡಂತೆ ಎಲ್ಲರಿಗೂ ಅರ್ಥವಾಗುವ, ಮಾತನಾಡುವ ಭಾಷೆಯಾಗಿದ್ದು, ಇದು ದೇಶದ ಉದ್ದಗಲಕ್ಕೂ ವ್ಯಾಪಿಸಿದೆ. ಹಿಂದಿ ಭಾಷೆಯು ನಮ್ಮ ದೇಶದ ಸಂಸ್ಕøತಿ, ಪರಂಪರೆಯ ರಾಯಭಾರಿಯಾಗಿ ಪ್ರತಿನಿಧಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ, ಸಂಸ್ಥೆಯ ಕಾರ್ಯದರ್ಶಿ ಹಾಗೂ ಪ್ರಾಚಾರ್ಯರಾದ ಭೀಮಾಶಂಕರ ಎಸ್.ಘತ್ತರಗಿ, ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದಾರ, ಪ್ರಮುಖರಾದ ಜಯಪ್ರಕಾಶ ಕಟ್ಟಿಮನಿ, ಮಂಗಲಾ ಯಾಧವ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.