ಭಾಷಣ ಭರವಸೆಯಿಂದ ಅಭಿವೃದ್ಧಿ ಸಾಧ್ಯವಿಲ್ಲ

ಬೆಂಗಳೂರು,ಮಾ.೧೧:ಕೇವಲ ಭರವಸೆ, ಭಾಷಣಗಳಿಂದ ಹಿಂದುಳಿದವರ ಅಭಿವೃದ್ಧಿ ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷ ಹಿಂದುಳಿದವರ ಅಭಿವೃದ್ಧಿಗೆ ಸರಿಯಾದ ಕಾರ್ಯಕ್ರಮಗಳನ್ನು ಜಾರಿ ಮಾಡದೆ ಇದ್ದದ್ದು, ಹಿಂದುಳಿದವರು ಹಿಂದುಳಿಯಲು ಕಾರಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ವಿಧಾನಸೌಧದ ಮುಂಭಾಗದಲ್ಲಿಂದು ಹಿಂದುಳಿದವರ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಅಭಿವೃದ್ಧಿ ನಿಗಮದ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿ ಮಾತನಾಡಿದ ಅವರು, ಕಾಂಗ್ರೆಸ್ ೭೫ ವರ್ಷಗಳಿಂದ ಹಿಂದುಳಿದವರ ಉದ್ಧಾರದ ಬಗ್ಗೆ ಭಾಷಣ ಮಾಡಿತ್ತು, ಭಾಷಣದಿಂದ ಹೊಟ್ಟೆ ತುಂಬಲ್ಲ, ಸೂಕ್ತ ಸಂದರ್ಭ ಹಾಗೂ ಸಮಯದಲ್ಲಿ ಜನಪರವಾದ ನಿಲುವು ತೆಗೆದುಕೊಳ್ಳುವವರೇ ನಿಜವಾದ ಹಿಂದುಳಿದ ವರ್ಗಗಳ ನಿಜವಾದ ನಾಯಕರು ಎಂದರು.
ನರೇಂದ್ರಮೋದಿ ಅವರು ಪ್ರಧಾನಿಯಾದ ಮೇಲೆ ಹಿಂದುಳಿದವರಿಗೆ ಹಲವು ಯೋಜನೆಗಳನ್ನು ಜಾರಿ ಮಾಡಿದರು. ಫಲಾನುಭವಿಗಳ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆ ಮಾಡುವ ಜಾರಿ ಮಾಡಿ ಸವಲತ್ತುಗಳು ಸಿಗುವಂತೆ ಮಾಡಿದರು ಎಂದರು.
ಹಿಂದುಳಿದ ವರ್ಗದವರಿಗೆ ಕಳೆದ ೭೫ ವರ್ಷಗಳಲ್ಲಿ ಸೂರು ಸಿಕ್ಕಿದ್ದರೆ, ಸ್ವಯಂ ಉದ್ಯೋಗಕ್ಕೆ ನೆರವಾಗಿದ್ದರೆ ಅವರ ಅಭಿವೃದ್ಧಿಯಾಗುತ್ತಿತ್ತು. ಆದರೆ, ಕಾಂಗ್ರೆಸ್ ಪಕ್ಷ ಅದ್ಯಾವುದನ್ನು ಮಾಡದೆ ಹಿಂದುಳಿದವರನ್ನು ಹಿಂದುಳಿಯಲು ಬಿಟ್ಟಿತ್ತು ಎಂದು ಟೀಕಿಸಿದರು.
ಸ್ವಾಭಿಮಾನದಿಂದ ಬದುಕುವಂತಹ ಕಾರ್ಯಕ್ರಮಗಳನ್ನು ನೀಡಿದಾಗ ಮಾತ್ರ ಹಿಂದುಳಿದವರ ಬದುಕು ಹಸನಾಗಲು ಸಾಧ್ಯ. ರಾಜ್ಯಸರ್ಕಾರ ಹಿಂದುಳಿದವರಿಗಾಗಿ ಹಲವು ಯೋಜನೆಗಳನ್ನು ಜಾರಿ ಮಾಡಿದೆ. ಹಾಸ್ಟೆಲ್, ವಿದ್ಯಾಸಿರಿ, ಗಂಗಾಕಲ್ಯಾಣ ಹೀಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.
ಕುರುಬರಟ್ಟಿ, ಗೊಲ್ಲರಹಟ್ಟಿ, ಲಂಬಾಣಿ ಸಮುದಾಯಕ್ಕೆ ಇನ್ನು ೧೦ ದಿನಗಳಲ್ಲಿ ೧ ಲಕ್ಷ ಹಕ್ಕುಪತ್ರ ನೀಡುವ ಗುರಿ ಇಟ್ಟುಕೊಂಡಿದ್ದೇವೆ ಎಂದು ಅವರು ಹೇಳಿದರು.
ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ವಿವಿಧ ನಿಗಮಗಳಿಂದ ೯೦೦ ಕೋಟಿ ರೂ.ಗಳನ್ನು ೧.೧೪ ಲಕ್ಷ ಫಲಾನುಭವಿಗಳಿಗೆ ಬಿಡುಗಡೆ ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕಿ ರೂಪಾಲಿ ನಾಂiiಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.