ಭಾಷಾ ತಾರತಮ್ಯ ವಿರೋಧಿಸುವ ಅಗತ್ಯ ಪ್ರತಿಪಾದನೆ

ಬೆಂಗಳೂರು.ಜ೧೫:ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಭಾಷಾ ತಾರತಮ್ಯ ಮಾಡುತ್ತಿರುವುದನ್ನು ನಾವು ವಿರೋಧಿಸಬೇಕಾದ ಅಗತ್ಯವಿದೆ ಎಂದು ಖ್ಯಾತ ಸಾಹಿತಿ ಡಾ.ಕೆ ಮರುಳಸಿದ್ದಪ್ಪ ಅವರು ಕರೆ ಕೊಟ್ಟರು.
ಕನ್ನಡ ಸಂಘರ್ಷ ಸಮಿತಿ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ಅವರ ೧೧೭ನೆಯ ಹುಟ್ಟುಹಬ್ಬ ಹಾಗೂ ಪ್ರಶಸ್ತಿಗಳ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಕುವೆಂಪು ಹುಟ್ಟುಹಬ್ಬ ಆಚರಿಸಿ ಅವರನ್ನು ನೆನೆಸಿಕೊ೦ಡರೆ ಸಾಲದು. ಅವರ ಆದರ್ಶಗಳನ್ನು ನಾವು ಅನುಸರಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು.ಕುವೆಂಪು ಅವರು ಅವರ ಕೃತಿಗಳಲ್ಲಿ ವೈಚಾರಿಕತೆಗೆ ಒತ್ತುಕೊಟ್ಟಿದ್ದು, ಪೌರಾಣಿಕ ವಸ್ತುಗಳನ್ನು ಆಯ್ಕೆ ಮಾಡಿಕೊಂಡು ಸಮಕಾಲೀನ ಸಂಗತಿಗಳನ್ನು ಸಮೀಕರಿಸಿದ್ದಾರೆ ಎಂದರು.
ಎಲ್.ಎನ್. ಮುಕುಂದರಾಜ್ ಅವರಿಗೆ ಕುವೆಂಪು ಅನಿಕೇತನ ಪ್ರಶಸ್ತಿ, ಕೆ.ಆರ್. ಯಶಸ್ವಿನಿ ಅವರಿಗೆ ಕುವೆಂಪು ಯುವಕವಿ ಪ್ರಶಸ್ತಿ ಹಾಗೂ ಸಂಗಮೇಶ ಉಪಾಸೆ ಅವರಿಗೆ ನ೦. ನ೦ಜಪ್ಪ ಚಿರಂತನ ಪ್ರಶಸ್ತಿ ಪ್ರದಾನಮಾಡಲಾಯಿತು.
ಪ್ರಶಸ್ತಿ ಪುರಸ್ಕೃತ ಸಂಗಮೇಶ ಉಪಾಸೆ ಅವರು ಮಾತನಾಡಿ, ಅವರಿಗೆ ನೀಡಿದ್ದ ನಗದು ರು.೫ ಸಾವಿರದ ಜೊತೆಗೆ ೧ ಲಕ್ಷ ರು.ಗಳನ್ನು ಅವರ ತ೦ದೆಯವರ ಹೆಸರಿನಲ್ಲಿ ಬೆ೦ಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ನಿಧಿ ಸ್ಥಾಪಿಸಲು ಘೋಷಿಸಿ ಪ್ರತಿ ವರ್ಷ ವೈಚಾರಿಕ ಕೃತಿಕಾರರಿಗೆ ಪ್ರಶಸ್ತಿ ನೀಡುವ೦ತೆ ನಗರ ಜಿಲ್ಲಾ ಕಸಾಪ ಅಧ್ಯಕ್ಷ ಎಂ ಪ್ರಕಾಶ ಮೂರ್ತಿ ಅವರಿಗೆ ನೀಡಿದರು.
ಕಾರ್ಯಕ್ರಮದಲ್ಲಿ ರಾಮಣ್ಣ ಎಚ್ ಕೋಡಿಹೊಸಹಳ್ಳಿ, ರತ್ನಾಕಾಳೆಗೌಡ, ಎ.ಎಸ್. ನಾಗರಾಜ ಸ್ಸಾಮಿ, ಎ೦. ಪ್ರಕಾಶ ಮೂರ್ತಿ, ರಾಜಕುಮಾರ್ ಅವರು ಉಪಸ್ಥಿತರಿದ್ದರು.