ಭಾವೈಕ್ಯತೆ ಸಾರುವ ಮೊಹರಂ – ಡಿವೈಎಸ್ ಪಿ


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜು 27 :- ಹಿಂದೂ – ಮುಸ್ಲಿಂ ಸೇರಿ ನಡೆಸುವ ಮೊಹರಂ ಹಬ್ಬವು ಭಾವೈಕ್ಯತೆಯನ್ನು ಸಾರುತ್ತಿದ್ದು ಶಾಂತಿಯುತ ಆಚರಣೆಗೆ ಎಲ್ಲರೂ ಮುಂದಾಗುವಂತೆ ಕೂಡ್ಲಿಗಿ ಡಿವೈ ಎಸ್ ಪಿ ಮಲ್ಲೇಶಪ್ಪ ಮಲ್ಲಾಪುರೆ ತಿಳಿಸಿದರು.
ಅವರು ಪಟ್ಟಣದ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಕರೆಯಲಾದ ಸಾರ್ವಜನಿಕರ ಮೊಹರಂ ಹಬ್ಬದ ಆಚರಣೆಯ ಶಾಂತಿಸಭೆಯ ಅಧ್ಯಕ್ಷತೆವಹಿಸಿ ಮಾತನಾಡುತ್ತ  ಮೊಹರಂ ಹಬ್ಬವು ಶಾಂತಿಯ ಸಂಕೇತವಾಗಬೇಕು ಕಿಡಿಗೇಡಿಗಳು ಯಾರಾದರೂ ಗೊಂದಲ, ಗಲಭೆ  ಮೂಡಿಸಿದಲ್ಲಿ ಮುಲಾಜಿಲ್ಲದೆ ಅಂತವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕೂಡ್ಲಿಗಿ ಸಿಪಿಐ ವಸಂತ ವಿ ಅಸೋದೆ ಮಾತನಾಡಿ ಮೊಹರಂ ಹಬ್ಬದಲ್ಲಿ ಕತ್ತಲರಾತ್ರಿಯಂದು ಹಾಕುವ ಬೆಂಕಿಗೆ ಕಟ್ಟಿಗೆ ತಂದುಹಾಕುವ ಸಂಪ್ರದಾಯವಿದ್ದು ಇದರಿಂದ ಕೆಲವರು ಬೆಳೆದ ಮರಗಳನ್ನು ಕಡಿದು ತಂದು ಬೆಂಕಿಗೆ ಹಾಕುವ ಬಗ್ಗೆ ತಿಳಿದಿದ್ದು ಇಂತಹ ಪರಿಸರ ಹಾಳು ಮಾಡುವ ಬಗ್ಗೆ ಯಾರು ಮುಂದಾಗದಂತೆ ಯುವಕರಿಗೆ ಕಿವಿಮಾತು ಹೇಳಿ ಪರಿಸರ ಹಾಳು ಮಾಡಿ ನಿಮ್ಮ ಅಮೂಲ್ಯವಾದ ಆರೋಗ್ಯ ಹಾಳು ಮಾಡಿಕೊಳ್ಳದೆ ಗಿಡಗಳನ್ನು ಕಡಿಯದೆ ಪರಿಸರ ಉಳಿಸಿ ಬೆಳೆಸಿ ಆ ಪರಿಸರ ನಿಮ್ಮ ಆರೋಗ್ಯಕ್ಕೆ ರಕ್ಷಾ ಕವಚವಾಗುತ್ತದೆ ಎಂದರು.
ಕೂಡ್ಲಿಗಿ ಪಿಎಸ್ಐ ಧನುಂಜಯ ಮಾತನಾಡಿ ಮೊಹರಂ ಹಬ್ಬವು ಕೂಡ್ಲಿಗಿ ಹಾಗೂ ಠಾಣಾ ವ್ಯಾಪ್ತಿಯಲ್ಲಿ ಶಾಂತಿಯುತವಾಗಿ ನಡೆಯುತ್ತಿದ್ದು ಅದೇ ರೀತಿಯಾಗಿ ಈ ಬಾರಿಯೂ ಶಾಂತಿಯ ಸಂಕೇತವಾಗಿ ಮೊಹರಂ ಹಬ್ಬ ಆಚರಿಸಿ ಹಾಗೂ ಪಟ್ಟಣದಲ್ಲಿ ಜರುಗುವ ಮೊಹರಂ ಕೊನೆ ದಿನ, ಕತ್ತಲರಾತ್ರಿಯಂದು ಜನ ಸಂದಣಿಯಲ್ಲಿ ಹಬ್ಬದಚಾರಣೆ ಜರುಗಲಿದ್ದು ಈ ಸಂದರ್ಭದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡುವುದಾಗಿ ತಿಳಿಸಿದ ಅವರು  ನಿರಂತರ ಮಳೆ ಬರುತ್ತಿರುವುದರಿಂದ ಶನಿವಾರ ಜರುಗುವ ಕತ್ತಲರಾತ್ರಿ ಹಾಗೂ ಭಾನುವಾರ ಜರುಗುವ ಮೊಹರಂ ಕೊನೆದಿನದ  ದೇವರ ಮೆರವಣಿಗೆಯ  ದೇವರ ಕಾರ್ಯ ಪೂಜೆ ಪುನಸ್ಕಾರಗಳನ್ನು ಬೇಗನೆ ಮುಗಿಸುವಂತೆ ಸಭೆಯಲ್ಲಿ ಪಿಎಸ್ಐ ಧನುಂಜಯ ತಿಳಿಸಿದರು.
ಸಭೆಯಲ್ಲಿ ಕೂಡ್ಲಿಗಿ ನಾಗರೀಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ, ವಾಲ್ಮೀಕಿ ಮಹಾಸಭಾದ ತಾಲೂಕು ಅಧ್ಯಕ್ಷ ಎಸ್ ಸುರೇಶ, ವೆಂಕಟೇಶ, ಸಕ್ರಪ್ಪ, ಬಿ ಬಿ ತಾಂಡಾದ ಕಾಳಿಬಾಯಿ ಇಸ್ಮಾಯಿಲ್,ಸೇರಿದಂತೆ ಇತರರಿದ್ದರು,